ಶಿರಾ ನಗರಸಭೆಯ ಅಧ್ಯಕ್ಷ ಗಾದಿಗೆ ಕ್ಷಣ ಗಣನೆ

ಶಿರಾ:


     ಮೂರೂ ಪಕ್ಷಗಳ ನಗರಸಭಾ ಸದಸ್ಯರು, ಮುಖಂಡರ ನಡುವೆ ಗದ್ದುಗೆಯ ಗುದ್ದಾಟ

ನಾಳೆ (ಮಾ.10) ಇಲ್ಲಿನ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯು ಈಗ ಕಾಂಗ್ರೆಸ್, ಜೆ.ಡಿ.ಎಸ್. ಹಾಗೂ ಬಿ.ಜೆ.ಪಿ. ಈ ಮೂರು ಪಕ್ಷಗಳ ಮುಖಂಡರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಆಯ್ಕೆಯ ಸಂಬಂಧದ ವಿಚಾರವು ಎಲ್ಲರಿಗೂ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಡಿ.27 ರಂದು ನಡೆದ ಶಿರಾ ನಗರಸಭೆಯ ಚುನಾವಣೆಯಲ್ಲಿ 30 ವಾರ್ಡುಗಳ ಅಭ್ಯರ್ಥಿಗಳು ವಿವಿಧ ಪಕ್ಷಗಳಿಂದ ಆಯ್ಕೆಗೊಂಡಿದ್ದು, ಯಾವ ಪಕ್ಷಕ್ಕೂ ನಿಚ್ಚಳ ಬಹುಮತ ಲಭ್ಯವಾಗದ ಪರಿಣಾಮ ಅತಂತ್ರ ಸ್ಥಿತಿ ಉಂಟಾಗಿದೆ. ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ಆಯ್ಕೆಗೊಂಡಿರುವ 8 ಮಂದಿ ಸದಸ್ಯರ ಬೆನ್ನಿಗೆ ಬಿದ್ದು ಈ ಮೂರೂ ಪಕ್ಷಗಳ ಮುಖಂಡರು ಅಂಟಿಕೊಂಡುಬಿಟ್ಟಿದ್ದಾರೆ.

ಅಧ್ಯಕ್ಷ ಸ್ಥಾನವು ಪ.ಜಾತಿಗೂ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೂ ಮೀಸಲಾದ ಪರಿಣಾಮ ಸಾಮಾನ್ಯ ವರ್ಗದ ಕ್ಷೇತ್ರದಿಂದ ಆಯ್ಕೆಗೊಂಡ ವಿವಿಧ ಪಕ್ಷಗಳ ಸದಸ್ಯರಲ್ಲಿ ಅಷ್ಟೇನೂ ಉತ್ಸಾಹ ಕಾಣಬರದಿದ್ದರೂ, ತಮ್ಮ ತಮ್ಮ ಪಕ್ಷಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪರ ಕೈ ಎತ್ತಲು ಮೌನ ಸಮ್ಮತಿ ಸೂಚಿಸುವುದು ಅನಿವಾರ್ಯವೂ ಆಗಿದೆ.

ಕಾಂಗ್ರೆಸ್ ಪಕ್ಷವು 11 ಸ್ಥಾನಗಳನ್ನು, ಜೆ.ಡಿ.ಎಸ್. 7 ಸ್ಥಾನಗಳನ್ನು, ಬಿ.ಜೆ.ಪಿ. ಪಕ್ಷವು 4 ಸ್ಥಾನಗಳನ್ನು ಹೊಂದಿದ್ದು ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಗೊಂಡ 8 ಮಂದಿ ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯ ರಚನೆ ಮಾ.10ರಂದು ಆಗಲೇಬೇಕಿದ್ದು, ಈ ಕ್ಷೇತ್ರದ ಪ್ರಬಲ ಮುಖಂಡರಿಗೆ ನಾಳೆ ನಡೆಯುವ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಿಂದ ಇಂದೇ ತಳಮಳ ಆರಂಭಗೊಂಡಿದೆ.

