ಹುಳಿಯಾರು:
ಅಭಿವೃದ್ಧಿಗೆ ಕರೆದ ಸಭೆಯಾಯ್ತು ರಣರಂಗ : ಪಟ್ಟಣದ ಏಳ್ಗೆಗೆ ಭಂಗ
ಅಭಿವೃದ್ಧಿ ಕೆಲಸಗಳ ಪಟ್ಟಿ ಪಡೆಯಲು ಪಪಂ ಕಚೇರಿಗೆ ಆಗಮಿಸಿದ ಪೌರಾಡಳಿತ ಇಲಾಖೆಯ ಯೋಜನಾ ನಿರ್ದೇಶಕರ ಸಮ್ಮುಖದಲ್ಲೆ ಪಪಂ ಮುಖ್ಯಾಧಿಕಾರಿ ಹಾಗೂ ಜನ ಪ್ರತಿನಿಧಿಗಳು ಒಬ್ಬರ ಮೇಲೋಬ್ಬರು ಆರೋಪ-ಪ್ರತ್ಯಾರೋಪ ಮಾಡಿದರಲ್ಲದೆ ಕೂಗಾಟ, ತಳ್ಳಾಟ ನಡೆದ ಪ್ರಸಂಗ ಹುಳಿಯಾರು ಪಟ್ಟಣ ಪಂಚಾಯ್ತಿ ಕಚೇರಿಯಲ್ಲಿ ಗುರುವಾರ ನಡೆದಿದೆ.
ಅಧಿಕಾರಿ ಬರುವ ಮಾಹಿತಿಯೆ ಇಲ್ಲ…! :
ಹುಳಿಯಾರು ಪಟ್ಟಣದಲ್ಲಿ ಆಗಬೇಕಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ತಯಾರಿಸಿ ಹಂತಹಂತವಾಗಿ ಅನುಷ್ಠಾನ ಮಾಡುವ ಸಲುವಾಗಿ ತಾನು ಆಗಮಿಸಿದ್ದು ಸದಸ್ಯರು ಒಬ್ಬೊಬ್ಬರಾಗಿ ತಮ್ಮ ವಾರ್ಡ್‍ನಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳ ವಿವರಗಳನ್ನು ನೀಡುವಂತೆ ಯೋಜನಾ ನಿರ್ದೇಶಕರಾದ ಅಂಜಿನಪ್ಪ ಅವರು ತಿಳಿಸಿದರು. ಆಗ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ.ಎಂ.ಎಲ್ ಕಿರಣ್‍ಕುಮಾರ್ ಅವರು ನೀವು ಬರುವ ವಿಷಯವೇ ನಮಗೆ ತಿಳಿದಿಲ್ಲ.
ಹೀಗೆ ಏಕಾಏಕಿ ಬಂದು ಮಾಹಿತಿ ಕೊಡಿ ಎಂದರೆ ಸದಸ್ಯರನ್ನು ಸೇರಿಸುವುದಾದರೂ ಹೇಗೆ, ಅವರಿಂದ ಅಭಿವೃದ್ಧಿ ಕೆಲಸಗಳನ್ನು ಪಡೆಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಪಿಡಿ ಅವರು ವಾರದ ಮುಂಚೆಯೇ ಇಮೇಲ್‍ನಲ್ಲಿ ನಾನು ಬರುವ ಮಾಹಿತಿ ಕಳುಹಿಸಿದ್ದು, ಅಧ್ಯಕ್ಷರು ಮತ್ತು ಸದಸ್ಯರಿಗೆ ಮಾಹಿತಿ ತಿಳಿಸಿಲ್ಲವೆ ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಆಗ ಮುಖ್ಯಾಧಿಕಾರಿ ಮಂಜುನಾಥ್ ತಮಗೆ ಯಾವುದೇ ಮೇಲ್ ಬಂದಿಲ್ಲ ಎಂದು ಸಮಜಾಯಿಸಿ ನೀಡುವ ಮೂಲಕ ಆರಂಭವಾದ ಪರಸ್ಪರ ವಾಗ್ವಾದವು ಕ್ರಮೇಣ ಮುಂದುವರೆದು ವೈಯಕ್ತಿಯ ನಿಂದನೆಗೂ ಕಾರಣವಾಯಿತು.
ಬಿಲ್‍ನ ಫೈಲ್ ಅಧ್ಯಕ್ಷರ ಬಳಿ ಇದೆ :
ಸದಸ್ಯ ಎಸ್‍ಆರ್‍ಎಸ್ ದಯಾನಂದ್ ಅವರು ಮಾತನಾಡಿ, ಮುಖ್ಯಾಧಿಕಾರಿ ಸಭೆಯ ಅಜೆಂಡಾದಲ್ಲಿರುವ ವಿಷಯ ಚರ್ಚಿಸಲು ಸೂಕ್ತ ದಾಖಲೆಗಳನ್ನೆ ನೀಡದೆ ಕಾಟಾಚಾರಕ್ಕೆ ಸಭೆ ಕರೆಯುತ್ತಾರೆ.
ಇದಕ್ಕೆ ಬುಧವಾರ ನಡೆದ ಸಭೆಯಲ್ಲಿ 18 ಸಾವಿರ ರೂ.ನ ಬಿಲ್ ತೋರಿಸುವಂತೆ ಕೇಳಿ ಕೊಂಡಾಗ ಒಂದೂವರೆ ಗಂಟೆ ಸಭೆಯ ಸಮಯ ವ್ಯರ್ಥ ಮಾಡಿದರಲ್ಲದೆ ಬಿಲ್ ತೋರಿಸದೆ ಸಮಯವಕಾಶ ಕೇಳಿಕೊಂಡರು ಎಂದು ಮುಖ್ಯಾಧಿಕಾರಿ ಮಂಜುನಾಥ್ ವಿರುದ್ಧ ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ಮುಖ್ಯಾಧಿಕಾರಿ ಪ್ರಕ್ರಿಯಿಸಿ, ಆ ಬಿಲ್ ಅಧ್ಯಕ್ಷರ ಬಳಿಯಿದ್ದು ಹುಡುಕಿ ತರುತ್ತೇನೆಂದು ತಿಳಿಸಿದ್ದಾರೆ ಎಂದರು. ಇದಕ್ಕೆ ಸಿಡಿಮಿಡಿಗೊಂಡು ಪ್ರತಿಕ್ರಿಯಿಸಿದ ಅಧ್ಯಕ್ಷ ಕಿರಣ್‍ಕುಮಾರ್ ಅವರು ನಾನ್ಯಾವಾಗ ಈ ರೀತಿ ಹೇಳಿದ್ದೇನೆ, ನಾನ್ಯಾಕೆ ಬಿಲ್‍ನ ಫೈಲ್ ತೆಗೆದುಕೊಂಡು ಹೋಗಲಿ ಎಂದು ಮುಖ್ಯಾಧಿಕಾರಿ ಮೇಲೆ ತಿರುಗಿ ಬಿದ್ದಾಗ ಸಭೆಯಲ್ಲಿ ಮೊದಲನೆ ಬಾರಿ ಕೋಲಾಹಲ ಸೃಷ್ಠಿಯಾಯಿತು.
ತುಟಿ ಬಿಚ್ಚದ ಮುಖ್ಯಾಧಿಕಾರಿ :
ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡಿದ ನಂತರ ಯೋಜನಾ ನಿರ್ದೇಶಕರು ಇಬ್ಬರನ್ನೂ ಸಮಾಧಾನ ಮಾಡಿದಾಗ ಮತ್ತೊಬ್ಬ ಸದಸ್ಯ ಪ್ರೂಟ್ ಸಿದ್ಧಿಕ್ ಮಾತನಾಡಿ, ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ಬಾಡಿಗೆಗಳನ್ನು ಏಕಾಏಕಿ ಏರಿಸಿದ್ದಾರೆ. ಈ ವಿಚಾರ ನ್ಯಾಯಾಲಯದಲ್ಲಿದ್ದರೂ ಸಹ ಬಾಡಿಗೆ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಈ ವಿಷಯ ನ್ಯಾಯಾಲಯದಲ್ಲಿರುವುದರಿಂದ ನಾನು ಮಾತನಾಡುವುದಿಲ್ಲ ಎಂದು ಮುಖ್ಯಾಧಿಕಾರಿ ಮೌನಕ್ಕೆ ಶರಣಾದರು. ಆದರೂ ಸಿದ್ಧಿಕ್ ಅವರು ಪಟ್ಟು ಬಿಡದೆ ಇ-ಹರಾಜಿನ ಮೂಲಕ ಒಂದು ಮಳಿಗೆ 16,980 ರೂ. ಮಾಸಿಕ ಬಾಡಿಗೆಗೆ ಹರಾಜು ಆಗಿದ್ದು, ಉಳಿದ ಮಳಿಗೆಗಳಿಗೂ ಇದೇ ಬಾಡಿಗೆ ಫಿಕ್ಸ್ ಮಾಡಿದ್ದರೂ ಲಕ್ಷಾಂತರ ರೂ. ಆದಾಯ ಪಂಚಾಯ್ತಿಗೆ ಬರುತ್ತಿತ್ತು. ಈ ಆದಾಯ ನಷ್ಟಕ್ಕೆ ಮುಖ್ಯಾಧಿಕಾರಿಯೇ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿದರು.
