ಮುಡಾ ಕ್ಲೀನ್‌ ಮಾಡುತ್ತೇನೆ : ಸಿದ್ದರಾಮಯ್ಯ

ಮೈಸೂರು:

    ಮುಡಾ ಗೆಬ್ಬೆದ್ದು ನಾರುತ್ತಿದೆ, ಅದನ್ನ ಕ್ಲೀನ್ ಮಾಡುವ ಕೆಲಸ ಮಾಡುತ್ತೇನೆ. ಮುಡಾ ಹಗರಣದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ‌. ತನಿಖಾ ವರದಿ ಬಂದ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇನೆ. ನಮ್ಮ ಕಾಲದಲ್ಲೂ ತಪ್ಪುಗಳು ಆಗಿದೆ. ಬಿಜೆಪಿ ಕಾಲದಲ್ಲೇ ಹೆಚ್ಚು ತಪ್ಪಾಗಿರುವುದು. ಅದನ್ನ ಸರಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಹೊಟ್ಟೆಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನೂ ಇಲ್ಲ. ಹೀಗಾಗಿ ಕಾನೂನಾತ್ಮಕವಾಗಿ ನಡೆದಿರುವ ವಿಚಾರವನ್ನ ಅಕ್ರಮ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ನಾನು ಹೆದರುತ್ತೀನಾ? ಇದರಿಂದ ನನ್ನನ್ನು ಹೆದರಿಸಲು ಸಾಧ್ಯನಾ ಎಂದು ಸಿಎಂ ಪ್ರಶ್ನಿಸಿದ್ದಾರೆ

   ಪತ್ನಿಗೆ ಸೈಟ್ ಕೊಟ್ಟಿರುವ ವಿಚಾರವಾಗಿ ಪ್ರತಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮದು ಅಕ್ರಮವೇ ಅಲ್ಲ. ಆ ಪ್ರಕರಣವೇ ಬೇರೆ, ಈಗ ನಡೆದಿರುವ ಪ್ರಕರಣಗಳೇ ಬೇರೆ ಎಂದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನನ್ನ ಪತ್ನಿಗೆ ಸೈಟ್​ ಕೊಟ್ಟಿದ್ದು. ಅವರು ನನ್ನನ್ನು ಕೇಳಿ ಸೈಟ್ ಕೊಟ್ಟಿದ್ದಾರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

   ಪತ್ನಿಗೆ ಸೈಟ್ ಹಂಚಿಕೆಯಾದಾಗ ನಾನು ವಿರೋಧ ಪಕ್ಷದ ನಾಯಕ. ನಾನು ಈಗ ವಿಪಕ್ಷ ನಾಯಕನನ್ನು ಕೇಳಿ ಕೆಲಸ ಮಾಡುತ್ತೇನಾ? ಮುಡಾ ತಪ್ಪು ಮಾಡಿ ನಂತರ ಪರಿಹಾರದ ಸೈಟ್ ಕೊಟ್ಟಿದೆ. ಭೂಮಿ ಕಳೆದುಕೊಂಡ ನಾವು ಪರಿಹಾರ ಪಡೆಯಬೇಕೋ ಬೇಡವೋ? ಈಗಲೂ ಅವರು ಕೊಟ್ಟಿರುವ ಸೈಟ್‌ ಅನ್ನು ವಾಪಸ್​ ಪಡೆಯಲಿ. ಲೆಕ್ಕದ ಪ್ರಕಾರ ಬಡ್ಡಿ ಸೇರಿಸಿ 62 ಕೋಟಿ ರೂಪಾಯಿ ಪಾವತಿಸಲಿ ಎಂದಿದ್ದೇನೆ. ಸೈಟ್ ಹಂಚಿಕೆ ವಿಚಾರ ಯಾವ ಹಂತದಲ್ಲೂ ಅಕ್ರಮವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

   ಎರಡನೇ ಬಾರಿ ಸಿಎಂ ಆಗಿದ್ದಕ್ಕೆ ಸಹಿಸಲು ಕೆಲವರಿಗೆ ಆಗುತ್ತಿಲ್ಲ. ಹಿಂದುಳಿದ ವರ್ಗದ ಸಿದ್ದರಾಮಯ್ಯ ಸಿಎಂ ಆಗಿದ್ದಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೊಟ್ಟೆ ಕಿಚ್ಚಿನಿಂದ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡಲು ಬೇರೆ ಏನೂ ಇಲ್ಲ, ಹೀಗಾಗಿ ಈ ವಿಚಾರವನ್ನು ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

   ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಇನ್ನೂ ಅಧಿಕೃತವಾದ ಯಾವ ವರದಿ ಬಂದಿಲ್ಲ. ಮಾಧ್ಯಮದವರು ತೋರಿಸುವ ವರದಿಯ ಪ್ರತಿ ಹೇಗೆ ನಂಬಲಿ? ವರ್ಗಾವಣೆ ಆಗುವ ಹಣದ ಎಲ್ಲಾ ವಿಚಾರ ನನ್ನ ಗಮನಕ್ಕೆ ಬರಲ್ಲ. ವಾಲ್ಮೀಕಿ ಹಗರಣ ಬಗ್ಗೆ ಮೂರು ಹಂತದಲ್ಲಿ ತನಿಖೆಯಾಗುತ್ತಿದೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಈಗ ಎಲ್ಲವೂ ತನಿಖಾ ಹಂತದಲ್ಲೇ ಇದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap