ಶಿರಾ :

ಕಳೆದ ಮೂರ್ನಾಲ್ಕು ತಿಂಗಳ ಹಿಂದಷ್ಟೆ ಬಿಜೆಪಿಯು ಶಿರಾ ಕ್ಷೇತ್ರದಲ್ಲಿ ತನ್ನದೇ ಆದ ಖಾತೆಯನ್ನು ತೆರೆಯುವ ಮೂಲಕ ಓರ್ವ ಶಾಸಕ ಬಿಜೆಪಿ ಪಕ್ಷದಿಂದ ಆಯ್ಕೆಗೊಳ್ಳುತ್ತಾರೆಂಬುದನ್ನು ನಿಜಕ್ಕೂ ಯಾರೂ ಕೂಡ ಊಹಿಸಿರಲಿಲ್ಲ. ಪ್ರಜಾಪ್ರಭುತ್ವದ ಆರಂಭದ ದಿನಗಳಿಂದಲೂ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಎಂದಿಗೂ ತನ್ನ ಖಾತೆಯನ್ನೇ ತೆರೆಯದ ಬಿ.ಜೆ.ಪಿ. ಪಕ್ಷಕ್ಕೆ ಈ ಕ್ಷೇತ್ರದಲ್ಲಿ ನೆಲೆ ಎಂಬುದೇ ಇರಲಿಲ್ಲ. ಬಿ.ಜೆ.ಪಿ. ಪಕ್ಷದಿಂದ ಸ್ಪರ್ಧಿಸಿ ಠೇವಣಿಯನ್ನೂ ಕಳೆದುಕೊಂಡವರೆ ಇಲ್ಲಿ ಹೆಚ್ಚಾಗಿದ್ದರು.
ಶಾಸಕ ಬಿ.ಸತ್ಯನಾರಾಯಣ್ ಅವರ ಅಕಾಲಿಕ ಮರಣದಿಂದ ಉಪ ಚುನಾವಣೆ ಎದುರಾಗಿ ಇಡೀ ಕ್ಷೇತ್ರದಲ್ಲಿ ಚುನಾವಣೆಯ ಕಾವು ಬಿಸಿಯೇರಿತಲ್ಲದೆ ಚುನಾವಣೆಯು ಘೋಷಣೆಯಾಗುವ ಮುನ್ನವೇ ಬಹುತೇಕ ಮಂದಿ ಪಕ್ಷಾಂತರಿಗಳಾಗಿಬಿಟ್ಟರು. ಬಿ.ಸತ್ಯನಾರಾಯಣ್ ಅಕಾಲಿಕ ಮರಣದ ನಂತರ ಉಪ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆಲ್ಲಬಹುದೆಂಬ ನಿರೀಕ್ಷೆಯನ್ನೂ ಮಾಡಲಾಗದೆ ಇಡೀ ಕ್ಷೇತ್ರದಲ್ಲಿ ಚುನಾವಣೆಯೇ ಗೊಂದಲದ ಗೂಡಾದ ಸಂದರ್ಭದಲ್ಲಿ ಪಕ್ಷಾಂತರಿಗಳ ಕಾರುಬಾರು ಬಹು ಜೋರಾಗಿಯೇ ನಡೆಯಿತು.
ರಾಜಕಾರಣದ ಹಾದಿಯಲ್ಲಿ ಕೇವಲ ನಾಲ್ಕು ವರ್ಷಗಳಿಂದೀಚೆಗಷ್ಟೆ ಕ್ಷೇತ್ರದಲ್ಲಿ ಸಮಾಜಸೇವೆ ಮಾಡಿಕೊಂಡು ಓಡಾಡುತ್ತಿದ್ದ ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ ಅವರ ಪುತ್ರ ಡಾ.ಸಿ.ಎಂ.ರಾಜೇಶ್ಗೌಡ ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರದ ಶಾಸಕರಾಗುತ್ತಾರೆಂಬುದನ್ನು ಯಾರೂ ಕೂಡ ನಿರೀಕ್ಷೆಯನ್ನೇ ಮಾಡಿರಲಿಲ್ಲ. ಕಳೆದ 30 ವರ್ಷಗಳಿಂದಲೂ ಇಡೀ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್ಗಳು, ಕೊರೋನಾ ಸಂದರ್ಭದಲ್ಲಿ ಸಾವಿರಾರು ಮಂದಿ ಕಡು ಬಡವರಿಗೆ ಉಚಿತ ದಿನಸಿ ವಿತರಣೆ ಮಾಡುತ್ತಾ ರಾಜಕೀಯವಾಗಿಯೂ ಒಂದಷ್ಟು ಹೆಸರು ಸಂಪಾದಿಸಿದವರಲ್ಲಿ ಅನೇಕ ಮಂದಿಯ ಮುಂದೆ ಕೇವಲ ನಾಲ್ಕು ವರ್ಷಗಳಲ್ಲಿ ಸಮಾಜ ಸೇವೆ ಮಾಡಿ ಮತದಾರರನ ಕೃಪೆಗೆ ಪಾತ್ರರಾಗಿಬಿಟ್ಟ ಡಾ.ರಾಜೇಶ್ಗೌಡರಿಗೆ ನಿಜಕ್ಕೂ ಬಿ.ಜೆ.ಪಿ. ಪಕ್ಷ ಒಂದು ರೀತಿಯಲ್ಲಿ ಬಂಪರ್ ಕೊಡುಗೆ ನೀಡಿದೆ ಎಂದರೂ ತಪ್ಪಾಗಲಾರದು.
ಉಪ ಚುನಾವಣೆಯ ಕಣದಲ್ಲಿ ಪ್ರಚಾರದ ಅಬ್ಬರದ ನಡುವೆ ಅನೇಕ ರಾಜಕೀಯ ದುರೀಣರು ಈ ಕ್ಷೇತ್ರದಲ್ಲಿ ಬಿ.ಜೆ.ಪಿ. ಖಾತೆ ತೆರೆಯುವುದಿರಲಿ ಎರಡನೆಯ ಸ್ಥಾನಕ್ಕೂ ಬರುವುದಿಲ್ಲವೆಂದು ಟೀಕಿಸಿದ್ದವರಿಗೆ ಕೇಸರಿ ಪಾಳೆಯ ಅಂತಹವರಿಗೆ ಸೂಜಿ ಚುಚ್ಚಿದ್ದು ಅಚ್ಚರಿಯೇ ಸರಿ.
ಡಾ.ರಾಜೇಶ್ಗೌಡಗೆ ಬಿ.ಜೆ.ಪಿ. ಪಕ್ಷದಿಂದ ಟಿಕೆಟ್ ನೀಡುತ್ತಿದ್ದಂತೆಯೇ ಬಿ.ಜೆ.ಪಿ. ಪಕ್ಷದಿಂದ ಕಳೆದ ಚುನಾವಣೆಗಳಲ್ಲಿ ಟಿಕೆಟ್ ಪಡೆದು ಪರಾಜಯಗೊಂಡಿದ್ದ ಬಿ.ಕೆ.ಮಂಜುನಾಥ್ ಹಾಗೂ ಎಸ್.ಆರ್.ಗೌಡ ಟಿಕೆಟ್ ನೀಡಲಿಲ್ಲವೆಂಬ ಕಾರಣಕ್ಕೆ ಮುನಿಸಿಕೊಂಡು ಚುನಾವಣೆಯಿಂದ ಹಿಂದೆ ಸರಿಯುವರೆಂಬ ವದಂತಿ ವ್ಯಾಪಕವಾಗಿತ್ತಾದರೂ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆದು ಆ ಪಕ್ಷದ ವರಿಷ್ಠರು ಈ ಜೋಡೆತ್ತುಗಳನ್ನು ಅಗಲದಂತೆ ನೋಡಿಕೊಂಡಿದ್ದು ಪಕ್ಷದ ಅಭ್ಯರ್ಥಿ ರಾಜೇಶ್ಗೌಡ ಅವರ ಗೆಲುವಿಗೂ ಕಾರಣವಾಗಿತ್ತು.
ಚುನಾವಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿಯಾದಿಯಾಗಿ ಪಕ್ಷದ ಎಲ್ಲಾ ಮುಖಂಡರೂ ಮಂಜುನಾಥ್ ಹಾಗೂ ಎಸ್.ಆರ್.ಗೌಡರಿಬ್ಬರಿಗೂ ನಿಗಮ ಮಂಡಳಿಯ ಸ್ಥಾನ ನೀಡುವ ಭರವಸೆ ನೀಡಿ ಅವರನ್ನು ಚುನಾವಣೆಯಲ್ಲಿ ಸಕ್ರಿಯವಾಗಿ ಬಳಸಿಕೊಳ್ಳಲಾಗಿತ್ತು. ಚುನಾವಣೆ ಮುಗಿದು ಪಕ್ಷದ ಅಭ್ಯರ್ಥಿ ಗೆಲುವು ಕಂಡ ಒಂದು ತಿಂಗಳ ಒಳಗೇ ರಾಜ್ಯ ಬಿ.ಜೆ.ಪಿ. ಪಕ್ಷ ಇವರಿಬ್ಬರಿಗೂ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕೊಟ್ಟ ಮಾತನ್ನು ಕೊನೆಗೂ ಉಳಿಸಿಕೊಂಡಿದೆ.
ಬಿ.ಕೆ.ಮಂಜುನಾಥ್ಗೆ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನ ಹಾಗೂ ಎಸ್.ಆರ್.ಗೌಡರಿಗೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಸ್ಥಾನ ಲಭಿಸಿದ್ದು, ಈ ಇಬ್ಬರಿಗೂ ಬಿ.ಜೆ.ಪಿ. ಬಂಪರ್ ಕೊಡುಗೆ ನೀಡಿದೆ. ಒಂದು ರೀತಿಯಲ್ಲಿ ಇಡೀ ಕ್ಷೇತ್ರದಲ್ಲಿ ಸರ್ಕಾರದ ಒಂದು ಅಂಗವಾಗಿ ಕೆಲಸ ಮಾಡುವ ಪ್ರತಿನಿಧಿಗಳ ಸಂಖ್ಯೆಯನ್ನು ಹೆಚ್ಚಿಸಿರುವ ಸರ್ಕಾರ ಕಳೆದ ಕೇವಲ 20 ದಿನಗಳ ಅಂತರದಲ್ಲಿಯೇ ಮೇಲಿಂದ ಮೇಲೆ ಬಂಪರ್ ಸಿಗುವಂತೆ ಮಾಡಿದೆ.
ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಲ್ಲಿದ್ದ ಚಿದಾನಂದ್ ಎಂ.ಗೌಡ ಆ ಪಕ್ಷದಿಂದ ಟಿಕೆಟ್ ಲಭ್ಯವಾಗದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಅಲ್ಲಿಂದ ಚಿದಾನಂದ್ಗೌಡ ಅವರ ರಾಜಕೀಯ ಭವಿಷ್ಯವೆ ನಂದಿಹೋಯಿತೆಂದು ಕೆಲ ರಾಜಕೀಯ ಮುಖಂಡರು ಬಾಯಿ ಚಪಲ ತೀರಿಸಿಕೊಂಡರು. ಹಠ ಬಿಡದ ಚಿದಾನಂದ್ ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡು ಇತ್ತೀಚೆಗಷ್ಟೆ ನಡೆದ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಳ್ಳುವ ಮೂಲಕ ತಮ್ಮ ಭವಿಷ್ಯದ ಬಗ್ಗೆ ಲೇವಡಿ ಮಾಡಿಕೊಂಡವರಿಗೆ ಚಾಟಿ ಬೀಸಿ ಹೀಗೂ ರಾಜಕೀಯ ಮಾಡಬಹುದೆಂದು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಶಿರಾ ಕ್ಷೇತ್ರದಲ್ಲೀಗ ಕೇಸರಿ ಪಡೆಯ ರಾಜಕಾರಣಿಗಳಿಗೆ ಸಂಭ್ರಮವೋ ಸಂಭ್ರಮವಾಗಿದೆ. ಒಂದು ಕಡೆದ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್ಗೌಡ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ ಸೇರಿದಂತೆ ಶಿರಾ ಕ್ಷೇತ್ರಕ್ಕೆ ಸಮೀಪವಾದ ಇದೇ ತಾಲ್ಲೂಕಿನ ಬುಕ್ಕಾಪಟ್ಟಣ ಹೋಬಳಿಯೂ ಸೇರಿಕೊಂಡ ಚಿ.ನಾ.ಹಳ್ಳಿ ಕ್ಷೇತ್ರದ ಕೆ.ಎಸ್.ಕಿರಣ್ಕುಮಾರ್ಗೂ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸರ್ಕಾರ ನೀಡಿದ್ದು ಬಂಪರ್ ಮೇಲೆ ಬಂಪರ್ ಲಭಿಸಿದೆ.