ಮಳಿಗೆ ಬಾಡಿಗೆ ಗೋಲ್‍ಮಾಲ್ :
ಸದಸ್ಯ ಜುಬೇರ್ ಮಾತನಾಡಿ, ಪಂಚಾಯ್ತಿಯಿಂದ ಮಳಿಗೆ ಬಾಡಿಗೆ ಪಡೆದರು ಲಕ್ಷಾಂತರ ರೂ. ಗಳಿಗೆ ಬೇರೆಯವರಿಗೆ ಕಾನೂನು ಬಾಹಿರವಾಗಿ ಪರಬಾರೆ ಮಾಡಿದ್ದಾರೆ. ಅಲ್ಲದೆ ಕೆಲವರು ತಮ್ಮ ಅಂಗಡಿಗಳ ಮುಂದೆ ಹಣ್ಣಿನ ಅಂಗಡಿ ಇಟ್ಟುಕೊಳ್ಳಲು ದಿನಕ್ಕೆ 600 ರೂ.ನಂತೆ ಬಾಡಿಗೆ ಪಡೆಯುತ್ತಿದ್ದಾರೆ.
ಈ ರೀತಿ ವಾಣಿಜ್ಯ ಮಳಿಗೆಗಳ ಮುಂದೆ ಹಣ್ಣು, ಹೂವಿನ ಅಂಗಡಿಗಳನ್ನು ಇಟ್ಟುಕೊಂಡು ಸಂಚಾರಕ್ಕೆ ತೊಂದರೆ ಮಾಡುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಕುಟುಕಿದರು. ಇಷ್ಟಾದರೂ ಮುಖ್ಯಾಧಿಕಾರಿ ಮೌನ ತಾಳಿದಾಗ,
ಆಯ್ತು ನ್ಯಾಯಲಯದಲ್ಲಿ ಕೇಸು ಯಾವ ಹಂತದಲ್ಲಿದೆ ಅನ್ನುವುದನ್ನಾದರೂ ಹೇಳಿ ಎಂದು ಅಧ್ಯಕ್ಷ ಕೆಎಂಎಲ್ ಕಿರಣ್ ಕೇಳಿಕೊಂಡಾಗ ತಡೆಯಾಜ್ಞೆ ತಂದಿದ್ದ ಮಳಿಗೆದಾರರು ಕೋರ್ಟ್‍ಗೆ ಹಾಜರಾಗದೆ ವಿಚಾರಣೆ ಮುಂದಕ್ಕೆ ಹೋಗುತ್ತಿದ್ದು ಮುಂದಿನ ಬಾರಿ ಪಂಚಾಯ್ತಿ ಪರವಾಗಿ ಆದೇಶ ಹೊರಬರುವುದು ನಿಶ್ಚಿತ ಎಂದು ವಕೀಲರು ತಿಳಿಸಿದ್ದಾರೆ ಎಂದಷ್ಟೆ ಹೇಳಿದರು.
ಟೇಬಲ್ ಗುದ್ದಿ ಎರಗಿದ ಸದಸ್ಯರು :
ಹಿಂದಿನ ಪಿಡಿಓ ಸಿದ್ಧರಾಮಯ್ಯ ಅವರ ಸಹಿಯನ್ನು ನಕಲು ಮಾಡಿ ಅಕ್ರಮವಾಗಿ 60 ಕ್ಕೂ ಹೆಚ್ಚು ಖಾತೆ ಮಾಡಿದ್ದಾರೆ. ಅಲ್ಲದೆ ಹಣ ಪಡೆದು ನೂರಾರು ಮಂದಿಗೆ ಎನ್‍ಓಸಿ ನೀಡುತ್ತಿದ್ದಾರೆ.
ನಮೂನೆ 3 ಕೊಡಲು 3 ಸಾವಿರ ರೂ. ಲಂಚ ಫಿಕ್ಸ್ ಮಾಡಿದ್ದಾರೆ. ಆದರೆ ಚುನಾಯಿತ ಸದಸ್ಯರಾದ ನಾವು ಕೇಳಿದರೆ ಖಾತೆ ಮಾಡುವುದಿಲ್ಲ ಎಂದು ಸದಸ್ಯ ಚಂದ್ರಶೇಖರ್, ಮಾಜಿ ಸದಸ್ಯ ರೇವಣ್ಣ ಗಂಭೀರ ಆರೋಪ ಮಾಡಿದರು. ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಾಧಿಕಾರಿ ಯಾರಿಂದಲೂ ನಾನು ಲಂಚ ಪಡೆದಿಲ್ಲ.
