ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ : ಹೆಚ್‌ ಸಿ ಮಹದೇವಪ್ಪ

ಮೈಸೂರು

     ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರೇ 5 ವರ್ಷವೂ ಆಡಳಿತ ನಡೆಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಎಚ್‌ಸಿ ಮಹದೇವಪ್ಪ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ಮುಂದೆಯೂ ಅವರೇ ಮುಂದುವರೆಯಲಿದ್ದಾರೆ. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಬಗ್ಗೆ ಸಿದ್ದರಾಮಯ್ಯ ಅವರಷ್ಟೇ ಮುಖ್ಯಮಂತ್ರಿ ಎಂದು ಚರ್ಚೆಯಾಗಿದೆ ಎಂದು ಅಧಿಕಾರ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

    ತುಳಿತಕ್ಕೆ ಒಳಗಾದವರಿಗೆ ಅವಕಾಶ ದೊರೆಯಬೇಕು. ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಏಕೆಂದರೆ, ನಾನಿನ್ನೂ ಬುದ್ಧ ಆಗಿಲ್ಲ. ಆತನ ತತ್ವಗಳನ್ನು ಅನುಸರಿಸುತ್ತಿದ್ದೇನಷ್ಟೇ ಎಂದು ಹೇಳಿದರು. 

   ಅಧಿಕಾರ ಅನುಭವಿಸುವವರು ಬೇರೆಯವರು ಎಂಬ ನೋವು ದಲಿತರಲ್ಲಿದೆ. ಸಂವಿಧಾನವನ್ನು ತಿರುಚುವಂತಹ ಕೆಲಸಕ್ಕೆ ನಮ್ಮ ಸರ್ಕಾರ ಎಂದಿಗೂ ಕೈಹಾಕುವುದಿಲ್ಲ. ಸಂವಿಧಾನದ ಪ್ರಕಾರ ಕಾರ್ಯನಿರ್ವಹಣೆ ನಮ್ಮ ಕಾರ್ಯಸೂಚಿ. ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದಾಗ ಅಂತಹ ಕಾರ್ಯಕ್ರಮಗಳನ್ನು (ಹಿಂದಿನ ಸರ್ಕಾರ ಮಾಡಿದವು) ಮುಂದುವರಿಸಬೇಕೋ, ಬೇಡವೋ ಎನ್ನುವುದನ್ನು ಸರ್ಕಾರ ನಿರ್ಧರಿಸುತ್ತದೆ ಎಂದರು.

    ಎಲ್ಲ ಇಂದಿರಾ ಕ್ಯಾಂಟೀನ್‌ಗಳನ್ನೂ ತೆರೆಯುವುದು ನಮ್ಮ ಸದ್ಯದ ಉದ್ದೇಶವಾಗಿದೆ. ಅಲ್ಲಿ ಮಾಂಸಾಹಾರ ನೀಡುವ ಪ್ರಸ್ತಾವವಿಲ್ಲ. ಬೇಕಿದ್ದರೆ ಅಲ್ಲಿಗೆ ತಂದು ತಿನ್ನಬಹುದು. ವ್ಯಕ್ತಿಯು ಯಾವ ಧರ್ಮವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಅದಕ್ಕೆ ಸಂವಿಧಾನದಲ್ಲೇ ಅವಕಾಶವಿದೆ. ತನ್ನ ಧರ್ಮದ ಪ್ರಚಾರ ಮಾಡುವುದಕ್ಕೂ ಅಡ್ಡಿ ಇಲ್ಲ.

     ಆದರೆ, ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ. ಇದಕ್ಕೆ ಪತ್ಯೇಕ ಕಾಯ್ದೆ ಬೇಕಾಗಿಲ್ಲ ಎಂದರು. ಪಠ್ಯಪುಸ್ತಕಗಳ ಮೂಲಕ ಯುವ ಸಮುದಾಯಕ್ಕೆ ಚರಿತ್ರೆಯನ್ನು ಸರಿಯಾಗಿ ಹೇಳಬೇಕು. ತಿರುಚಿ ಹೇಳಿದರೆ ಸಮಾಜ ಕೆಡುತ್ತದೆ. ಜಾತಿ, ಧರ್ಮವನ್ನು ಮೀರಿದ್ದ ಅಂಬೇಡ್ಕರ್‌, ಕುವೆಂಪು, ನಾರಾಯಣಗುರು ಮೊದಲಾದವರ ಬಗ್ಗೆ ಅಪವ್ಯಾಖ್ಯಾನ ಮಾಡಬಾರದು. ಟಿಪ್ಪುವನ್ನು ಖಳನಾಯಕನಂತೆ ನೋಡುವ ಅಗತ್ಯವಿಲ್ಲ. ಭಾರತವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎನ್ನುವುದು ಕೂಡ ಅರ್ಥಹೀನವಾದುದು ಎಂದು ತಿಳಿಸಿದರು.

    ವಯಸ್ಸಾದ ಹಸು ದುಡಿದು ಸುಸ್ತಾಗಿ ಸಾಕಾದಾಗ ತ್ಯಾಗ ಮಾಡಬೇಕು ಎನ್ನುವುದು ಕರ್ನಾಟಕ ಗೋಹತ್ಯೆ ನಿರ್ಬಂಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ- 1964ರಲ್ಲೇ ಇದೆ. ದನವನ್ನೇ ಮೇಯಿಸದೇ, ಗಂಜಲವನ್ನೇ ತೊಳೆಯದೇ ಹಸುಗಳನ್ನು ತಬ್ಬಿಕೊಂಡು ಫೋಟೊ ತೆಗೆಸಿಕೊಂಡರೆ ಸಾಕಿದಂತಲ್ಲ. ದನ, ಕರುಗಳ ಜೊತೆ ಬಿದ್ದು ಒದ್ದಾಡಿರುವವರು ಅವುಗಳೊಂದಿಗೆ ಬೆಳೆದವರು ನಾನು, ಸಿದ್ದರಾಮಯ್ಯ ಎಂದು ವಿವರಿಸಿದರು. ಶೇ 40ರಷ್ಟು ಕಮಿಷನ್‌ ವಿಚಾರ ಸೇರಿದಂತೆ ಯಾವ್ಯಾವು ತನಿಖೆಗೆ ಯೋಗ್ಯ ಇವೆಯೋ ಅವುಗಳನ್ನೆಲ್ಲ ತನಿಖೆ ಮಾಡಿಸುತ್ತೇವೆ. ಸಿದ್ದರಾಮಯ್ಯ ಹೊಂದಾಣಿಕೆ ರಾಜಕಾರಣ ಮಾಡುವಂತಹ ಕೀಳುಮಟ್ಟದ ರಾಜಕಾರಣಿಯಲ್ಲ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap