ಶಿರಾ :
ಮತದಾನವೆಂಬುದು ಗುಪ್ತವಾಗಿ ಚಲಾಯಿಸುವ ಪ್ರತಿಯೊಬ್ಬ ಮತದಾರನ ಹಕ್ಕಾಗಿದೆ. ಇಂತಹ ಹಕ್ಕನ್ನು ಕಸಿದುಕೊಳ್ಳುವ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು ಚಲಾಯಿಸಿದ್ದ ಮತಪತ್ರವನ್ನು ಕಿತ್ತುಕೊಂಡು ಹರಿದು ಹಾಕಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಕಳ್ಳಂಬೆಳ್ಳ
ಹೋಬಳಿಯ ದೊಡ್ಡ ಅಗ್ರಹಾರ ಗ್ರಾಪಂನ ಕಂಚಿಗಾಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ನಡೆದಿದೆ.
ಎರಡನೆ ಹಂತದ ಗ್ರಾಪಂ ಚುನಾವಣೆಗೆ ಕಂಚಿಗಾನಹಳ್ಳಿಯಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಂಡ ನಂತರ ಮಧ್ಯಾಹ್ನ 12.30ರ ಸಮಯದಲ್ಲಿ ಮತದಾರರೊಬ್ಬರು ಮತ ಗಟ್ಟೆಯೊಳಗೆ ತೆರಳಿ ಮತಪತ್ರ ಪಡೆದು ಅಭ್ಯರ್ಥಿಯೊಬ್ಬರ ಪರ ಮತ ಚಲಾಯಿಸಿ ಮತಪತ್ರವನ್ನು ಪೆಟ್ಟಿಗೆಯೊಳಗೆ ಹಾಕುವ ಮುನ್ನವೇ ಸರದಿಯ ಸಾಲಲ್ಲಿ ನಿಂತಿದ್ದ ಮತ್ತೊಬ್ಬ ಮತದಾರನು ತಮ್ಮ ಅಭ್ಯರ್ಥಿಗೆ ನೀನು ಮತ ಚಲಾಯಿಸಿಲ್ಲ ಎಂದು ಆರೋಪಿಸಿ ಮತಗಟ್ಟೆಯೊಳಗೆ ಜಗಳ ಆರಂಭಿಸಿದ್ದಾನೆ.
ಮತಗಟ್ಟೆಯೊಳಗಿದ್ದ ಮತಗಟ್ಟೆಯ ಅಧಿಕಾರಿಗಳು ಜಗಳವನ್ನು ಬಿಡಿಸುವ ಹೊತ್ತಿಗೆ ಆರೋಪಿಯು ಮತದಾನ ಪತ್ರವನ್ನು ಮತಗಟ್ಟೆಯಲ್ಲಿಯೇ ಹರಿದು ಹಾಕಿ ಪರಾರಿಯಾಗಿದ್ದಾನೆ. ಕೂಡಲೇ ಸದರಿ ವಿಷಯವನ್ನು ಚುನಾವಣಾಧಿಕಾರಿಗಳು ಹಾಗೂ ಆರಕ್ಷಕ ಸಿಬ್ಬಂದಿಗೆ ತಲುಪಿಸಲಾಗಿ ಕಾರ್ಯ ಪ್ರವೃತ್ತರಾದ ಆರಕ್ಷಕ ಅಧಿಕಾರಿಗಳು ಮತಪತ್ರ ಹರಿದು ಹಾಕಿ ಪರಾರಿಯಾದ ಆರೋಪಿಯನ್ನು ಹುಡುಕುವ ಪ್ರಯತ್ನ ನಡೆಸಿದ್ದಾರೆ.
ಈ ಸಂಬಂಧ ಪ್ರಗತಿಯೊಂದಿಗೆ ಮಾತನಾಡಿದ ತಹಸೀಲ್ದಾರ್ ಹಾಗೂ ಚುನಾವಣಾಧಿಕಾರಿ ಮಮತ ಸದರಿ ಮತಗಟ್ಟೆಯಲ್ಲಿ ಈ ಪ್ರಕರಣ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಆತ ಹರಿದು ಹಾಕಿದ ಮತಪತ್ರವನ್ನು ಅಸಿಂಧುಗೊಳಿಸಲಾಗಿದ್ದು, ಆರಕ್ಷಕ ಸಿಬ್ಬಂದಿ ಆರೋಪಿಯ ಹುಡುಕಾಟದಲ್ಲಿದ್ದಾರೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