
ಗಡಿ ಭಾಗದ ಕಾಗವಾಡ ಸಮೀಪದ ಮೈಶಾಳ ಎಂಬ ಗ್ರಾಮದ ಬಳಿ ಇರುವ ಕರ್ನಾಟಕ ಚೆಕ್‌ಪೋಸ್ಟ್ ಬಳಿಯೇ ಶಿವಸೇನೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಬೆಂಗಳೂರಿನಲ್ಲಿ ಅವಮಾನ ಮಾಡಿ, ಈಗ ಬೆಳಗಾವಿಯಲ್ಲಿಯೂ ಅಗೌರವ ತೋರಿದೆ ಎಂದು ಆಪಾದಿಸಿ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದರು.
ಶಿವಾಜಿ ಮಹಾರಾಜರನ್ನು ಅವಮಾನ ಮಾಡುವುದು ಮುಂದುವರಿದಿದೆ. ಕರ್ನಾಟಕದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹಾಗೂ ಶಿವಸೇನೆ ಪ್ರಮುಖ ದಿ. ಬಾಳಾ ಠಾಕ್ರೆ ಅವರ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿರುವುದನ್ನು ಸರ್ಕಾರ ತಡೆಯುತ್ತಿಲ್ಲ. ಇನ್ನು ಮುಂದೆ ಕರ್ನಾಟಕದ ಒಳಗೆ ನುಗ್ಗಿ ಕನ್ನಡಿಗರನ್ನು ಅಟ್ಟಾಡಿಸುತ್ತೇವೆ ಎಂದು ಮಿರಜ್ ಶಿವಸೇನೆ ಮುಖಂಡ ಚಂದ್ರಕಾಂತ ಮೈಗೂರೆ ಕಿಡಿಕಾರಿದರು.
ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕನ್ನಡ ಬಾವುಟದ ಮೇಲೆ ನಾಯಿ ಮಲಗಿಸಿ, ಚಪ್ಪಲಿಯಿಂದ ಹೊಡೆದು, ಬಾವುಟ ಸುಟ್ಟು ಹಾಕಲಾಗಿತ್ತು. ಜತೆಗೆ ಮಿರಜ್, ಕೊಲ್ಲಾಪುರ, ಥಾಣೆಯಲ್ಲಿ ಕರ್ನಾಟಕದ ವಾಹನಗಳ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದ್ದರು. ಹೊಟೇಲ್, ಅಂಗಡಿಗಳ ಮೇಲಿರುವ ಕನ್ನಡ ಭಾಷೆಯ ಫಲಕಗಳನ್ನು ಹರಿದು ಹಾಕಿದ್ದರು.