ಶಿರಾ ಕ್ಷೇತ್ರದಲ್ಲಿ ಈವರೆಗೆ ಸೋತು ಸುಣ್ಣವಾಗಿದ್ದ ಬಿ.ಜೆ.ಪಿ. ಚುನಾವಣೆಯಲ್ಲಿ ದುಡಿದವರಿಗೆ ಅಧಿಕಾರ ನೀಡುವ ಮೂಲಕ ತನ್ನ ಋಣವನ್ನು ತೀರಿಸಿಕೊಂಡಿದೆ ನಿಜ. ಆದರೆ ಚುನಾವಣೆಗೂ ಮುನ್ನ ಸರ್ಕಾದಿಂದ ನೇಮಕಗೊಂಡವರು, ಚುನಾವಣೆಗಳಲ್ಲಿ ಆಯ್ಕೆಗೊಂಡ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿಗಳ ಹೊಣೆಗಾರಿಕೆಯೂ ಹೆಚ್ಚಾಗಿದೆ ಎಂಬುದನ್ನು ಅರಿತರೆ ಒಳಿತು.
ಶಿರಾ ಕ್ಷೇತ್ರ ಅತ್ಯಂತ ಬರ ಪೀಡಿತ ಪ್ರದೇಶ. ಇಲ್ಲಿ ಒಂದು ವರ್ಷ ಮಳೆ ಬಂದರೆ ಮತ್ತೊಂದು ವರ್ಷ ಇಡೀ ಕ್ಷೇತ್ರದಲ್ಲಿ ಭೀಕರ ಬರಗಾಲವೆ ಇರುತ್ತದೆ. ಕುಡಿಯುವ ನೀರಿಗೂ ವ್ಯಥೆ ಪಡುವಂತಹ ಸನ್ನಿವೇಶಗಳನ್ನು ಇಲ್ಲಿನ ಜನ ಅನುಭವಿಸಿದ್ದಾರೆ, ಅನುಭವಿಸುತ್ತಲೂ ಇದ್ದಾರೆ.
ಮದಲೂರು ಕೆರೆಯನ್ನೇ ರಾಜಕೀಯ ದಾಳವನ್ನಾಗಿ ಮಾಡಿಕೊಂಡು ಎಲ್ಲಾ ರಾಜಕೀಯ ಪಕ್ಷಗಳೂ ಈ ಕ್ಷೇತ್ರದ ಮತದಾರನಿಗೆ ಮಂಕುಬೂದಿ ಎರಚುತ್ತಲೆ ರಾಜಕೀಯ ಮೇಲಾಟಗಳನ್ನು ನಡೆಸಿ, ಈ ನಿಟ್ಟಿನಲ್ಲಿ ಸಫಲವೂ ಆಗಿದ್ದವು. ಮತದಾರರ ಬಹು ನಿರೀಕ್ಷೆಯಾದ ಮದಲೂರು ಕೆರೆಗೆ ನೀರು ಹರಿಸುವ ದಾಳವನ್ನು ಉಪ ಚುನಾವಣೆಯಲ್ಲಿ ಬಿ.ಜೆ.ಪಿ. ಪಕ್ಷವೂ ಉರುಳಿಸಿದ ಪರಿಣಾಮ ಆ ಪಕ್ಷದ ಅಭ್ಯರ್ಥಿಯು ಯಶಸ್ಸು ಕಾಣಲು ಸಾಧ್ಯವಾಗಿದೆ.
