7 ಸ್ಥಾನಕ್ಕೆ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ : ಡಿಸಿಎಂ

ಬೆಂಗಳೂರು:

    ಮುಂಬರುವ ವಿಧಾನಪರಿಷತ್ ಚುನಾವಣೆಯ 7 ಸ್ಥಾನಕ್ಕೆ ಕಾಂಗ್ರೆಸ್‌ನಿಂದ 300ಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಹಂಚಿಕೆ ಮಾನದಂಡವನ್ನು ಪಕ್ಷದ ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳವಾರ ಹೇಳಿದ್ದಾರೆ.

   ವಿಧಾನಸಭೆಯ ಸದಸ್ಯರಿಂದ ಆಯ್ಕೆಯಾಗುವ ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂನ್ 13 ರಂದು ಚುನಾವಣೆ ನಡೆಯಲಿದ್ದು, ರಾಜ್ಯ ವಿಧಾನಸಭೆಯಲ್ಲಿ 135 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಕನಿಷ್ಠ ಏಳು ಎಂಎಲ್‌ಸಿ ಸ್ಥಾನಗಳನ್ನು ಗೆಲ್ಲುವ ಅವಕಾಶ ಪಡೆದಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ಇದೆ. ಯತೀಂದ್ರ ಅವರು 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ವರುಣಾ ವಿಧಾನಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದರು. ಹೀಗಾಗಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವುದು ಖಚಿತವಾಗಿದೆ.

   ಈ ಮಧ್ಯೆ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಗೆ ತೆರಳುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್ ಅವರು, 11 ಸ್ಥಾನಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಕೂಡ ದೆಹಲಿಯಲ್ಲಿದ್ದಾರೆ. 300 ಆಕಾಂಕ್ಷಿಗಳಿರುವುದರಿಂದ ಅಂತಿಮ ಪಟ್ಟಿಯನ್ನು ನಿರ್ಧರಿಸುವುದು ಕಾಂಗ್ರೆಸ್‌ಗೆ ಕಷ್ಟಕರವಾಗಿದೆ ಎಂದು ಹೇಳಿದರು.

   ಆಕಾಂಕ್ಷಿಗಳಿದ್ದಾರೆ. ಈ ಬಾರಿ ಎಲ್ಲಾ ವರ್ಗದವರಿಗೆ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ. ಎಲ್ಲರೂ ಬ್ಲಾಕ್, ಜಿಲ್ಲಾ, ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ. ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿದಂತೆ ಎಲ್ಲಾ ಕಡೆಯಿಂದ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇದೆ. ಕೆಲವು ಸ್ಥಾನಗಳಲ್ಲಿ ಹಾಲಿ ಸದಸ್ಯರು ಇದ್ದಾರೆ. ಹೀಗಾಗಿ ಈ ಬಾರಿ ಕಷ್ಟಕರ ಪರಿಸ್ಥಿತಿ ಎದುರಾಗಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡಲಿದೆ ಕಾದು ನೋಡಬೇಕಿದೆ ಎಂದು ತಿಳಿಸಿದರು.

   ಪ್ರಸ್ತುತ ಏಳು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪಕ್ಷಕ್ಕಾಗಿ ದುಡಿದವರ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದೇನೆ. ಮೊದಲ ಸುತ್ತಿನ ಸಭೆ ಮುಗಿದಿದೆ. ಮುಂದೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಉನ್ನತ ನಾಯಕರನ್ನು ಭೇಟಿ ಮಾಡುತ್ತೇವೆ. ಕಳೆದ ಚುನಾವಣೆಯಲ್ಲಿ ನಾಯಕರ ಸಾಧನೆ ಮತ್ತು ಪಕ್ಷಕ್ಕಾಗಿ ಅವರ ತ್ಯಾಗದಂತಹ ಹಲವಾರು ಮಾನದಂಡಗಳನ್ನು ಕಾಂಗ್ರೆಸ್ ಪರಿಶೀಲಿಸುತ್ತದೆ ಎಂದರು.

   ಹಾಲಿ ಶಾಸಕರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿ, ಚುನಾವಣೆ ವೇಳೆ ಒಬ್ಬ ನಾಯಕರಿಗೆ ಭರವಸೆ ನೀಡಿದ್ದನ್ನು ಹೊರತುಪಡಿಸಿ ಯಾವುದೇ ಶಾಸಕರ ಕುಟುಂಬ ಸದಸ್ಯರು ಪಟ್ಟಿಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

   ಏತನ್ಮಧ್ಯೆ, ಕರ್ನಾಟಕದ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಡಾ ಜಿ ಪರಮೇಶ್ವರ ಅವರು ಹೆಸರುಗಳನ್ನು ಅಂತಿಮಗೊಳಿಸುವ ಮೊದಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ಹಿರಿಯ ನಾಯಕರನ್ನು ಸಂಪರ್ಕಿಸಬೇಕು ಎಂದು ಹೇಳಿದ್ದಾರೆ. 

    ಪಕ್ಷಕ್ಕಾಗಿ ದುಡಿದವರಿಗೆ ಹಾಗೂ ಕಾಂಗ್ರೆಸ್ ಪರವಾಗಿ ನಿಂತಿರುವ ಸಮುದಾಯಗಳನ್ನು ಪ್ರತಿನಿಧಿಸುವವರಿಗೆ ಆದ್ಯತೆ ಮೇಲೆ ಟಿಕೆಟ್ ನೀಡಬೇಕು. ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ನಮ್ಮಂತಹ ಪಕ್ಷದ ಹಿರಿಯ ನಾಯಕರ ಸಲಹೆಯನ್ನು ಪಡೆದರೆ ಅದು ಸೂಕ್ತವಾಗಿರಲಿದೆ. ಯಾರ ಸಲಹೆಯನ್ನೂ ಪಡೆಯದೇ ಅವರೇ ನಿರ್ಧಾರ ತೆಗೆದುಕೊಂಡರೆ, ನನ್ನ ಪ್ರಕಾರ ಅದು ಸರಿಯಲ್ಲ. ಪಕ್ಷ ಮತ್ತು ಸರ್ಕಾರದಲ್ಲಿ ಹಿರಿತನ ಮತ್ತು ಅನುಭವ ಇರುವವರು ಮತ್ತು ಸಂಪರ್ಕ ಹೊಂದಿರುವವರ ಸಲಹೆ ಪಡೆಯಬೇಕು. ಅವರು ನಮ್ಮೊಂದಿಗೆ ಚರ್ಚಿಸಬೇಕು ಎಂದು ತಿಳಿಸಿದ್ದಾರೆ.

    ಪರಮೇಶ್ವರ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿಕೆ.ಶಿವಕುಮಾರ್ ಅವರು, ಖಂಡಿತ, ನಾವು ಅವರ ಅಭಿಪ್ರಾಯವನ್ನು ಕೇಳುತ್ತೇವೆ ಎಂದರು.

    ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಕಾಂಗ್ರೆಸ್‌ ಪಾಳಯದಲ್ಲಿ ನಡೆಯುತ್ತಿರುವ ಚರ್ಚೆ ಕುರಿತು ಮಾತನಾಡಿ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap