ಬೆಂಗಳೂರು :
ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಮನಸೋಯಿಚ್ಛೆ ಏರಿಸುವ ಮೂಲಕ ಕೊರೊನಾದಿಂದ ಸಂಕಷ್ಟದಲ್ಲಿರುವ ಜನರ ತಲೆಯ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಚಪ್ಪಡಿ ಎಳೆದಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮ ನಿವಾಸದಲ್ಲಿಂದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಹೇಳುವ ಅಚ್ಛೇ ದಿನ್ ಇದೇ ಏನು..? ಎಂದು ಪ್ರಶ್ನಿಸಿದ ಅವರು, ವಿದ್ಯುತ್ ದರವನ್ನು ರಾಜ್ಯ ಸರ್ಕಾರ ಕಳೆದ ಒಂದು ವರ್ಷದಲ್ಲಿ ಶೇ. 30ರಷ್ಟು ಏರಿಸಿದೆ. ಇದು ರಾಜ್ಯದ ಇತಿಹಾಸದಲ್ಲಿಯೇ ಇಲ್ಲ. ಎಂದರು.
ಮನಮೋಹನಸಿಂಗ್ ಅವರು ಕೇವಲ ಒಂದು ರೂ. ದರ ಏರಿಕೆ ಮಾಡಿದಾಗ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿ ತೀವ್ರ ವಿರೋಧ ಮಾಡಿದ್ದರು. ಬಿಜೆಪಿಯವರು ದೇಶವ್ಯಾಪಿ ಪ್ರತಿಭಟನೆ ನಡೆಸಿದ್ದರು. ಈಗ ನಿತ್ಯವೂ ದರ ಏರಿಕೆಯಾಗುತ್ತಲೇ ಇದೆ. ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ ಪೆಟ್ರೋಲ್ ದರ ನೂರು ರೂ. ದಾಟಿದೆ. ಇದಕ್ಕೆ ನಷ್ಟದ ನೆಪ ಹೇಳುತ್ತಾರೆ. ರಾಜ್ಯದಲ್ಲಿ ಉತ್ಪಾದನೆ ಹೆಚ್ಚಾಗಿದ್ದರೂ ಕೇಂದ್ರ ಸರ್ಕಾರ ಮತ್ತು ಅದಾನಿ ಕಂಪನಿಯಿಂದ ಹೆಚ್ಚು ದರಕ್ಕೆ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಭ್ರಷ್ಟಾಚಾರ, ದುರಾಡಳಿತ ಕಡಿಮೆ ಮಾಡಿ. ದಕ್ಷತೆ ಹೆಚ್ಚಿಸಿದರೆ ದರ ಕಡಿಮೆಮಾಡಬಹುದು. ಕೊರೊನಾದಂಥ ಕೆಟ್ಟ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ತೀವ್ರ ಖಂಡನೀಯ. ಮನಮೋಹನಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾ ತೈಲ 125 ಡಾಲರ್ ಇತ್ತು. ಆಗ ಪೆಟ್ರೋಲ್, ಡೀಸೆಲ್ ದರವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಿರಲಿಲ್ಲ. ಮೋದಿಯವರು ಪ್ರಧಾನಿಯಾದ ಬಳಿಕ ಒಂದು ಹಂತದಲ್ಲಿ ಕಚ್ಛಾ ತೈಲ ದರ 46-47 ಡಾಲರ್‍ಗೆ ಕುಸಿದಿತ್ತು. ಆಗ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಕೊಡಲಿಲ್ಲ.
ಪೆಟ್ರೋಲ್, ಡೀಸೆಲ್ ಮಾರಾಟದ ಮೇಲಿನ ಅಬಕಾರಿ ಸುಂಕ 2013-14ರಲ್ಲಿ 3.45 ರೂ. ಹಾಗೂ 9.25 ರೂ. ಇತ್ತು. ಈಗ ಪೆಟ್ರೋಲ್ ಮಾರಾಟದ ಮೇಲೆ 31.84 ರೂ. ಡೀಸೆಲ್ ಮಾರಾಟದ ಮೇಲೆ, 32.98 ರೂ. ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮಾರಾಟದ ಮೇಲೆ ಮೇಲೆ ಶೇ. 35, ಡೀಸೆಲ್ ಮಾರಾಟದ ಮೇಲೆ ಶೇ. 24 ತೆರಿಗೆ ವಿಧಿಸುತ್ತಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 414 ರೂ.ಗಳಿಂದ 850 ರೂ.ಗಳಿಗೆ ಏರಿಕೆಯಾಗಿದೆ. ಇದು ಲೂಟ ಅಲ್ಲದೇ ಮತ್ತೇನು ? ಇದೇನಾ ಅಚ್ಛೇ ದಿನ್ ?
ಬೆಲೆ ಏರಿಕೆ ಹಿನ್ನೆಲೆಯಲ್ಲಿ ಎಐಸಿಸಿ ಸೂಚನೆ ಮೇರೆಗೆ ರಾಜ್ಯದಲ್ಲಿ ಐದು ದಿನಗಳ ಕಾಲ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೊರೊನಾದಿಂದ ಸುಮ್ಮನಿದ್ದಾರೆ. ಲಾಕ್‍ಡೌನ್ ಇರುವ ಕಾರಣ ಹೊರಗೆ ಬಂದು ಪ್ರತಿಭಟನೆ ಮಾಡುವುದಿಲ್ಲ ಎಂದು ಹೇಳಿ ಜನರ ತಲೆಯ ಮೇಲೆ ಚಪ್ಪಡಿ ಎಳೆಯುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುತ್ತಿದೆ. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