ಶಿಕ್ಷಣ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ

ತುಮಕೂರು:             ಸಂಕಷ್ಟದಲ್ಲಿ ಅತಿಥಿ ಉಪನ್ಯಾಸಕರು : ಬೀದಿಗೆ ಬಂತು ಬದುಕು

ಇದು ಜ್ಞಾನದ ಯುಗ. ಜಗತ್ತನ್ನು ಇಂದು ಆಳುತ್ತಿರುವುದೇ ಜ್ಞಾನ. ಆದರೇ ಪದವಿ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆಯುವ ಅತಿಥಿ ಉಪನ್ಯಾಸಕರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ.

ಗುರುವನ್ನು ದೈವವನ್ನಾಗಿ ಕಂಡ ನಾಡಿನೊಳಗೆ ಅತಿಥಿ ಉಪನ್ಯಾಸಕರ ಸಂಕಟದ ಕೂಗನ್ನು ಕೇಳುವವರೇ ಇಲ್ಲವಾಗಿ ಈ ಆಧುನಿಕ ಅಸ್ಪøಶ್ಯರ ಸಂಕಟ ಬಯಲ ರೋದನವಾಗುತ್ತಿದೆ.
ಭರತ ವರ್ಷವನ್ನು ವಿಶ್ವಗುರುವನ್ನಾಗಿಸುತ್ತೇವೆ ಎಂದು ಹೇಳುವ ಪ್ರಭುತ್ವವು ಅತಿಥಿ ಗುರುವನ್ನು ಲಘುವಾಗಿ ಕಂಡಿದ್ದೆ ಹೆಚ್ಚು.

ತರಗತಿಯಲ್ಲಿ ಪುಸ್ತಕ ಹಿಡಿದು ಬೋಧಿಸಬೇಕಾದ ಈ ಗುರು ವರ್ಗವು ಇಂದು ಬೀದಿಗೆ ಬಂದು ಬೂಟ್ ಪಾಲೀಶ್, ಧರಣಿ-ಸತ್ಯಾಗ್ರಹ, ಪಾದಯಾತ್ರೆ ಮಾಡುತ್ತಾ ಗೌರವ ಧನ ಹೆಚ್ಚಳ, ಸೇವಾ ಭದ್ರತೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆಯ ದಾರಿ ಹಿಡಿದಿದ್ದಾರೆ.

ನೂತನ ಶಿಕ್ಷಣ ನೀತಿ ಜಾರಿಯಾಗಿರುವ ಶೈಕ್ಷಣಿಕ ವ್ಯವಸ್ಥೆಯ ಸಂಕ್ರಮಣ ಕಾಲದ ಈ ಹೊತ್ತಿನಲ್ಲಿ ಆಳುವ ವರ್ಗವು ಅತಿಥಿ ಉಪನ್ಯಾಸಕರಿಗೆ ಶೀಘ್ರ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗದಿರುವುದು ದುರಂತದ ಸಂಗತಿ.

ಆಧುನಿಕ ಜೀತ ಪರಿಸ್ಥಿತಿ :

ರಾಜ್ಯದಲ್ಲಿರುವ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 14,516 ಅತಿಥಿ ಉಪನ್ಯಾಸಕರದ್ದು ಆಧುನಿಕ ಜೀತ ಪರಿಸ್ಥಿತಿ. ಕೇವಲ 11-13 ಸಾವಿರ ರೂ. ಮಾಸಿಕ ಗೌರವ ಧನಕ್ಕೆ ದುಡಿದು ಬದುಕು ದೂಡಬೇಕಾದ ಅನಿವಾರ್ಯತೆ ಇವರದ್ದು.

ಯುಜಿಸಿ ನಿಯಮಾವಳಿ ಪ್ರಕಾರ ಮಾಸಿಕ 50 ಸಾವಿರ ರೂ. ವೇತನ ಅಥವಾ 1 ಗಂಟೆಗೆ ಕನಿಷ್ಠ 1 ಸಾವಿರ ರೂ. ನೀಡಬೇಕು. ಆದರೆ ವಾರಕ್ಕೆ 8-10 ಗಂಟೆ ದುಡಿಯುವ ಇವರಿಗೆ ದಿನಕ್ಕೆ ದೊರೆಯುವುದು ಕೇವಲ 366-433 ರೂ. ಮಾತ್ರ.

