ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ : ಡಿಕೆ ಶಿವಕುಮಾರ್

ಬೆಂಗಳೂರು

     ಡಿಸೆಂಬರ್ 5ರಂದು ಹಾಸನದಲ್ಲಿ ನಡೆಯಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸ್ವಾಭಿಮಾನಿ ಸಮಾವೇಶದ ದಿಕ್ಕು ದೆಸೆಯೇ ಬದಲಾಗಿದೆ. ‘ಸಿದ್ದರಾಮೋತ್ಸವ 2.0’ ಎಂದೇ ಶುರುವಾಗಿದ್ದ ಈ ಸಮಾವೇಶ ಮುಖ್ಯಮಂತ್ರಿಗಳ ಪವರ್‌ ಶೋ ಎಂದೇ ಬಿಂಬಿತವಾಗುತ್ತಿತ್ತು.

    ಸಿದ್ದರಾಮಯ್ಯ ಬಣದ ಸಚಿವರೇ ಮುಂದೆ ನಿಂತು ಈ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಮಾಡುತ್ತಿದ್ದರು. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಬರೆದ ಅನಾಮಧೇಯ ಪತ್ರದ ನಂತರ ಎಲ್ಲವೂ ಬದಲಾಯಿತು. ನಂತರ ಪಕ್ಷದ ವತಿಯಿಂದಲೇ ಕಾರ್ಯಕ್ರಮ ಮಾಡುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದರು. ಈ ಎಲ್ಲಾ ಬೆಳವಣಿಗೆ ಬಳಿಕ ಇಡೀ ಕಾರ್ಯಕ್ರಮವನ್ನು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಓವರ್ ಟೇಕ್ ಮಾಡಿದ್ದಾರೆ.

    ಸಿದ್ದರಾಮಯ್ಯ ಬಣಕ್ಕೆ ಬಿಗ್ ಶಾಕ್ ಕೊಟ್ಟಿರುವ ಕನಕಪುರ ಬಂಡೆ, ಇದು ಪಕ್ಷದ ಸಮಾವೇಶ ಎಂದು ಹೇಳಿದ್ದಾರೆ. ನಿನ್ನೆ ಹಾಸನದಲ್ಲಿ ಖದ್ದು ಸಮಾವೇಶದ ಸ್ಥಳ ಪರಿಶೀಲಿಸಿದ್ದಾರೆ. ಸ್ವಾಭಿಮಾನಿ ಸಮಾವೇಶ ಎಂದಿದ್ದ ಹೆಸರನ್ನು ಜನಕಲ್ಯಾಣ ಸಮಾವೇಶ ಎಂದು ಬದಲಿಸಲಾಗಿದೆ. 

   ಈ ಮೊದಲು ಹಾಸನದ ಸಿದ್ದರಾಮಯ್ಯರ ಸಮಾವೇಶ 6 ಜಿಲ್ಲೆಗಳನ್ನು ಗುರಿಯಾಗಿಸಿ ಮಾಡಲಾಗುತ್ತಿದೆ ಎನ್ನಲಾಗಿತ್ತು. ಆದರೆ ಈಗ ಡಿಕೆ ಶಿವಕುಮಾರ್ ಆರು ಜಿಲ್ಲೆಗಳು ಅಲ್ಲ, ಹಾಸನ ಜಿಲ್ಲೆ ಮಾತ್ರ ಕೇಂದ್ರೀಕರಿಸಿ ಸಮಾವೇಶ ಮಾಡುತ್ತಿದ್ದೇವೆ ಎಂದಿದ್ದಾರೆ.

   ಹಾಸನಕ್ಕೆ ಬೇಟಿ ನೀಡಿ ತಯಾರಿ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಇದು ಕೇವಲ ಹಾಸನಕ್ಕೆ ಸೀಮಿತವಾದ ಕಾರ್ಯಕ್ರಮ. ಇಂತಹ ಕಾರ್ಯಕ್ರಮ ಎಲ್ಲಾ ಕಡೆ ನಡೆಯಲಿದೆ ಎಂದರು. ವಿಪಕ್ಷಗಳ ನಾಯಕರು ನಮ್ಮನ್ನು ಟೀಕೆ ಮಾಡುತ್ತಿದ್ದರು. ಆದರೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಜನರು ಉಪ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಬಿಜೆಪಿ ಜನರ ಭಾವನೆ ಜೊತೆ ರಾಜಕೀಯ ಮಾಡುತ್ತಿದೆ. ನಾವು ಜನರ ಬದುಕಿನ ಜೊತೆ ರಾಜಕೀಯ ಮಾಡುತ್ತೇವೆ. ಜನರಿಗಾಗಿ ನಮ್ಮ ಸರ್ಕಾರ ಬಂದ ನಂತರ ಹಲವು ಯೋಜನೆ ಜಾರಿ ಮಾಡಲಾಗಿದೆ. ಇದನ್ನು ಜನರಿಗೆ ಹೇಳಬೇಕಾಗಿದೆ ಹಾಗಾಗಿಯೇ ಈ ಸಮಾವೇಶ ನಡೆಸಲಾಗುತ್ತಿದೆ ಎಂದರು.