ಯಶಸ್ವಿ 1 ವರ್ಷ ಪೂರೈಸಿದ ಸಿದ್ದರಾಮಯ್ಯ ಸರ್ಕಾರ ….!

ಬೆಂಗಳೂರು: 

    ಕಳೆದ ವರ್ಷ 2023, ಮೇ ತಿಂಗಳ ಸಮಯ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಿ ಸರ್ಕಾರ ರಚಿಸಿತ್ತು. ನಂತರ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಮಧ್ಯೆ ಭಾರೀ ಪೈಪೋಟಿ ನಡೆದು ದೆಹಲಿ ಹೈಕಮಾಂಡ್ ಅಂಗಳದಲ್ಲಿ ಹಲವು ಸುತ್ತಿನ ಮಾತುಕತೆ, ಚರ್ಚೆ ನಡೆದು ಮೇ 20ರಂದು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಡಿ ಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ 1 ವರ್ಷ:

    ನಾಳೆ ಮೇ 20ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಕಳೆದೊಂದು ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಏನೇನು ಕೆಲಸ ಮಾಡಿದೆ, ರಾಜ್ಯದ ಜನತೆಗೆ ಒಪ್ಪಿಗೆಯಾಗಿದೆಯೇ ಎಂದು ಗೊತ್ತಾಗಲು ಜೂನ್ 4ರ ಲೋಕಸಭೆ ಚುನಾವಣೆ ಫಲಿತಾಂಶ ದಿನ ಗೊತ್ತಾಗಲಿದೆ. ಹೀಗಾಗಿ ಈ ಲೋಕಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಾದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳ ಪಾಲಿಗೆ ರಾಜಕೀಯವಾಗಿ ಮಹತ್ವದ್ದಾಗಿದೆ.  

    28 ಲೋಕಸಭಾ ಕ್ಷೇತ್ರಗಳ ಫಲಿತಾಂಶದಿಂದ ಮಾತ್ರ ರಾಜ್ಯ ಸರ್ಕಾರದ ಸಾಧನೆ, ಕೆಲಸವನ್ನು ಅಳೆಯುವುದು ಸರಿಯಲ್ಲ. ವಿಧಾನ ಸಭೆ ಚುನಾವಣೆಗೂ, ಲೋಕಸಭೆ ಚುನಾವಣೆಯ ಶೈಲಿಗೂ ಭಿನ್ನವಾಗಿರುತ್ತದೆ. ಆದರೆ ಸದ್ಯಕ್ಕಂತೂ ಲೋಕಸಭೆ ಚುನಾವಣಾ ಫಲಿತಾಂಶ ಕರ್ನಾಟಕ ರಾಜಕೀಯದ ಪಾಲಿಗೆ ಮಹತ್ವ ಎಂಬ ಮಾತನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ರಾಜಕೀಯ ನಾಯಕರೊಬ್ಬರು ಹೇಳುತ್ತಾರೆ.

ಕಾಂಗ್ರೆಸ್ ಗ್ಯಾರಂಟಿಗಳು: 

    ಈ ಬಾರಿಯ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್ ಐದು ಗ್ಯಾರಂಟಿ ಭಾಗ್ಯಗಳ ಸುತ್ತವೇ ಗಿರಕಿ ಹೊಡೆದಿತ್ತು. ಅಧಿಕಾಕ್ಕೆ ಬಂದ ಆರಂಭದಿಂದಲೂ ಕಾಂಗ್ರೆಸ್ ನಾಯಕರು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವತ್ತ ಪ್ರಮುಖವಾಗಿ ಗಮನ ಹರಿಸಿದ್ದರು. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಗ್ಯಾರಂಟಿ ಸುತ್ತ ಅವರ ರಾಜಕೀಯ ತಂತ್ರಗಾರಿಕೆಯಿದ್ದಿತು. ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಮಾದರಿಯನ್ನು ತೋರಿಸುವುದು ಕಾಂಗ್ರೆಸ್ ನ ಉದ್ದೇಶವಾಗಿತ್ತು.

    ರಾಜಕೀಯವಾಗಿ ಹೇಳುವುದಾದರೆ, ಕಾಂಗ್ರೆಸ್, ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಈ ತಂತ್ರಗಾರಿಕೆ ಫಲ ಕೊಟ್ಟಿದೆ ಎನ್ನಬಹುದು. ಆದರೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂಬುದು ಇಲ್ಲಿರುವ ಪ್ರಶ್ನೆ. ರಾಜ್ಯದ ಅಭಿವೃದ್ಧಿಗೆ ಕಾರ್ಯಗಳಿಗೆ, ಪರಿಶಿಷ್ಟ ಜಾತಿ ಮತ್ತು ಬುಡಗಟ್ಟು ಜನಾಂಗಗಳ ಅಬಿವೃದ್ಧಿ ಕೆಲಸಗಳಿಗೆ ಸರ್ಕಾರ ಹಣ ಒದಗಿಸಿದೆಯೇ ಸರಿಯಾಗಿ ಹಣ ಒದಗಿಸುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಗ್ಯಾರಂಟಿ ಯೋಜನೆಗಳಿಂದ ಜನತೆ ಮೇಲೆ ದೀರ್ಘಕಾಲ ಪರಿಣಾಮ ಮತ್ತು ಆರ್ಥಿಕತೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ.