ಅಲ್ಲದೇ ಈ ವರ್ಷದಿಂದ ಕೇವಲ ಒಂದು ಸೆಮಿಸ್ಟರ್‍ನ 3 ತಿಂಗಳ ಅವಧಿಗೆ ಅತಿಥಿ ಉಪನ್ಯಾಸಕರ ಸೇವೆಯನ್ನು ಕಡಿತಗೊಳಿಸಿರುವುದು ಅತಿಥಿಗಳ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹಬ್ಬಗಳನ್ನೂ ಮಾಡಲಾಗದ ಸ್ಥಿತಿ :

ರಾಜ್ಯ ಸರ್ಕಾರವು ಇತ್ತಿಚೆಗೆ ತನ್ನ ಖಾಯಂ ನೌಕರರಿಗೆ ಹಬ್ಬಗಳ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಮುಂಗಡ ಹಣವನ್ನು 10 ಸಾವಿರದಿಂದ 25 ಸಾವಿರ ರೂ. ಗೆ ಏರಿಸಿ ಹಾಗೂ ಕಳೆದ ದೀಪಾವಳಿ ಸಂದರ್ಭದಲ್ಲಿ ತುಟ್ಟಿಭತ್ಯೆಯನ್ನು ಶೇ.3 ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.

ಆದರೇ ಎಷ್ಟೋ ಅತಿಥಿ ಉಪನ್ಯಾಸಕರದ್ದು ಹಬ್ಬಗಳನ್ನು ಮಾಡದ ಹಾಸಿಹೊದ್ದ ಬಡತನದ ಪರಿಸ್ಥಿತಿ. ಇವರಿಗೂ ಒಂದು ಬದುಕಿದೆ ಎಂದು ಅರ್ಥಮಾಡಿಕೊಳ್ಳದ ಸರ್ಕಾರದ ಮಲತಾಯಿ ಧೋರಣೆ ಅಕ್ಷಮ್ಯ ಹಾಗೂ ಖಂಡನಾರ್ಹ.

ಹಳ್ಳ ಹಿಡಿಯುತ್ತಿರುವ ಎನ್‍ಇಪಿ :

ರಾಜ್ಯ ಸರ್ಕಾರವು ಈ ಶೈಕ್ಷಣಿಕ ವರ್ಷದಿಂದ ಅತ್ಯಂತ ಹುಮ್ಮಿಸ್ಸಿನಿಂದ ಜಾರಿಗೆ ತಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ, ಮಕ್ಕಳಿಗೆ ಬೋಧನೆಯಾಗದೆ ಹಳ್ಳ ಹಿಡಿಯುವ ಹಾದಿಯಲ್ಲಿದೆ.

ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ತರಾತುರಿಯಲ್ಲಿ ಜಾರಿ ಮಾಡಿರುವ ಸರ್ಕಾರವು ಶೈಕ್ಷಣಿಕ ವ್ಯವಸ್ಥೆಯಲ್ಲಿರುವ ಈ ರೀತಿಯ ಸಮಸ್ಯೆಗಳನ್ನು ರಿಪೇರಿ ಮಾಡಿಕೊಳ್ಳದೆ ಮುಗ್ಗರಿಸಿದೆ.

ಶೀಘ್ರ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಯದಿದ್ದರೆ ನೂತನ ಎನ್‍ಇಪಿಯೆ ಹಾಸ್ಯಾಸ್ಪದವಾಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.

ಅತಿಥಿಗಳಿಗೆ ಹೆಣ್ಣೂ ಸಿಗುತ್ತಿಲ್ಲ :

ಪ್ರಸ್ತುತ ದುಬಾರಿ ಬದುಕಿನ ಕಾಲದಲ್ಲಿ ಸರ್ಕಾರ ಕೊಡುವ ಗೌರವಧನ ಯಾವ ಮೂಲೆಗೂ ಸಾಲುವುದಿಲ್ಲ. ಆದ್ದರಿಂದ ರಾಜ್ಯದ ಎಷ್ಟೋ ಜನ ಅತಿಥಿ ಉಪನ್ಯಾಸಕರು ತಮ್ಮ ಕುಟುಂಬ ನಿರ್ವಹಣೆಗಾಗಿ ಬಾರ್ ಅಂಡ್ ರೆಸ್ಟೋರೆಂಟ್‍ಗಳಲ್ಲಿ ಸಪ್ಲೇಯರ್ ಆಗಿ, ಆನ್‍ಲೈನ್ ಫುಡ್ ಡಿಲಿವರಿ, ಟ್ಯೂಷನ್, ದಿನಗೂಲಿ ಕೆಲಸ ಮಾಡುತ್ತಿದ್ದಾರೆ.

