ಯುದ್ಧಕ್ಕೂ ಮುನ್ನವೆ ಕಾಂಗ್ರೆಸ್ -ಜೆಡಿಎಸ್ ಶಸ್ತ್ರಾಸ್ತ್ರ ಕಳಚಿವೆ- ಆರ್.ಅಶೋಕ್ ಲೇವಡಿ

ಶಿರಾ : 

      ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ವರಿಷ್ಠರು ನಡೆಸುತ್ತಿರುವ ಭಾಷಣದ ಹೇಳಿಕೆಗಳನ್ನು ಗಮನಿಸಿದರೆ ಚುನಾವಣೆಯ ಯುದ್ಧಕ್ಕೂ ಮುನ್ನವೇ ಶಿರಾ ಹಾಗೂ ಆರ್.ಆರ್. ನಗರದ ಎರಡೂ ಕ್ಷೇತ್ರಗಳಲ್ಲೂ ಸೋಲಿನ ಭೀತಿಯನ್ನು ಅರಿತು ಶಸ್ತ್ರಾಸ್ತ್ರಗಳನ್ನು ಕಳಚಿಬಿಟ್ಟಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

      ಶಿರಾ ನಗರದ ಸೇವಾ ಸದನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಜೆ.ಪಿ. ಪಕ್ಷದವರು ಚುನಾವಣೆಯನ್ನು ಗೆಲ್ಲಲು ಹಣ ಹಾಗೂ ಹೆಂಡವನ್ನು ಹಂಚುತ್ತಿದ್ದಾರೆಂಬ ಹೇಳಿಕೆಗಳನ್ನು ಕಾಂಗ್ರೆಸ್-ಜೆ.ಡಿ.ಎಸ್. ನಾಯಕರು ಭಾಷಣದಲ್ಲಿ ಹೇಳಿಕೊಳ್ಳುತ್ತಿದ್ದು, ಚುನಾವಣೆಗೂ ಮುನ್ನವೆ ಅವರಲ್ಲಿ ಸೋಲಿನ ಭೀತಿ ಆವರಿಸಿದೆ. ನೂತನವಾಗಿ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನ ಅಲಂಕರಿಸಿದ ಡಿ.ಕೆ.ಶಿವಕುಮಾರ್‍ಗೆ ಜಯಚಂದ್ರ ಅವರಿಗೆ ಪಕ್ಷದಿಂದ ಟಿಕೆಟ್ ನೀಡಲು ಸುತಾರಾಂ ಇಷ್ಟವಿರಲಿಲ್ಲ. ಇದಕ್ಕಾಗಿಯೇ ಕೆ.ಪಿ.ಸಿ.ಸಿ. ಒಂದು ಹೈಡ್ರಾಮವನ್ನೇ ಸೃಷ್ಟಿ ಮಾಡಿತ್ತು ಎಂದರು.

      ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದಲ್ಲಿ ಟೆಸ್ಟ್ ಡ್ರೈವ್ ಕಾರಿದ್ದಂತೆ. ಈ ಟೆಸ್ಟ್ ಡ್ರೈವ್ ಕಾರು ಯೂಸ್ ಆ್ಯಂಡ್ ಥ್ರೋ ಅಷ್ಟೆ. ಅಲ್ಲಿ ಡಿ.ಕೆ.ಶಿ.ಯನ್ನು ಕೂಡ ಯೂಸ್ ಮಾಡಿಕೊಂಡು ಕೈ ಬಿಡುತ್ತಾರೆ. ಸಿದ್ಧರಾಮಯ್ಯ ಅವರು ಮಾತೆತ್ತಿದರೆ ಭಾಷಣಗಳಲ್ಲಿ ಧಮ್ಮಿನ ಬಗ್ಗೆ ಮಾತನಾಡುತ್ತಾರೆ. ಹಿಂದೆ ಹೀಗೆ ಅವರು ಮಾತನಾಡುತ್ತಿರಲಿಲ್ಲ. ಈಗ ಧಮ್ಮಿನ ಬಗ್ಗೆ ಶುರು ಮಾಡಿದ್ದಾರೆ. ಬಿ.ಜೆ.ಪಿ. ಪಕ್ಷಕ್ಕೆ ಧಮ್ಮು ಇಲ್ಲದಿದ್ದರೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರಲಿಲ್ಲ, ದೇಶದ ಅವಿಭಾಜ್ಯ ಅಂಗವಾದ ಕಾಶ್ಮೀರವನ್ನು ವಶಪಡಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಅಶೋಕ್ ಕುಟುಕಿದರು.

