ಬೆಂಗಳೂರು
ಬೆಂಗಳೂರು ಜಲಮಂಡಳಿಯು ನಗರದಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಕ್ಯೂ ಆರ್‌ಕೋಡ್ ಸ್ಕ್ಯಾನಿಂಗ್ ಮೂಲಕ ಅಥವಾ ಪ್ರೀಪೇಯ್ಡ್ ಕಾರ್ಡ್ ಮೂಲಕ ನೀರು ಪಡೆಯುವ ಹಾಗೂ ಏಕರೂಪ ದರ ನಿಗದಿ ಸಂಬಂಧ ಯೋಜನೆಯನ್ನು ರೂಪಿಸಿದೆ . ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿ ನಿರ್ವಹಿಸಲು ಜಲಮಂಡಳಿ ಮುಂದಾಗಿದ್ದು, ವರ್ಷದ ಹಿಂದೆಯೇ ಬಿಬಿಎಂಪಿಯಿಂದ ವಶಕ್ಕೆ ಪಡೆದಂತಹ ಶುದ್ದ ನೀರಿನ ಘಟಕಗಳ ನಿರ್ವಹಣಾ ಸ್ವರೂಪವನ್ನೇ ಬದಲಾಯಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿ ಟೆಂಡರ್ ಕರೆಯಲು ಮುಂದಾಗಿದೆ.
ಬಿಬಿಎಂಪಿ ನಿರ್ವಹಿಸುತ್ತಿದ್ದ ಶುದ್ಧ ನೀರಿನ ಘಟಕಗಳನ್ನು ಸ್ಥಳೀಯವಾಗಿ ನಿರ್ವಹಿಸುತ್ತಿದ್ದರೂ ಆದಾಯದ ಸ್ವರೂಪದ ಮಾಹಿತಿ ಕೊರತೆಯಿತ್ತು. ಜತೆಗೆ ವಿದ್ಯುತ್ ಸಂಪರ್ಕವೂ ಸರಿಯಾಗಿ ಇರಲಿಲ್ಲ. ನೀರು ಶುದ್ದೀಕರಣದ ನಿಖರ ಮಾಹಿತಿಯೂ ಗ್ರಾಹಕರಿಗೆ ಸಿಗುತ್ತಿರಲಿಲ್ಲ. ಈ ಕಾರಣದಿಂದಲೇ ಶುದ್ಧ ನೀರಿನ ಘಟಕಗಳ ನಿರ್ವಹಣೆಗೆ ಹೊಸ ರೂಪ ನೀಡುವ ಚಟುವಟಿಕೆ ಶುರುವಾಗಿದೆ. ಗ್ರಾಹಕರಿಗೂ ನಿರಂತರ, ಶುದ್ಧ ನೀರು ಸಿಗಲಿದೆ. ಏಕರೂಪದ ದರ ನಿಗದಿ ಮಾಡುತ್ತಿದ್ದು, ನಾಣ್ಯ ಹಾಕುವ ಪ್ರಮೇಯವೂ ಇರುವುದಿಲ್ಲ. ಜಲಮಂಡಳಿ ರೂಪಿಸುವ ಕಾರ್ಡ್ ಬಳಸಿಕೊಂಡು ಇಲ್ಲವೇ ಕ್ಯೂ ಆರ್ ಕೋಡ್ ಬಳಸಿ ಸುಲಭವಾಗಿ ನೀರು ಪಡೆಯಬಹುದು. ಇದಕ್ಕಾಗಿಯೇ ಆಟೋಮೇಷನ್ ತಂತ್ರಜ್ಞಾನ ಬಳಸುವುದಕ್ಕೆ ಟೆಂಡರ್ ಕರೆಯಲಾಗಿದೆ. 10 ಕೋಟಿ ರೂ. ವೆಚ್ಚ ಮಾಡುವ ಮೂಲಕ ಶುದ್ಧ ಕುಡಿಯುವ ನೀರಿನ ಎಲ್ಲ ಘಟಕಗಳ ದುರಸ್ತಿ ಮಾಡಲಾಗುತ್ತದೆ.
