ಚಿಕ್ಕಮಗಳೂರು:
ರಾಜ್ಯದಲ್ಲಿ 20 ಲೋಕಸಭಾ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷವು ಲೋಕಸಭೆ ಚುನಾವಣೆಗೆ ಸಿದ್ಧತೆಯಲ್ಲಿ ನಿರತವಾಗಿದ್ದು, ಚುನಾವಣೆಯಲ್ಲಿ ಪಕ್ಷ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಕಾರಣ. ಬರಗಾಲ ಬಂದಿದೆ ನಿಜ. ಆದರೆ, ಅಧಿಕಾರ ಹಂಚಿಕೆ ಮಾಡಬಾರದೆ, ರೂ.3.71 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿದ್ದೇವೆ. ನಿಗಮ ಮಂಡಳಿ ಅಧ್ಯಕ್ಷರಿಗೆ ಅಧಿಕಾರ ನೀಡಲು ಹೆಚ್ಚು ಹಣ ವೆಚ್ಚವಾಗುವುದಿಲ್ಲ.
ಚಿಕ್ಕಮಗಳೂರು ತಾಲೂಕು ಬರಪಟ್ಟಿಗೆ ಸೇರಿಸಲು ಹಲವು ಮಾನದಂಡಗಳಿವೆ. ಅವುಗಳ ಅನುಸಾರ 17 ತಾಲೂಕುಗಳು ಬರ ಪಟ್ಟಿಯಿಂದ ಹೊರಗಿವೆ. ಅದರಲ್ಲಿ ಚಿಕ್ಕಮಗಳೂರು ಕೂಡ ಒಂದು. ವ್ಯಾಪ್ತಿಗೆ ಬಂದಿದ್ದರೆ ಎಲ್ಲಾ ತಾಲೂಕುಗಳನ್ನು ಪರಪಟ್ಟಿಗೆ ಸೇರಿಸುತ್ತಿದ್ದೆವು ಎಂದು ತಿಳಿಸಿದರು.
‘ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಾಗಿರುವ ಮಂಗನ ಕಾಯಿಲೆ ತಡೆಗೆ ಕ್ರಮ ಕೈಗೊಳ್ಳುವ ಬಗ್ಗೆ ಆರೋಗ್ಯ ಸಚಿವರೊಂದಿಗೆ ಮಾತನಾಡುತ್ತೇನೆ. ಅಕ್ರಮ ಭೂಮಂಜೂರಾತಿ ಬಗ್ಗೆ ತಹಶೀಲ್ದಾರ್‌ಗಳ ತಂಡ ನಡೆಸಿರುವ ತನಿಖಾ ವರದಿ ಕಂದಾಯ ಸಚಿವರ ಬಳಿ ಇದ್ದು, ಅವರೊಂದಿಗೂ ಈ ಬಗ್ಗೆ ಚರ್ಚಿಸುತ್ತೇನೆ’ ಎಂದರು.