ಕಳೆದ ಎರಡು ಚುನಾವಣೆಗಳಲ್ಲಿ ನಿರಂತರವಾಗಿ ಆಯ್ಕೆಗೊಂಡು ಕ್ಷೇತ್ರದಲ್ಲಿ ಸಮಗ್ರವಾದ ಅಭಿವೃದ್ಧಿಯ ಪರ್ವವನ್ನೇ ಸೃಷ್ಟಿಸಿದ್ದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಅವರನ್ನೇ ಕಳೆದ ಎರಡು ಚುನಾವಣೆಗಳಲ್ಲಿ ತಿರುವಿ ಹಾಕಿ ಅಭಿವೃದ್ಧಿಯಷ್ಟೇ ಅಲ್ಲದೆ ಸ್ವಾಭಿಮಾನವೂ ಇರಬೇಕೆಂದು ಈ ಕ್ಷೇತ್ರದ ಮತದಾರ ಅವರಿಗೂ ಕೂಡ ಪಾಠ ಕಲಿಸಿದ್ದು ನಿಜಕ್ಕೂ ಒಂದು ಇತಿಹಾಸವೆ ಸರಿ.
ಶಿರಾ ಕ್ಷೇತ್ರದ ಮತದಾರರು ಬಹು ನಿರೀಕ್ಷೆಯನ್ನಿಟ್ಟುಕೊಂಡು ಬಿ.ಜೆ.ಪಿ. ಪಕ್ಷಕ್ಕೆ ಮಣೆ ಹಾಕಿದ್ದಾರೆಂಬುದನ್ನು ಸರ್ಕಾರದ ಅಂಗವಾಗಿ ನೇಮಕಗೊಂಡಿರುವ ಇಲ್ಲಿನ ಯಾವುದೇ ಜನಪ್ರತಿನಿಧಿಗಳು ಮರೆಯಬಾರದು. ಇಂದಿಗೂ ತಾಲ್ಲೂಕಿನ ಅದೆಷ್ಟೋ ಹಳ್ಳಿಗಳು ವಿದ್ಯುತ್ ಸಂಪರ್ಕವನ್ನೂ ಕಾಣದೆ ಕತ್ತಲಲ್ಲಿ ಕಾಲ ದೂಡುತ್ತಿವೆ. ಅದೆಷ್ಟೋ ಗ್ರಾಮೀಣ ಭಾಗದ ಹಟ್ಟಿ, ತಾಂಡಾಗಳ ರಸ್ತೆಗಳು ಸ್ವಾತಂತ್ರ್ಯ ಕಂಡು 75 ವರ್ಷಗಳು ಉರುಳಿದರೂ ರಸ್ತೆಗಳನ್ನೂ ಕಂಡಿಲ್ಲ. ಇಂತಹ ಅನೇಕ ಹಳ್ಳಿ ಹಾಗೂ ಶಿರಾ ನಗರದಲ್ಲಿ ಈವರೆಗೂ ಸೂರಿಲ್ಲದೆ ಪರಿತಪಿಸುತ್ತಿರುವ ಅರ್ಹ ಫಲಾನುಭವಿಗಳಿಗೊಂದು ಸೂರು ಕಲ್ಪಿಸುವ ಕೆಲಸವೂ ಆಗಿಲ್ಲ.
ಕೃಷಿ ಕಾಯಕಕ್ಕೆ ಮಳೆ-ಬೆಳೆ ಇಲ್ಲದೆ ಬೇಸತ್ತು ರಾಜಧಾನಿ ಸೇರಿಕೊಂಡ ಅದೆಷ್ಟೋ ನಿರುದ್ಯೋಗಿ ಯುವಕರು ಕೋವಿಡ್ ಮಹಾಮಾರಿಯಿಂದ ಹಿಂತಿರುಗಿ ಹಳ್ಳಿಗೆ ಬಂದಿದ್ದು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದಾರೆ. ರೈಲು ಸಂಪರ್ಕದ ಯೋಜನೆ ನೆನೆಗುದಿಗೆ ಬಿದ್ದಿದೆ. ಭದ್ರಾ ನೀರಿನ ಆಸೆಯೂ ಇಲ್ಲಿನ ಜನರಿಗಿದೆ. ಇಂತಹ ಬೆಟ್ಟದಷ್ಟು ಸಮಸ್ಯೆಗಳು ನಮ್ಮ ಕಣ್ಣು ಮುಂದೆಯೇ ಇದ್ದು ಚುನಾವಣೆಗಳಲ್ಲಿ ವಿಜೇತರಾದವರು ತಮ್ಮ ಜವಾಬ್ದಾರಿಯನ್ನು ಈಗ ಮೆರೆಯುವುದು ಅನಿವಾರ್ಯವಾಗಿದೆ.