11 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಪಕ್ಷವು ಕಾಂಗ್ರೆಸ್ ಪಕ್ಷದ ಟಿಕೆಟ್ ಲಭ್ಯವಾಗದೆ ಸ್ವತಂತ್ರವಾಗಿ ನಿಂತು ಛಲದಿಂದ ಆಯ್ಕೆಗೊಂಡ 6 ಮಂದಿ ಸದಸ್ಯರನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲು ಕಸರತ್ತು ನಡೆಸಿದೆ. 7 ಸ್ಥಾನಗಳನ್ನು ಪಡೆದ ಜೆ.ಡಿ.ಎಸ್. ಪಕ್ಷವು ಬಿ.ಜೆ.ಪಿ.ಯ. 4 ಮಂದಿ ಸದಸ್ಯರನ್ನು ಕೂಡಿಕೆ ಮಾಡಿಕೊಂಡು ಅಧಿಕಾರದ ಗದ್ದುಗೆ ಏರಲು ಕಸರತ್ತು ನಡೆಸಿದೆ.

ಹೇಗಾದರೂ ಸರಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ತೆಕ್ಕೆಗೆ ಹಾಕಿಕೊಳ್ಳಲೇಬೇಕೆಂಬ ಹಠದಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಒಂದೆಡೆ ರಾಜಕೀಯ ದಾಳ ಉರುಳಿಸುತ್ತಿದ್ದರೆ, ಇನ್ನೊಂದೆಡೆ ಬಿ.ಜೆ.ಪಿ.ಯ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ, ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡ ಹಾಗೂ ಸಂಸದ ವೈ.ಎ.ನಾರಾಯಣಸ್ವಾಮಿ ಹೇಗಾದರೂ ಸರಿ ಅಧ್ಯಕ್ಷ ಸ್ಥಾನವನ್ನು ಬಿ.ಜೆ.ಪಿ.ಗೆ ಒಲಿಸಿಕೊಳ್ಳಲು ಜೆ.ಡಿ.ಎಸ್. ಮೈತ್ರಿ ಮಾಡಿಕೊಂಡು ತಂತ್ರಗಾರಿಕೆ ನಡೆಸಿದ್ದಾರೆ.

ಹೇಗಾದರೂ ಸರಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಗದ್ದುಗೆ ಲಭ್ಯವಾಗಲು ಬಿಡಬಾರದೆಂಬ ಹಠದಿಂದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಕೇವಲ 4 ಸ್ಥಾನ ಪಡೆದ ಬಿ.ಜೆ.ಪಿ. ಸದಸ್ಯರನ್ನು ಒಟ್ಟುಗೂಡಿಸಿಕೊಂಡಿದ್ದಾರೆ. ದಾವಣಗೆರೆ ವ್ಯಾಪ್ತಿಯಲ್ಲಿದ್ದ ವಿ.ಪ. ಸದಸ್ಯ ಚಿದಾನಂದ್ ಎಂ.ಗೌಡರ ಮತವನ್ನು ಹಾಗೂ ಬೆಂಗಳೂರಿನಲ್ಲಿದ್ದ ಜೆ.ಡಿ.ಎಸ್. ಪಕ್ಷದ ವಿ.ಪ. ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಅವರ ಮತವನ್ನು ಶಿರಾ ನಗರಸಭಾ ವ್ಯಾಪ್ತಿಗೆ ಕಳೆದ ಕೆಲ ದಿನಗಳ ಹಿಂದಷ್ಟೆ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ.

ಬಿ.ಜೆ.ಪಿ. ಪಕ್ಷದ 4 ಮತಗಳ ಜೊತೆಗೆ ಶಾಸಕರು, ಇಬ್ಬರು ವಿ.ಪ. ಸದಸ್ಯರು ಹಾಗೂ ಸಂಸದ ಎ.ನಾರಾಯಣಸ್ವಾಮಿ ಅವರ ಮತ ಹಾಗೂ ಜೆ.ಡಿ.ಎಸ್. ಪಕ್ಷದ 7 ಸದಸ್ಯರ ಮತಗಳನ್ನೂ ಒಟ್ಟುಗೂಡಿಸಿಕೊಂಡು ಒಟ್ಟು 15 ಮಂದಿ ಬಲದಿಂದ ಹೊಂದಾಣಿಕೆ ಮಾಡಿಕೊಂಡು, ಅಧಿಕಾರ ಹಿಡಿಯಲು ಕಸರತ್ತು ನಡೆಸಿದ್ದರೂ, ಇನ್ನೂ ಒಬ್ಬ ಸದಸ್ಯರ ಅಗತ್ಯವಂತೂ ಇದೆಯಾದ್ದರಿಂದ ಪಕ್ಷೇತರ ಸದಸ್ಯರಿಗೆ ಈ ಜೋಡಿ ಪಕ್ಷಗಳು ಮಣೆ ಹಾಕಲು ತಂತ್ರ ನಡೆಸಿವೆ.

ಅತ್ತ ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಜಯಚಂದ್ರ ಕೂಡ ಸುಮ್ಮನೆ ಕುಳಿತಿಲ್ಲ. 11 ಮಂದಿ ಸದಸ್ಯರ ಜೊತೆಗೆ ಟಿಕೆಟ್ ವಂಚಿತರಾಗಿ ಆಯ್ಕೆಗೊಂಡ ತಮ್ಮದೇ ಪಕ್ಷದ 4 ಮಂದಿ ಸದಸ್ಯರನ್ನು ಒಟ್ಟಿಗೆ ಕೂಡಿಸಿಕೊಂಡಿದ್ದು, ಕಾಂಗ್ರೆಸ್ ಪಾಲಿಗೂ ಕೂಡ ಇದೀಗ 15 ಮಂದಿ ಸದಸ್ಯರ ಬಲ ಇರುವಂತೆ ಕಾಣಬರುತ್ತಿದೆ.

ಈ ಎರಡು ಬಣಗಳಿಗೂ ತಲಾ ಒಬ್ಬ ಸದಸ್ಯನ ಅಗತ್ಯವಂತೂ ಇದ್ದು ಆ ಒಬ್ಬ ನಗರಸಭೆಯ ಸದಸ್ಯ ಯಾರು ಎಂಬುದು ಎಲ್ಲರಿಗೂ ಕೌತುಕದ ಸಂಗತಿಯಾಗಿದೆ. ಈ ಎರಡು ಬಣಗಳಲ್ಲಿ ಒಂದು ಬಣಕ್ಕೆ ಕೈ ಎತ್ತಿ ಅಧಿಕಾರ ನೀಡುವ ಶಕ್ತಿ ಇರುವ ಆ ಸದಸ್ಯನನ್ನು ಸೆಳೆದು ಅಧಿಕಾರದ ಕುರ್ಚಿ ಗಟ್ಟಿ ಮಾಡಿಕೊಳ್ಳಲು ತರಾವರಿ ತಂತ್ರಗಾರಿಕೆಯೆ ನಡೆದಿದೆ.

ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಹಿಡಿದಲ್ಲಿ ಅಧ್ಯಕ್ಷ ಸ್ಥಾನವು ಪೂಜಾ ಪೆದ್ದರಾಜು ಅವರ ಪಾಲಾಗಲಿದ್ದು, ಉಪಾಧ್ಯಕ್ಷ ಸ್ಥಾನವು ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಗೊಂಡು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಿರುವ ಯಾವುದೇ ಸದಸ್ಯರಿಗೆ ವರವಾಗಿ ಪರಿಣಮಿಸಬಹುದು.

ಇತ್ತ ಜೆ.ಡಿ.ಎಸ್.-ಬಿ.ಜೆ.ಪಿ. ಮೈತ್ರಿ ಮಾಡಿಕೊಂಡಲ್ಲಿ ಅಧ್ಯಕ್ಷ ಸ್ಥಾನವು ಜೆ.ಡಿ.ಎಸ್. ಪಕ್ಷದ ಆಂಜನಪ್ಪ ಅವರ ಪಾಲಾಗುವುದು ಖಚಿತ ಎಂಬಂತೆ ಕಾಣುತ್ತಿದ್ದರೂ ಒಳಗೊಳಗೆ ಬಿ.ಜೆ.ಪಿ. ಪಕ್ಷವು ತನ್ನದೇ ಪಕ್ಷದ ಅಧ್ಯಕ್ಷ ಆಕಾಂಕ್ಷಿಗಳಾದ ರಂಗರಾಜು ಇಲ್ಲವೇ ಸ್ವಾತಿ ಅವರನ್ನು ಗದ್ದುಗೆಗೆ ಕೂರಿಲು ಒಳ ತಂತ್ರ ಹೆಣೆದಿದೆ.

ಸಂಸದ ನಾರಾಯಣಸ್ವಾಮಿ ಬಿ.ಜೆ.ಪಿ. ಸದಸ್ಯ ರಂಗರಾಜು ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನೊಂದೆಡೆ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಸ್ವಾತಿ ಪರವಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬಿ.ಜೆ.ಪಿ.-ಜೆ.ಡಿ.ಎಸ್. ಒಗ್ಗೂಡಿದ್ದರೂ ಅಧ್ಯಕ್ಷ ಸ್ಥಾನಕ್ಕೆ ಈವರೆಗೂ ಯಾರ ಹೆಸರನ್ನೂ ಸೂಚಿಸದೇ ಇರುವುದು ಒಗ್ಗೂಡಿರುವ ಸದಸ್ಯರಲ್ಲಿ ಆತಂಕಕ್ಕೂ ಕಾರಣವಾಗಿದೆ. ಒಂದು ವೇಳೆ ಅಧ್ಯಕ್ಷ ಸ್ಥಾನವನ್ನು ಜೆ.ಡಿ.ಎಸ್. ಪಕ್ಷದ ಆಂಜಿನಪ್ಪ ಅವರಿಗೆ ಬಿಟ್ಟುಕೊಟ್ಟಲ್ಲಿ ಉಪಾಧ್ಯಕ್ಷ ಸ್ಥಾನವು ಬಿ.ಜೆ.ಪಿ. ಪಕ್ಷದ ಉಮಾ ಅವರ ಪಾಲಾಗುವುದು ಖಚಿತವೆಂಬಂತಾಗಿದೆ.

ಒಟ್ಟಾರೆ ಶಿರಾ ನಗರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯು ಸ್ವತಂತ್ರವಾಗಿ ಆಯ್ಕೆಗೊಂಡ ಸದಸ್ಯರ ನಿರ್ಧಾರದ ಮೇಲೆ ನಿಂತಿದ್ದು ಎಲ್ಲರ ಚಿತ್ತ ಸ್ವತಂತ್ರವಾಗಿ ನಿಂತು ಗೆದ್ದ 8 ಮಂದಿ ಸದಸ್ಯರ ನಿರ್ಧಾರದ ಮೇಲೆಯೇ ನಿಂತಿದೆ. ಕಳೆದ ಹತ್ತು ದಿನಗಳಿಂದಲೂ ಅಧ್ಯಕ್ಷ ಗಾದಿಗಾಗಿ ಏನೆಲ್ಲಾ ಕಸರತ್ತುಗಳು ಮೂರು ಪಕ್ಷಗಳಿಂದ ನಡೆದಿದ್ದರೂ ಅಂತಿಮ ದಿನವಾದ ಮಾ. 10 ರಂದು ಕ್ಷೇತ್ರದ ರಾಜಕೀಯ ಮುಖಂಡರು ಅಂದುಕೊಂಡಂತಹ ನಿಲುವುಗಳಲ್ಲಿ ಬಹುತೇಕ ಬದಲಾವಣೆಯೂ ಆಗಬಹುದು.

ಎರಡು ಬಣಗಳಿಗೂ ತಲಾ ಒಬ್ಬ ಸದಸ್ಯನ ಅಗತ್ಯವಂತೂ ಇದ್ದು, ಆ ಒಬ್ಬ ನಗರಸಭೆಯ ಸದಸ್ಯ ಯಾರು ಎಂಬುದು ಎಲ್ಲರಿಗೂ ಕೌತುಕದ ಸಂಗತಿಯಾಗಿದೆ. ಈ ಎರಡು ಬಣಗಳಲ್ಲಿ ಒಂದು ಬಣಕ್ಕೆ ಕೈ ಎತ್ತಿ ಅಧಿಕಾರ ನೀಡುವ ಶಕ್ತಿ ಇರುವ ಆ ಸದಸ್ಯನನ್ನು ಸೆಳೆದು ಅಧಿಕಾರದ ಕುರ್ಚಿ ಗಟ್ಟಿ ಮಾಡಿಕೊಳ್ಳಲು ತರಾವರಿ ತಂತ್ರಗಾರಿಕೆಯೆ ನಡೆದಿದೆ.

            –   ಬರಗೂರು ವಿರೂಪಾಕ್ಷ

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap