ಮೈಸೂರು:
ಒಗ್ಗಟ್ಟಿನ ಮಂತ್ರ ಪಠಿಸಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಜನವರಿ 3 ರಂದು ಮೈಸೂರು ಹಾಗೂ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಮಾಹಿತಿ ನೀಡಿದ್ದು, ಮೇಕೆದಾಟು ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿ ಕೆಪಿಸಿಸಿ ನಡೆಸಲು
ಉದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದಕ್ಕಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆಂದು ಹೇಳಿದ್ದಾರೆ.
ಕಾವೇರಿ ನದಿ ನೀರನ್ನು ತುರ್ತು ಸಂದರ್ಭದ ಬಳಕೆಗೆ ಸಂಗ್ರಹಿಸಿಟ್ಟುಕೊಳ್ಳುವುದಕ್ಕಾಗಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೂಪಿಸಿತ್ತು. ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಸಮಗ್ರ ಯೋಜನಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದರು.
ನಂತರ ಬಂದ ಬಿಜೆಪಿ ಸರ್ಕಾರ ಯೋಜನೆಗೆ ಅನುಮತಿ ಪಡೆಯುವುದಕ್ಕಾಗಿ ಕೇಂದ್ರ ಪರಿಸರ ಸಚಿವಾಲಯಕ್ಕೆ ವರದಿ ಕಳುಹಿಸಿದೆ. ಒಂದು ಮುಕ್ಕಾಲು ವರ್ಷವಾದರೂ ಅನುಮತಿ ಸಿಕ್ಕಿಲ್ಲ. ನಮ್ಮ ಜಿಲ್ಲೆ, ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಅನುಕೂಲಕ್ಕಾಗಿ ಈ ಯೋಜನೆ ಅನುಷ್ಠಾನವಾಗಬೇಕಿದೆ.
ಯೋಜನೆಯ ತ್ವರಿತ ಅನುಷ್ಠಾನಕ್ಕೆ ಆಗ್ರಹಿಸಿ ಪಕ್ಷದ ವತಿಯಿಂದ ಜ.9ರಿಂದ 19ರವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಮೇಕೆದಾಟುವಿನಿಂದ ಆರಂಭಗೊಳ್ಳಲಿರುವ ಪಾದಯಾತ್ರೆ ಕನಕಪುರ, ರಾಮನಗರ, ಬಿಡದಿ, ಕೆಂಗೇರಿ ಮಾರ್ಗವಾಗಿ ಬೆಂಗಳೂರು ತಲುಪಲಿದೆ.
ಈ ಪಾದಯಾತ್ರೆ ಬಗ್ಗೆ ಜನರಿಗೆ ತಿಳಿಸುವುದಕ್ಕಾಗಿ ಇಬ್ಬರೂ ಮುಖಂಡರು ನಗರಕ್ಕೆ ಬರಲಿದ್ದಾರೆ. ಪಾದಯಾತ್ರೆಯಲ್ಲಿ ಒಂದು ದಿನ ಜಿಲ್ಲೆಯ 2 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಜಿಲ್ಲೆಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿ ನಾಲ್ಕು ವರ್ಷಗಳಾದರೂ ಇನ್ನೂ ಕಾಲೇಜು ಆರಂಭವಾಗಿಲ್ಲ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಕಾಲೇಜು ಆರಂಭಿಸಲು ಕ್ರಮ ವಹಿಸಬೇಕು. ಕೃಷಿ ಕಾಲೇಜಿಗೆ ಸ್ವಂತ ಕಟ್ಟಡ ನಿರ್ಮಿಸಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಜನವರಿ 3 ರಂದು ಮೈಸೂರಿಗೆ ಭೇಟಿ ನೀಡಲಿದ್ದು, ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಲಿದ್ದಾರೆ.
ಪಕ್ಷವು ಬಸವೇಶ್ವರ ವೃತ್ತದಿಂದ ಕಾಂಗ್ರೆಸ್ ಭವನದವರೆಗೆ ರ್ಯಾಲಿ ನಡೆಸಲಿದ್ದು, ಐದು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