ಮನುಷ್ಯ ಸದೃಢಗೊಳ್ಳುವುದು ಅಧ್ಯಾತ್ಮಿಕತೆಯಿಂದ ಹೊರತು ಹಣದಿಂದಲ್ಲ

 ಶಿರಾ : 

     ಶ್ರಮದ ಬದುಕಿಗೆ ಕಟ್ಟು ಬೀಳದಿದ್ದರೆ ಯಾವುದೇ ಸಮಾಜ ಪ್ರಗತಿಯಾಗಲು ಸಾಧ್ಯವಿಲ್ಲ. ಮನುಷ್ಯ ತನ್ನನ್ನು ತಾನು ಸದೃಢಗೊಳಿಸಿಕೊಳ್ಳಬೇಕಾದಲ್ಲಿ ಆತ ಆಧ್ಯಾತ್ಮಿಕೆಯಿಂದ ಸದೃಢಗೊಳ್ಳಬೇಕೆ ಹೊರತು ಕೇವಲ ಹಣದಿಂದ ಸಾಧ್ಯವಿಲ್ಲ ಎಂದು ಶ್ರೀ ಕ್ಷೇತ್ರ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. 

      ಶಿರಾ ನಗರದ ಶ್ರೀ ಕಟ್ಟೆ ಬಸವೆಶ್ವರಸ್ವಾಮಿ ದೇವಸ್ಥಾನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ಶ್ರೀ ಕಟ್ಟೆ ಬಸವೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್, ವೀರಶೈವ ಲಿಂಗಾಯಿತ ಹಿತ ರಕ್ಷಣಾ ಸಮಿತಿ ಹಾಗೂ ವೀರಶೈವ ಮಹಿಳಾ ಸಮಿತಿಯ ಸಹಯೋಗದಲ್ಲಿ ಗುರುವಾರ ನಡೆದ ಅಭಿನಂಧನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

      ಶಿರಾ ತಾಲ್ಲೂಕು ಅತ್ಯಂತ ಹಿಂದುಳಿದ ತಾಲ್ಲೂಕಷ್ಟೇ ಅಲ್ಲದೆ ಈ ಭಾಗದ ರೈತರ ಬದುಕು ಹಸನಾಗಬೇಕಾದಲ್ಲಿ ಶಾಶ್ವತ ನೀರಾವರಿಯನ್ನು ಒದಗಿಸುವ ಕೆಲಸವಾಗಬೇಕು. ಮಳೆ-ಬೆಳೆಯ ವೈಫಲ್ಯಗಳ ನಡುವೆ ಈ ಭಾಗದ ಜನ ಬದುಕು ಸವೆಸುತ್ತಿದ್ದು, ಇಲ್ಲಿನ ಜನತೆಗೆ ನೀಡಿದ ಭರವಸೆಯನ್ನು ಸರ್ಕಾರಗಳು ಈಡೇರಿಸುವಂತಾಗಬೇಕು ಎಂದರು.

      ಮಕ್ಕಳು ಸಮಾಜದ ಆಸ್ತಿಯಾಗಿದ್ದು ಇಂತಹ ಮಕ್ಕಳಲ್ಲಿ ದೈವತ್ವನ್ನು ಕಾಣಬೇಕು. ಪ್ರತಿಯೊಂದು ಹಳ್ಳಿಗಳಲ್ಲೂ ಹಸಿದ ಕುಟುಂಬಗಳಿದ್ದು ಇಂತಹ ಕುಟುಂಬಗಳಲ್ಲಿ ಪ್ರತಿಭಾನ್ವಿತ ಮಕ್ಕಳಿದ್ದರೂ ಅಂತಹವರನ್ನು ವಿದ್ಯಾವಂತರನ್ನಾಗಿಸುವ ಶಕ್ತಿ ಅನೇಕ ಕುಟುಂಬಗಳಿಗಿಲ್ಲ. ಪ್ರತಿಭಾನ್ವಿತರನ್ನು ವಿದ್ಯಾವಂತರನ್ನಾಗಿಸುವುದಷ್ಟೇ ಅಲ್ಲದೆ ಅಂತಹ ಪ್ರತಿಭೆಯುಳ್ಳ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕೆಲಸಗಳನ್ನು ಸರ್ಕಾರಗಳು ಮಾಡಬೇಕು ಎಂದರು.

      ಬಡ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಿದಾಗ ಮಾತ್ರ ಯಾವುದೇ ರಾಷ್ಟ್ರ ಶ್ರೀಮಂತ ರಾಷ್ಟ್ರವಾಗಲು ಸಾಧ್ಯವಾಗಿದ್ದು, ಈ ದಿಸೆಯಲ್ಲಿ ಬಡತನ, ನಿರುದ್ಯೋಗವನ್ನು ನಿವಾರಿಸಬಲ್ಲ ಶಕ್ತಿಯನ್ನು ಹೊಂದಬೇಕು ಎಂದು ಶ್ರೀ ವೀರಭದ್ರ ಶಿವಾಚಾರ್ಯಸ್ವಾಮೀಜಿ ತಿಳಿಸಿದರು.

      ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸದ್ಭಾವನೆಗಳನ್ನು ಬೆಸೆಯುವಂತಹ ಶಕ್ತಿ ದೇವಾಲಯಗಳಲ್ಲಿದೆ. ಕ್ಷೇತ್ರದ ಜನ ನಮ್ಮನ್ನು ನಂಬಿ ಆಯ್ಕೆ ಮಾಡಿದ್ದು ಅವರ ಋಣ ತೀರಿಸುವ ಕೆಲಸವಾಗಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಪ್ರೆಸಿಡೆನ್ಸಿ ಶಿಕ್ಷಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಿದಾನಂದ್ ಎಂ.ಗೌಡ ಮಾತನಾಡಿ, ಹತ್ತು ಹಲವು ಕನಸುಗಳನ್ನು ಹೊತ್ತು ಶಿರಾದಂತಹ ಬರಡು ನೆಲದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದೆನು. ಈ ಭಾಗದ ಗ್ರಾಮೀಣ ನೆಲದ ಮಕ್ಕಳಿಗೆ ಉತ್ತಮ ಶಿಕ್ಷಣ ಲಭ್ಯವಾಗಲಿ ಅನ್ನುವ ಉದ್ದೇಶ ನನ್ನದಾಗಿತ್ತು. ಶೈಕ್ಷಣಿಕ ಕಾಯಕ ಕೈಗೊಳ್ಳಲು ಜನತೆ ನನಗೆ ಒಂದು ಅವಕಾಶ ನೀಡಿದ್ದು ಈ ನಿಟ್ಟಿನಲ್ಲಿ ನನ್ನನ್ನು ನಾನು ತೊಡಗಿಸಿಕೊಳ್ಳುತ್ತೇನೆ ಎಂದರು.

      ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ ಮಾತನಾಡಿ, ಶಿವಶರಣರು ನಾಡಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಮಠ ಮಾನ್ಯಗಳಿಂದ ಈ ದೇಶದ ಭಾವನಾತ್ಮಕ ಸಂಬಂಧ ಗಟ್ಟಿಗೊಳ್ಳಲು ಸಾಧ್ಯವಾಗಿದೆ. ರಾಜ್ಯ ಸರ್ಕಾರ ಪ್ರತಿಯೊಂದು ಸಮುದಾಯಗಳ ಮಠಗಳನ್ನು ಅಭಿವೃದ್ಧಿಪಡಿಸುವಲ್ಲಿ ದಾಪುಗಾಲು ಇಟ್ಟಿದೆ ಎಂದರು.

      ತೆಂಗು ಮತ್ತು ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ವೀರಶೈವ ಸಮುದಾಯಕ್ಕೆ ಒಂದು ಪರಂಪರೆಯೆ ಇದ್ದು, ಇಂತಹ ಪರಂಪರೆಯುಳ್ಳ ಸಮುದಾಯವು ಶಿರಾ ಭಾಗದ ಅನೇಕ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದು, ಅವುಗಳನ್ನು ಈಡೇರಿಸುವ ಕೆಲಸವನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.

      ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮಂಜುನಾಥ್, ಶ್ರೀ ಕಟ್ಟೆ ಬಸವೇಶ್ವರಸ್ವಾಮಿ ಚಾರಿಟಬಲ್ ಅಧ್ಯಕ್ಷ ರವಿಶಂಕರ್, ವೀರಶೈವ ಲಿಂಗಾಯಿತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷ ನಟರಾಜು, ವೀರಶೈವ ಮಹಿಳಾ ಸಮಿತಿಯ ಅಧ್ಯಕ್ಷೆ ಕಮಲಮಂಜುನಾಥ್, ವೀರಶೈವ ಸಮಾಜದ ಮುಖಂಡರಾದ ಬರಗೂರು ತಿಪ್ಪೇಸ್ವಾಮಿ, ಸೋಮಶೇಖರಯ್ಯ, ಬರಗೂರು ಶಿವಕುಮಾರ್, ಚಂದ್ರಶೇಖರ ಆರಾಧ್ಯ, ಶಾಂತರಾಜು, ಚಿಕ್ಕಪ್ಪಯ್ಯ, ನೀಲಕಂಠಪ್ಪ, ಅರ್ಚಕ ಜಯಣ್ಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ವಿಜಯರಾಜ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

     ರೇಖಾ ಚೆನ್ನಪ್ಪ ಪ್ರಾರ್ಥಿಸಿ, ತರೂರು ಬಸವರಾಜು ಸ್ವಾಗತಿಸಿ, ನಾಗಭೂಷಣ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಜನಪ್ರತಿನಿಧಿಗಳು ಹಾಗೂ ಸಮಾಜದ ಹಿರಿಯರನ್ನು ಅಭಿನಂದಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link