ಗುತ್ತಿಗೆ ನಿಯಮಾವಳಿಗಳ ಪ್ರಕಾರ ಶೇ. 60ರಷ್ಟು ಆದಾಯ ಗುತ್ತಿಗೆದಾರರರಿಗೆ, ಶೇ. 40ರಷ್ಟು ಆದಾಯ ಜಲಮಂಡಳಿಗೆ ಬರಲಿದೆ. ಮಂಡಳಿಯೇ ವಿದ್ಯುತ್ ಬಿಲ್ ಪಾವತಿಸಿದರೆ, ಗುತ್ತಿಗೆದಾರರು ಘಟಕದ ನಿರ್ವಹಣೆ ಮಾಡಬೇಕಾಗುತ್ತದೆ. ಸರ್ಕಾರಕ್ಕೆ ವಿದ್ಯುತ್ ಬಿಲ್ ಜತೆಗೆ ಸಂಗ್ರಹವಾದ ಮೊತ್ತದಲ್ಲಿ ಶೇ. 10ರಷ್ಟು ಆದಾಯವೂ ಬರಲಿದೆ. ಕನ್ಸಲೆನ್ಸಿ ಕಂಪನಿಗೆ ಶೇ. 5ರಷ್ಟು ಆದಾಯ ಹೋಗಲಿದೆ. ಜಲಮಂಡಳಿ ಕಿಯೋಸ್ಕ್ ಇಲ್ಲವೇ ಸೇವಾ ಕೇಂದ್ರಗಳಲ್ಲಿ ಗ್ರಾಹಕರು ಕಾರ್ಡ್ ಖರೀದಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬಿಬಿಎಂಪಿ ನಿರ್ವಹಣೆಯಲ್ಲಿದ್ದಾಗ ಏಕರೂಪದಲ್ಲಿ ಇರಲಿಲ್ಲ. ಕೆಲವು ಕಡೆ 20 ಲೀಟರ್‌ಗೆ 5 ರೂ., 10 ರೂ. ಇಲ್ಲವೇ 15 ರೂ. ಇತ್ತು. ಇದನ್ನು ತಪ್ಪಿಸಿ ಒಂದೇ ದರ ನಿಗದಿ ಮಾಡುವ ನಿರ್ಧಾರವನ್ನು ಜಲಮಂಡಳಿ ಕೈಗೊಂಡಿದೆ. ಆ ನಂತರ ವಿದ್ಯುತ್ ಸಂಪರ್ಕ ಪಡೆದು ಪ್ರತಿ ತಿಂಗಳು ಘಟಕವೊಂದರಿಂದ ಬೆಸ್ಕಾಂಗೆ ಅಂದಾಜು 12 ಸಾವಿರ ರೂ.ವರೆಗೆ ಬಿಲ್ ಪಾವತಿಸುವ ತೀರ್ಮಾನ ಮಾಡಲಾಗಿದೆ.
55ರಿಂದ 60 ಘಟಕಗಳಿಗೆ ಒಂದು ಪ್ಯಾಕೇಜ್ ನಂತೆ ಒಟ್ಟು 20 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲು ನಿರ್ಧರಿಸಿದ್ದು, ಮಾಸಾಂತ್ಯದೊಳಗೆ ಈ ಪ್ರಕ್ರಿಯೆ ಪೂರ್ಣಗೊಂಡು, ಡಿಸೆಂಬರ್ ವೇಳೆಗೆ ಘಟಕಗಳ ಮರು ಚಾಲನೆ ಆರಂಭಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಜಲಮಂಡಳಿ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗಕ್ಕೆ ಜವಾಬ್ದಾರಿ ನೀಡಿದ್ದರೂ ವಿಳಂಬವಾಗಿತ್ತು. ಕೊನೆಗೆ ಇದನ್ನು ವಿನ್ಯಾಸ ಮತ್ತು ಗುಣಮಟ್ಟದ ವಿಭಾಗಕ್ಕೆ ವಹಿಸಲಾಯಿತು. ಆ ವಿಭಾಗದಲ್ಲಿ ಯೋಜನೆ ರೂಪಿಸಿ ಘಟಕಗಳ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.