      ಕೆ.ಆರ್.ಪೇಟೆ ಹಾಗೂ ಶಿರಾ ಈ ಎರಡೂ ಚುನಾವಣೆಗಳಲ್ಲಿ ಟ್ರಬಲ್ ಶೂಟರ್ ಅನ್ನಿಸಿಕೊಂಡವರ ಬೇಳೆ ಬೇಯುವುದಿಲ್ಲ. ಈ ಎರಡೂ ಚುನಾವಣೆಗಳಿಂದ ಡಿಕೆಶಿಗೆ ಮೊದಲ ಸೋಲಿನ ರುಚಿಯನ್ನು ತೋರಿಸುತ್ತೇವೆ. ಅಧಿಕಾರವಿದ್ದಾಗ ಜನರ ಮಧ್ಯಕ್ಕೆ ಬರದ ಕಾಂಗ್ರೆಸ್ ಪಕ್ಷ ಇಂದು ವಿಶ್ವಾಸದ ಪಕ್ಷವಾಗಿ ಉಳಿದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಬಿಟ್ಟು 15 ಮಂದಿ ಬಿಜೆಪಿಗೆ ಸೇರ್ಪಡೆಗೊಂಡರು. ಚುನಾವಣೆಗಳಲ್ಲಿ ಮತ ಯಾಚನೆ ಮಾಡುವಾಗ ಅಭಿವೃದ್ಧಿಯ ಚರ್ಚೆಯಾಗಬೇಕು. ಅಂತಹ ಚುನಾವಣೆ ಮಾಡಲಾಗದೆ, ಹಣ, ಹೆಂಡದ ವಿಷಯ ಹೇಳಿಕೊಂಡು ಸೋಲಿನ ಭಯದ ನೆರಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರ್.ಅಶೋಕ್ ತಿಳಿಸಿದರು.

     ಬೆಂಗಳೂರಿನ ಡಿ.ಜೆ.ಹಳ್ಳಿ, ಹಾಗೂ ಕೆ.ಜಿ.ಹಳ್ಳಿಗಳಲ್ಲಿ ನಡೆದ ಪ್ರಕರಣಗಳಿಂದ ಮೂವರು ಅಮಾಯಕರು ಮೃತಪಟ್ಟರು. ಅವರದೆ ಕಾಂಗ್ರೆಸ್ ಪಕ್ಷದ ಓರ್ವ ದಲಿತ ಶಾಸಕನ ಮೇಲೆ ಹಲ್ಲೆಯಾಯ್ತು. ನಿಮ್ಮ ಶಾಸನಕರೊಬ್ಬರ ಕೊಲೆ ಪ್ರಯತ್ನವಾದಾಗಲೂ ಪ್ರತಿಭಟಿಸಲಾಗದ ನೀವುಗಳು ಚುನಾವಣೆಯ ಸಮಯದಲ್ಲಿ ಚುನಾವಣೆ ಗೆಲ್ಲಲು ಪ್ರತಿಭಟನೆ ಮಾಡುವಂತಾಗಿದೆ.

    ಡಿ.ಕೆ.ಶಿವಕುಮಾರ್ ಹಾಗೂ ಸಿದ್ಧರಾಮಯ್ಯ ಅವರ ನಡುವೆ ಹೊಂದಾಣಿಕೆಯೆ ಇಲ್ಲ. 15 ಮಂದಿ ಕಾಂಗ್ರೆಸ್ ಶಾಸಕರನ್ನು ಬಾಂಬೆಗೆ ಕಳಿಸಿದ್ದು ಯಾರು ಎಂಬುದನ್ನು ಅವರಿಬ್ಬರೆ ಪ್ರಶ್ನೆ ಮಾಡಿಕೊಳ್ಳಲಿ. ಮುಂದಿನ ಮೂರು ವರ್ಷಗಳ ಕಾಲ ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ. ಮುಂದಿನ 15 ವರ್ಷಗಳವರೆಗೆ ನರೇಂದ್ರ ಮೋದಿ ಈ ದೇಶದ ಪ್ರಧಾನಮಂತ್ರಿಯಾಗಿರುತ್ತಾರೆಂದು ಭವಿಷ್ಯ ನುಡಿದ ಆರ್.ಅಶೋಕ್ ಈ ವಿಷಯವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು.

     ಕಳೆದ 15 ದಿನಗಳಿಂದಷ್ಟೆ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ಜೆಡಿಎಸ್ ಮೂರು ದಿನಗಳ ಹಿಂದಿನಿಂದ ಪ್ರಚಾರ ಆರಂಭಿಸಿದೆ. ಆದರೆ ಬಿ.ಜೆ.ಪಿ. ಕಳೆದ ಎರಡು ತಿಂಗಳಿಂದಲೂ ಶಿರಾ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿತ್ತು. ಈ ಬಾರಿ ಶಿರಾ ಆರ್.ಆರ್. ನಗರ ಎರಡೂ ಕ್ಷೇತ್ರಗಳಲ್ಲಿ ಬಿ.ಜೆ.ಪಿ. ಜಯಭೇರಿ ಬಾರಿಸುತ್ತದೆ ಎಂದು ಆರ್.ಅಶೋಕ್ ತಿಳಿಸಿದರು.

     ವಿಧಾನಪರಿಷತ್ ಸದಸ್ಯ ರವಿಕುಮಾರ್, ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷ ಸುರೇಶ್‍ಗೌಡ, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ನಾಗೇಶ್, ಎಸ್.ಆರ್.ಗೌಡ, ವಿಜಯರಾಜ್, ರಂಗಸ್ವಾಮಿ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link