ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಕಾಂಗ್ರೆಸ್ ….!

ಬೆಂಗಳೂರು:

    ಮುಡಾ ಹಗರಣ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್‌ ಅವರು ಪ್ರಾಸಿಕ್ಯೂಷನ್‌’ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ವಿಭಾಗವಾರು ರ್ಯಾಲಿ ಮತ್ತು ಸಭೆಗಳ ನಡೆಲು ಕಾಂಗ್ರೆಸ್ ಮುಂದಾಗಿದೆ.

   ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು, ಸಿದ್ದರಾಮಯ್ಯ ಪರ ರ್ಯಾಲಿ, ಸಭೆ ನಡೆಸುವಂತೆ ಜಿಲ್ಲಾ, ತಾಲೂಕು ಮುಖಂಡರಿಂದ ಆಗ್ರಹಗಳು ವ್ಯಕ್ತವಾಗುತ್ತಿವೆ. ಹೀಗಾಗಿ ತುಮಕೂರಿನಲ್ಲಿ ಮೊದಲ ರ್ಯಾಲಿ ಆಯೋಜಿಸಲಾಗುತ್ತಿದ್ದು, ಬಳಿಕ ಬೆಳಗಾವಿ, ಕಲಬುರಗಿ, ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

   ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಗೂ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್ ಮಾತನಾಡಿ, ಹಲವು ಜಿಲ್ಲಾ ಮಟ್ಟದ ನಾಯಕರು ತಮ್ಮ ತಮ್ಮ ತಾಲ್ಲೂಕು ಅಥವಾ ಜಿಲ್ಲೆಗಳಲ್ಲಿ ರ್ಯಾಲಿ ಆಯೋಜಿಸಲು ಅನುಮತಿ ನೀಡುವಂತೆ ಕೆಪಿಸಿಸಿಗೆ ಮನವಿ ಮಾಡಿದ್ದಾರೆಂದು ತಿಳಿಸಿದ್ದಾರೆ.

   ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಮುಖ್ಯಮಂತ್ರಿಗಳಿಗೆ ಬೆಂಬಲ ವ್ಯಕ್ತಪಡಿಸಿ ರ್ಯಾಲಿ ಹಾಗೂ ಪ್ರತಿಭಟನೆಗಳು ಮುಂದುವರೆಯಲಿವೆ. ನ್ಯಾಯ ಸಿಗುವವರೆಗೂ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತೇವೆಂದು ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ರ್ಯಾಲಿಗೆ ಕೆಪಿಸಿಸಿ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಬೆಳಗಾವಿ ವಿಭಾಗದಿಂದಲೂ ರ್ಯಾಲಿ ನಡೆಸಲಾಗುವುದು ಎಂದರು.

   ರಾಜಭವನ ಸೇರಿದಂತೆ ಸಾಂವಿಧಾನಿಕ ಕಚೇರಿಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ. ಹೀಗಾಗಿ ಪ್ರತಿಭಟನೆ ಮಾಡದೆ ಬೇರೆ ದಾರಿ ಇಲ್ಲ ಎಂದು ತಿಳಿಸಿದ್ದಾರೆ.

  ಮುಡಾ ಹಗರಣ ಪ್ರಕರಣ ಸಂಬಂಧ ಕಾಂಗ್ರೆಸ್ ಆಗಸ್ಟ್ 19 ರಂದು ಮೊದಲ ಪ್ರತಿಭಟನೆ ನಡೆಸಿತ್ತು. ಆಗಸ್ಟ್ 31 ರಂದು ರಾಜಭವನ ಚಲೋ ನಡೆಸಿ, ರಾಜ್ಯಪಾಲರ ನಡೆ ಖಂಡಿಸಿತ್ತು. ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ಭಾಗವಹಿಸಿತ್ತರು. ಮುಖ್ಯವಾಗಿ ಅಹಿಂದ ನಾಯಕರು ಹಾಗೂ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ದೊಡ್ಡ ಮಟ್ಟದಲ್ಲಿ ಪಾಲ್ಗೊಂಡು, ಸಿದ್ದರಾಮಯ್ಯ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದವು.

Recent Articles

spot_img

Related Stories

Share via
Copy link
Powered by Social Snap