ಅಧಿಕಾರ ಸಿಕ್ಕಿದೆ ಸಾಕೆಂದು ಬೀಗುವ, ಗೂಟದ ಕಾರುಗಳಲ್ಲಿ ಓಡಾಡಿಕೊಂಡು ಕೇವಲ ಜನ ಸಂಪರ್ಕದಲ್ಲಿಯೇ ಇದ್ದು ಮತ್ತೊಂದು ಚುನಾವಣೆ ಬಯಸುವ ಮೊದಲು ಚುನಾವಣೆಗಳಲ್ಲಿ ಮತದಾರರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವ ಕೆಲಸ ಮೊದಲಾಗದಿದ್ದರೆ ನಿಜಕ್ಕೂ ಈ ಕ್ಷೇತ್ರದ ಮತದಾರ ಕ್ಷಮಿಸಲಾರ.
ಕಳೆದ 30 ವರ್ಷಗಳಿಂದಲೂ ಇಡೀ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್ಗಳು, ಕೊರೋನಾ ಸಂದರ್ಬದಲ್ಲಿ ಸಾವಿರಾರು ಮಂದಿ ಕಡು ಬಡವರಿಗೆ ಉಚಿತ ದಿನಸಿ ವಿತರಣೆ ಮಾಡುತ್ತಾ ರಾಜಕೀಯವಾಗಿಯೂ ಒಂದಷ್ಟು ಹೆಸರು ಸಂಪಾದಿಸಿದ ಅನೇಕ ಮಂದಿಯ ಮುಂದೆ ಕೇವಲ ನಾಲ್ಕು ವರ್ಷಗಳಲ್ಲಿ ಸಮಾಜ ಸೇವೆ ಮಾಡಿ ಮತದಾರರನ ಕೃಪೆಗೆ ಪಾತ್ರರಾಗಿಬಿಟ್ಟ ಡಾ.ರಾಜೇಶ್ಗೌಡರಿಗೆ ನಿಜಕ್ಕೂ ಬಿ.ಜೆ.ಪಿ. ಪಕ್ಷ ಒಂದು ರೀತಿಯಲ್ಲಿ ಬಂಪರ್ ಕೊಡುಗೆ ನೀಡಿದೆ ಎಂದರೂ ತಪ್ಪಾಗಲಾರದು.
ಈ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಡಿ.ಎಸ್. ಪಕ್ಷದಲ್ಲಿದ್ದ ಚಿದಾನಂದ್ ಎಂ.ಗೌಡ ಆ ಪಕ್ಷದಿಂದ ಟಿಕೆಟ್ ಲಭ್ಯವಾಗದೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದರು. ಅಲ್ಲಿಂದ ಚಿದಾನಂದ್ಗೌಡ ಅವರ ರಾಜಕೀಯ ಭವಿಷ್ಯವೇ ನಂದಿಹೋಯಿತೆಂದು ಕೆಲ ರಾಜಕೀಯ ಮುಖಂಡರು ಬಾಯಿ ಚಪಲ ತೀರಿಸಿಕೊಂಡರು. ಹಠ ಬಿಡದ ಚಿದಾನಂದ್ ಬಿ.ಜೆ.ಪಿ. ಪಕ್ಷಕ್ಕೆ ಸೇರ್ಪಡೆಗೊಂಡು ಇತ್ತೀಚೆಗಷ್ಟೆ ನಡೆದ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಗೊಳ್ಳುವ ಮೂಲಕ ತಮ್ಮ ಭವಿಷ್ಯದ ಬಗ್ಗೆ ಲೇವಡಿ ಮಾಡಿಕೊಂಡವರಿಗೆ ಚಾಟಿ ಬೀಸಿ, ಹೀಗೂ ರಾಜಕೀಯ ಮಾಡಬಹುದೆಂದು ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ಬರಗೂರು ವಿರೂಪಾಕ್ಷ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