ನಿಮ್ಮ ಮೇಲೆ ಮಂತ್ರಿಗಳ ಬಳಿ ಹಣ ಕೇಳಿರುವ ಆರೋಪ ಹೇಳಿದ್ದಾರೆ ಗೊತ್ತಾ ಎಂದಾಗ ಸಭೆ ರಣರಂಗವಾಗಿ ಮಾರ್ಪಟ್ಟಿತು. ಚುನಾಯಿತ ಸದಸ್ಯರ ಮೇಲೆ ಆರೋಪ ಮಾಡುತ್ತೀಯ ಎಂದು ಕೆಲ ಸದಸ್ಯರು ಮುಖ್ಯಾಧಿಕಾರಿಯ ಟೇಬಲ್ ಗುದ್ದಿ ಅವರ ಮೇಲೆ ಎರಗಿದರು. ಹತ್ತದಿನೈದು ನಿಮಿಷ ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಕೂಗಾಡಿದರು. ನಂತರ ಅಲ್ಲಿದ್ದ ಉಳಿದ ಅಧಿಕಾರಿಗಳು ಎಲ್ಲರನ್ನೂ ಸಮಾಧಾನ ಮಾಡಿದರು.
ಮುಖ್ಯಾಧಿಕಾರಿ ವರ್ಗಾಯಿಸದಿದ್ದರೆ ಕಚೇರಿಗೆ ಬೀಗ :
ಯೋಜನಾ ನಿರ್ದೇಶಕರ ಎದುರಿನಲ್ಲೆ ಅಸಭ್ಯವಾಗಿ ವರ್ತಿಸುವ ಮುಖ್ಯಾಧಿಕಾರಿಯನ್ನು ತಕ್ಷಣ ವರ್ಗಾವಣೆ ಮಾಡಬೇಕು. 16 ಮಂದಿ ಚುನಾಯಿತ ಸದಸ್ಯರು ಹಾಗು ಮೂವರು ನಾಮಿನಿ ಸದಸ್ಯರು ಈ ಮುಖ್ಯಾಧಿಕಾರಿ ಬೇಡ ಎಂದರೂ ಏಕೆ ಮುಂದುವರಿಸುತ್ತಿದ್ದೀರಿ. ತಕ್ಷಣ ಇವರನ್ನು ವರ್ಗಾವಣೆ ಮಾಡಬೇಕು ಇಲ್ಲವಾದರೆ ಕಚೇರಿಗೆ ಬೀಗ ಜಡಿಯುತ್ತೇವೆ ಎಂದು ಸದಸ್ಯರು ಒತ್ತಾಯಿಸಿದರು.
ಅಲ್ಲದೆ ಕಚೇರಿ ಕಡತಗಳು ಕಾಣೆಯಾಗುತ್ತಿದ್ದು, ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಯಾಗಿ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ, ಹೇಳಿದಕ್ಕೆಲ್ಲಾ ನಾನು ಸಹಿ ಹಾಕಿದರೆ ನನ್ನನ್ನು ಮೆಚ್ಚುತ್ತಾರೆ. ಆದರೆ ನಾನು ಕಾನೂನು ಬಾಹಿರವಾಗಿ ಯಾವ ಕೆಲಸವನ್ನೂ ಮಾಡದಿದ್ದರಿಂದ ಅನಗತ್ಯವಾಗಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ.
ಇವರಿಗೆ ಇಷ್ಟವಿಲ್ಲ ಎಂದಾದರೆ ನನ್ನನ್ನು ವರ್ಗಾವಣೆ ಮಾಡಿ, ಬೇರೆ ಕಡೆ ಹೋಗುತ್ತೇನೆ ಎಂದರು. ಹೀಗೆ ಸಭೆ ವೈಯಕ್ತಿಕ ನಿಂದನೆಗೆ ಮಾರ್ಪಾಡಾದಾಗ ಮುಖ್ಯಾಧಿಕಾರಿಯನ್ನು ಸಭೆಯಿಂದ ನಿರ್ಗಮಿಸುವಂತೆ ಕೆಲ ಸದಸ್ಯರೆ ಸೂಚಿಸಿ ಗಲಾಟೆಗೆ ಇತಿಶ್ರಿ ಹಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