ಹೊಸದಿಲ್ಲಿ:
ಇತ್ತೀಚಿನ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿರಬಹುದು ಎಂದು ತಾವು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯಿಸದಿರುವ ಭಾರತೀಯ ಚುನಾವಣಾ ಆಯೋಗದ ಧೋರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಐಎಎಸ್ ಅಧಿಕಾರಿ ಇ.ಎ.ಎಸ್.
ಶರ್ಮ, “ಮೋದಿ ಚುನಾವಣಾ ಆಯೋಗ ಅಥವಾ ಸಾರ್ವಜನಿಕರಿಗೆ ಉತ್ತರದಾಯಿಗಳಲ್ಲವೆ?” ಎಂದು ಪ್ರಶ್ನಿಸಿದ್ದಾರೆ.ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದ ಭಾಷಣದ ಬಗ್ಗೆ ಗಮನ ಸೆಳೆಯಲು ಶರ್ಮ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.
ಆ ಭಾಷಣದಲ್ಲಿ ಪ್ರಧಾನಿ ಮೋದಿ, ಹಿಂದೂಗಳು ನಾರಿ ಶಕ್ತಿ ಮತ್ತು ಮಾತೃ ಶಕ್ತಿಯಲ್ಲಿ ನಂಬಿಕೆ ಹೊಂದಿದ್ದಾರೆ. ಆದರೆ, ಇಂಡಿಯಾ ಮೈತ್ರಿಕೂಟವು ಶಕ್ತಿಯನ್ನು ನಾಶ ಮಾಡುವ ಹೇಳಿಕೆ ನೀಡುವ ಮೂಲಕ ಹಿಂದುತ್ವಕ್ಕೆ ಅವಮಾನವೆಸಗಿದೆ ಎಂದು ಹೇಳಿದ್ದರು ಎಂದು ವರದಿಯಾಗಿತ್ತು.
ಆ ಭಾಷಣದ ವಿಡಿಯೊದಲ್ಲಿ, “ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ಇಂಡಿಯಾ ಮೈತ್ರಿಕೂಟವು ಹಿಂದೂ ಧರ್ಮವು ವಿಶ್ವಾಸವಿರಿಸಿರುವ ಶಕ್ತಿಯನ್ನು ನಾಶ ಮಾಡಲು ಬಯಸುತ್ತದೆ ಎಂದು ಬಹಿರಂಗವಾಗಿ ಪ್ರಕಟಿಸಿದೆ. ತಮಿಳುನಾಡಿನಲ್ಲಿರುವ ಎಲ್ಲರಿಗೂ ಹಿಂದೂ ಧರ್ಮದಲ್ಲಿ ಶಕ್ತಿ ಎಂದರೇನು ಎಂದು ತಿಳಿದಿದೆ” ಎಂದು ಹೇಳುತ್ತಿರುವುದನ್ನು ಕೇಳಬಹುದಾಗಿದೆ.
ಈ ಹೇಳಿಕೆಗಳು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿದ್ದು, ಒಂದು ವೇಳೆ ಈ ಹೇಳಿಕೆಗಳು ಸತ್ಯವೆಂದು ಕಂಡು ಬಂದರೆ, ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗವನ್ನು ಶರ್ಮ ಆಗ್ರಹಿಸಿದ್ದರು.
ಇಲ್ಲಿಯವರೆಗೆ ತಮ್ಮ ದೂರಿಗೆ ಯಾವುದೇ ಪ್ರತಿಕ್ರಿಯೆ ಬಾರದಿರುವುದರಿಂದ, ಸೋಮವಾರ (ಮಾರ್ಚ್ 25) ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಶರ್ಮ, ನನ್ನ ದೂರಿನ ಕುರಿತು ಕ್ರಮ ಕೈಗೊಳ್ಳುವ ಆಯ್ಕೆ ಮಾಡಲಾಗಿದೆಯೊ ಅಥವಾ ಯಾವುದಾದರೂ ಕಾರಣಕ್ಕೆ ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಭಯಗೊಂಡಿದೆಯೊ ಎಂದು ಪ್ರಶ್ನಿಸಿದ್ದಾರೆ.
ಮಾದರಿ ನೀತಿ ಸಂಹಿತೆಯ ಒಂದು ನಿಯಮದ ಪ್ರಕಾರ, ಮತ ಗಳಿಸಲು ಜಾತಿ ಅಥವಾ ಕೋಮು ಭಾವನೆಯ ಆಧಾರದಲ್ಲಿ ಮತ ಯಾಚನೆ ಮಾಡಬಾರದು ಎಂದಿದೆ.