    ಈ ಲೋಕಸಭೆ ಚುನಾವಣೆಯಲ್ಲಿ ಅಸೆಂಬ್ಲಿ ಚುನಾವಣೆಯ ಫಲಿತಾಂಶದಂತೆ ರಾಜ್ಯದಲ್ಲಿ ಹೆಚ್ಚಿನ ಸೀಟು ಪಡೆಯಲುು ಕಾಂಗ್ರೆಸ್ ತನ್ನ ರಾಜ್ಯ ಘಟಕವನ್ನು ಸಮರ್ಥವಾಗಿ ಬಳಸಿಕೊಂಡು ಕೇಂದ್ರ ಸರ್ಕಾರವು ತೆರಿಗೆ ಮತ್ತು ಬರ ಪರಿಹಾರದ ಹಂಚಿಕೆಯಲ್ಲಿನ ಅಸಮಾನತೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತರಾಟೆಗೆ ತೆಗೆದುಕೊಂಡಿತು. ಸಿಎಂ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಪ್ರತಿಭಟನೆ ಮತ್ತು ರಾಜ್ಯವು ಬರ ಪರಿಹಾರ ನಿಧಿಗಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಕೇಂದ್ರ-ರಾಜ್ಯ ಸಂಬಂಧ ಹಳಸಿತ್ತು. ಬರದಿಂದ ಕಂಗಾಲಾಗಿದ್ದ ರೈತರಿಗೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ.

ಕಾನೂನು-ಸುವ್ಯವಸ್ಥೆ:

    ರಾಜ್ಯದಲ್ಲಿ ಇತ್ತೀಚೆಗೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಫೋಟದಿಂದ ಹಿಡಿದು ಕಾಂಗ್ರೆಸ್ ಬೆಂಬಲಿಗರು ವಿಧಾನಸೌಧದ ಕಾರಿಡಾರ್‌ನಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದು, ಭಕ್ತಿಗೀತೆಗಳನ್ನು ನುಡಿಸುತ್ತಿದ್ದ ಅಂಗಡಿಯವನ ಮೇಲೆ ಹಲ್ಲೆ, ಹುಬ್ಬಳ್ಳಿಯಲ್ಲಿ ನಡೆದ ಭೀಕರ ಕೊಲೆಗಳವರೆಗೆ ತಪ್ಪು ಕಾರಣಗಳಿಗಾಗಿ ಸುದ್ದಿಯಾಗಿದೆ.

    ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಲೈಂಗಿಕ ಹಗರಣದಲ್ಲಿಯೂ ಸಹ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಂದರ್ಭದಲ್ಲಿ ಸಂತ್ರಸ್ತರ ಗುರುತನ್ನು ರಕ್ಷಿಸಲು ವೀಡಿಯೊಗಳ ಪ್ರಸಾರವನ್ನು ತಡೆಯಲು ಸರ್ಕಾರ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂಬ ಮಾತುಗಳು ಕೇಳಿಬರುತ್ತಿದೆ.

     ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರಾ ಅಥವಾ ಡಿ.ಕೆ.ಶಿವಕುಮಾರ್‌ಗೆ ಹಸ್ತಾಂತರಿಸುತ್ತಾರೋ ಎಂಬುದು ದೊಡ್ಡ ಪ್ರಶ್ನೆಯಾಗಿದ್ದು. ಅದರ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.

    ಬಿಜೆಪಿಯಲ್ಲಿ, ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಹೊಸ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸ್ವಲ್ಪ ಮಟ್ಟಿಗೆ ತನ್ನನ್ನು ತಾನು ರೂಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಅದು ಎಷ್ಟರ ಮಟ್ಟಿಗೆ ತಿರುವು ನೀಡಿದೆ ಎಂಬುದು ಲೋಕಸಭೆ ಚುನಾವಣೆ ಫಲಿತಾಂಶದ ನಂತರವಷ್ಟೇ ತಿಳಿಯಲಿದೆ. ಬಿಜೆಪಿಗೆ ಇದು ಮೋದಿ ಕೇಂದ್ರಿತ ಚುನಾವಣೆಯಾಗಿದ್ದರೂ, ಉನ್ನತ ನಾಯಕತ್ವದ ಸಂದೇಶವನ್ನು ಕಾರ್ಯಕರ್ತರು ಮತ್ತು ಮತದಾರರಿಗೆ ತಲುಪಿಸುವಲ್ಲಿ ಸ್ಥಳೀಯ ನಾಯಕರು ಪ್ರಮುಖ ಪಾತ್ರ ವಹಿಸುತ್ತಾರೆ.

    ಜೆಡಿಎಸ್‌ಗೆ ಕಳೆದೊಂದು ವರ್ಷ ಸವಾಲುಗಳು ಮತ್ತು ಅಸ್ತಿತ್ವದ ಬಿಕ್ಕಟ್ಟಿನ ವರ್ಷವಾಗಿತ್ತು. ವಿಧಾನಸಭಾ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ನಂತರ, ಸಂಸದ ಪ್ರಜ್ವಲ್ ರೇವಣ್ಣನ ಮೇಲೆ ಕೇಳಿಬರುತ್ತಿರುವ ಲೈಂಗಿಕ ಹಗರಣ ಆರೋಪದಿಂದ ತತ್ತರಿಸಿ ಹೋಗಿದೆ.

     ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ, ಲೋಕಸಭೆಯ ಫಲಿತಾಂಶದಲ್ಲಿ ಹೆಚ್ಚಿನ ಸ್ಥಾನ ಬಂದರೆ ಕಾಂಗ್ರೆಸ್ ಗೆ ಇನ್ನಷ್ಟು ಬಲ ಬರಬಹುದು. ರಾಜ್ಯದಲ್ಲಿ ತೀವ್ರ ರಾಜಕೀಯ ಮಂಥನಕ್ಕೆ ಫಲಿತಾಂಶ ಪ್ರಚೋದನೆ ನೀಡಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap