ಕೊರಟಗೆರೆ :
ತಾಲ್ಲೂಕಿನಲ್ಲಿ ಕದ್ದ 7 ಕುರಿಗಳನ್ನು ದೂರದ ಚಿತ್ರದುರ್ಗ ಸಂತೆಯಲ್ಲಿ ಮಾರಿದರು. ಅವೇ ಕುರಿಗಳು ಮತ್ತೆ ತಾಲ್ಲೂಕಿನ ಅಕ್ಕಿರಾಂಪುರ ಸಂತೆಯಲ್ಲಿ ಪತ್ತೆಯಾದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ತುಂಬಾಡಿಯ ಹನುಮೇಶ್ 2, ಮಲ್ಲೇಶ್ ಪುರದ ಮುರಳೀಧರ್ ಅವರಿಂದ 2, ರಾಮಕೃಷ್ಣಯ್ಯ ಎಂಬುವರ 3 ಕುರಿಗಳು ಸೇರಿದಂತೆ ಒಟ್ಟು 7 ಕುರಿಗಳನ್ನು ಕಳೆದ 5 ದಿನಗಳ ಹಿಂದೆ ಕದ್ದು ಅಕ್ಕಿರಾಂಪುರ ಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ಪಕ್ಕದ ಮನೆಯವರೊಬ್ಬರು ಅದೇ ಸಂತೆಯಲ್ಲಿ ತಮ್ಮ ಕುರಿಗಳನ್ನು ಮಾರುತ್ತಿರುವಾಗ ಅನುಮಾನಗೊಂಡು ತಮ್ಮೂರಿನ ಕದ್ದ ಕುರಿಗಳಿವು ಎಂದು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ.
ಕೆಂಪಯ್ಯ ಎಂಬ ಇದೇ ತಾಲ್ಲೂಕಿನ ಅರಸಾಪುರ ಗ್ರಾಮದ ಅಗ್ರಹಾರ ಬಳಿಯ ಗಿರಚೀಕನಹಳ್ಳಿ ಗ್ರಾಮದ ವ್ಯಾಪಾರಿಯು ಚಿತ್ರದುರ್ಗದ ಕುರಿ ಸಂತೆಯಲ್ಲಿ ಕೊಂಡು ಕೊರಟಗೆರೆ ಅಕ್ಕಿರಾಂಪುರ ಸಂತೆಯಲ್ಲಿ ಮಾರಾಟ ಮಾಡುತ್ತಿರುವಾಗ ಪ್ರಕರಣ ಬೆಳಕಿಗೆ ಬಂದಿದ್ದು, ಕಳ್ಳತನವಾದ ಪಕ್ಕದ ಮನೆಯ ವ್ಯಕ್ತಿಯು ಕುರಿಗಳನ್ನು ಗಮನಿಸಿ ಕಳವಾದ ಕುರಿ ಮಾಲೀಕರನಿಗೆ ದೂರವಾಣಿ ಮೂಲಕ ವಿಚಾರ ಮುಟ್ಟಿಸಿದರು. ನಂತರ ಮಾಲೀಕರನ್ನು ಕಂಡು ಕೂಡಲೆ ಕುರಿಗಳು ಸಂತೆಯಲ್ಲಿ ಅರಚಿಕೊಂಡು ಮಾಲೀಕನ ಬಳಿ ಹೋದವು. ಕುರಿಗಳ ಪತ್ತೆಯ ನಂತರ ಅಪರಾಧಿಗಳ ಪತ್ತೆಗೆ ಕೊರಟಗೆರೆ ಪೊಲೀಸ್‍ನವರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‍ಐ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