ಕೊರೋನಾ ಲಾಕ್‍ಡೌನ್ ಸಂದರ್ಭದಲ್ಲಂತೂ ಇವರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ಇವರ ಈ ಪರಿಸ್ಥಿತಿಯನ್ನು ಮನಗಂಡು ಅತಿಥಿ ಉಪನ್ಯಾಸಕರಿಗೆ ಯಾರೂ ಹೆಣ್ಣು ಕೊಡದ ಸ್ಥಿತಿಯೊಂದು ಸಮಾಜದಲ್ಲಿ ನಿರ್ಮಾಣವಾಗುತ್ತಿದೆ.

ಆದ್ದರಿಂದ ಸರ್ಕಾರವು ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸಂವಿಧಾನದ ಆಶಯದಂತೆ ಈ ವರ್ಗಕ್ಕೆ ನ್ಯಾಯಯುತ ವೇತನ ನೀಡಲು ಇನ್ನಾದರೂ ಮುಂದಾಗಲಿ.

ಸರ್ಕಾರವು ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು 2017 ರಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಆ ಸಮಿತಿ ಎಲ್ಲಿ ಹೋಯಿತೊ ಗೊತ್ತಿಲ್ಲ. ಈಗ ಆತುರದಲ್ಲಿ ಕೇವಲ 4 ಜನ ಅಧಿಕಾರಿಗಳನ್ನೊಳಗೊಂಡ ಸಮಿತಿನ್ನು ಸರ್ಕಾರ ರಚಿಸಿದೆ.

ಇದೊಂದು ಕಣ್ಣೊರೆಸುವ ತಂತ್ರ. ನಮಗೆ ಯಾವ ಸಮಿತಿಯೂ ಬೇಡ. ಸೇವಾ ಭದ್ರತೆಯೊಂದೆ ನಮಗಿರುವ ಪರಹಾರ. ಈ ಬೇಡಿಕೆ ಈಡೇರಿಸದ ಹೊರತು ನಾವು ತರಗತಿಗೆ ಹೋಗುವುದಿಲ್ಲ.

ಡಾ.ಶಿವಣ್ಣ ತಿಮ್ಲಾಪುರ, ಅತಿಥಿ ಉಪನ್ಯಾಸಕರು

     ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗಿರುವ ಈ ಹೊತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ತರಗತಿಗಳನ್ನು ತೆಗೆದುಕೊಳ್ಳಲು ಆಗುತ್ತಿಲ್ಲವಲ್ಲ ಎಂಬ ನೋವು ನಮಗೂ ಇದೆ.

ಸರ್ಕಾರ ಶೀಘ್ರ ನಮ್ಮ ಸಮಸ್ಯೆ ಬಗೆಹರಿಸಿದರೆ ನಾಳೆಯಿಂದಲೆ ನಾವು ಕಾಲೇಜುಗಳಿಗೆ ತೆರಳಿ ಹೆಚ್ಚುವರಿ ತರಗತಿ ತೆಗೆದುಕೊಂಡು ಸಿಲಬಸ್ ಮುಗಿಸಿಕೊಡುತ್ತೇವೆ ಇದು ನಮ್ಮ ನೈತಿಕ ಜವಾಬ್ದಾರಿ.

ಪ್ರೊ.ಮಲ್ಲಿಕಾರ್ಜುನ್ ಮಂಚಸಂದ್ರ, ಅತಿಥಿ ಉಪನ್ಯಾಸಕರು

      ಅತಿಥಿ ಉಪನ್ಯಾಸಕರಿಗೆ ಸರ್ಕಾರ ಅತ್ಯಂತ ಕಡಿಮೆ ವೇತನ ನೀಡುತ್ತಿದೆ. ಇದೊಂದು ಮರೆ ಮಾಚಿದ ಉದ್ಯೋಗ. ಸರ್ಕಾರ ಬಾಹ್ಯವಾಗಿ ಕಾಲೇಜುಗಳು ಚೆನ್ನಾಗಿ ನಡೆಸುವಂತೆ ನಾಟಕವಾಡುತ್ತಾ, ಆಂತರಿಕವಾಗಿ ನಮ್ಮ ಬದುಕನ್ನು ಹಾಳುಮಾಡಿದೆ.

ಒಟ್ಟಾರೆ ಈ ಅತಿಥಿ ಉಪನ್ಯಾಸಕ ಹುದ್ದೆಯೆ ಅವೈಜ್ಞಾನಿಕವಾಗಿದೆ. ಹಾಗಾಗಿ ಸರ್ಕಾರ ಈ ಹುದ್ದೆಯನ್ನೆ ರದ್ದು ಮಾಡಲಿ.

-ಪ್ರೊ.ಹೊನ್ನಪ್ಪ ಕೆಂಕೆರೆ, ಅತಿಥಿ ಉಪನ್ಯಾಸಕರು

-ಚಿದಾನಂದ್ ಹುಳಿಯಾರ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link