ತುಮಕೂರು : ಕೊರೊನಾ ಮೃತ್ಯು ಆಹ್ವಾನಿಸುತ್ತಿರುವ ಜನತೆ

 ತುಮಕೂರು :

      ಪ್ರತಿದಿನ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಕೊರೊನಾ ಸೋಂಕು ಮತ್ತು ಸಾವಿನ ಪ್ರಕರಣಗಳು ನಡುಕು ಹುಟ್ಟಿಸುತ್ತಿವೆ. ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ದಿನವೊಂದಕ್ಕೆ 3000 ದ ಸಮೀಪಕ್ಕೆ ಸೋಂಕು ಪೀಡಿತರು ವರದಿಯಾಗುತ್ತಿರುವುದನ್ನು ನೋಡಿದರೆ ಜಿಲ್ಲೆ ಅಪಾಯಕಾರಿ ವಲಯದಲ್ಲಿದೆ ಎಂದೇ ಅರ್ಥ.

      ಇಷ್ಟಿದ್ದಾಗ್ಯೂ ಜನತೆ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಕೆಲವರಿಗಷ್ಟೇ ಕೊರೊನಾ ಮಾರ್ಗಸೂಚಿಗಳು ಅನ್ವಯಿಸಿದಂತೆ ಕಾಣುತ್ತಿದ್ದು, ಇನ್ನು ಕೆಲವರು ಈ ಸೋಂಕಿಗೂ ನಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ತಿರುಗಾಡುತ್ತಿದ್ದಾರೆ. ಎಲ್ಲೆಂದರಲ್ಲಿ ಹೋಗುವ, ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವವರಿಂದಲೇ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುತ್ತಿವೆ. ಕಟ್ಟುನಿಟ್ಟಿನ ಕಡಿವಾಣ ಹಾಕದೆ ಹೋದರೆ ಮುಂದಿನ ದಿನಗಳು ಮತ್ತಷ್ಟು ಕೇಡುಗಾಲವಾಗಿ ಪರಿಣಮಿಸಲಿದೆ.

ಬೇಕಾಬಿಟ್ಟಿ ಓಡಾಟ :

      ಏಪ್ರಿಲ್ 27ರ ರಾತ್ರಿಯಿಂದ 14 ದಿನಗಳವರೆಗೆ ಕೊರೊನಾ ಕಫ್ರ್ಯೂ ಜಾರಿಗೊಳಿಸಲಾಗಿದೆ. ಅಗತ್ಯ ಸೇವೆಗಳಿಗೆ ಮಾತ್ರವೆ ವಿನಾಯಿತಿ ಇದ್ದು, ಉಳಿದ ಅಂಗಡಿ ಮುಂಗಟ್ಟುಗಳು, ಜನಜೀವನ ಬಂದ್ ಆಗಬೇಕು. ಆದರೆ ಯಾಕೋ ಈ ಬಾರಿ ಪರಿಪೂರ್ಣವಾಗಿ ಮಾರ್ಗಚಿಗಳ ಪಾಲನೆಯಾಗುತ್ತಿಲ್ಲ ಎಂಬುದು ಬಹಿರಂಗವಾಗಿ ಕಂಡುಬರುತ್ತಿರುವ ಚಿತ್ರಣ.

      ಅಗತ್ಯ ವಸ್ತುಗಳ ಖರೀದಿಗಾಗಿಯೇ ಬೆಳಗಿನ 10 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ತೀರಾ ಅಗತ್ಯ ಎನ್ನಿಸುವ ವಸ್ತುಗಳ ಖರೀದಿಗೆ ಮಾತ್ರವೆ ಜನತೆ ಮನೆಯಿಂದ ಹೊರಗೆ ಬರಬೇಕು. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಅಂತಹ ಚಿತ್ರಣವೆ ಇಲ್ಲ. ಅಗತ್ಯ ಇರಲಿ, ಇಲ್ಲದಿರಲಿ 10 ಗಂಟೆಯ ತನಕ ಬಹುತೇಕ ಎಲ್ಲ ಬಡಾವಣೆಗಳು ಗಿಜಿಗುಟ್ಟುತ್ತಿರುತ್ತವೆ. ಮನೆಯಿಂದ ಹೊರಗೆ ಇರುವವರೆ ಅಧಿಕ. ಇನ್ನು ಸಾಮಾನು ಸರಂಜಾಮು ಕೊಂಡುಕೊಳ್ಳಲು ಮುಗಿ ಬೀಳುತ್ತಾರೆ. ಅಲ್ಲಿ ಯಾವ ಅಂತರವೂ ಇರುವುದಿಲ್ಲ. ಎಷ್ಟೋ ಜನ ಮಾಸ್ಕ್ ಧರಿಸಿರುವುದಿಲ್ಲ. ಇಂತಹ ಪರಿಸ್ಥಿತಿಗಳಿಂದಾಗಿಯೇ ಕೊರೊನಾ ಸೋಂಕು ಉಲ್ಬಣಿಸುತ್ತಿರುವುದು.

ಸಮುದಾಯದಲ್ಲಿ ಸೋಂಕು :

      ಈಗಾಗಲೇ ಸಮುದಾಯಕ್ಕೆ ಸೋಂಕು ಕಾಲಿಟ್ಟಿದ್ದು, ಎರಡನೇ ಅಲೆ ಕ್ಷಿಪ್ರಗತಿಯಲ್ಲಿ ವ್ಯಾಪಿಸುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಅಧಿಕ ಸಂಖ್ಯೆಯಲ್ಲಿ ವರದಿಯಾಗುತ್ತಿವೆ. ಹಿಂದೆ ಒಬ್ಬನಿಗೆ ಸೋಂಕು ಕಾಣಿಸಿಕೊಂಡರೂ ಆ ಬಡಾವಣೆಯನ್ನು ನಿರ್ಬಂಧಿಸುವ, ಅವರ ಮನೆಯನ್ನು ಸೀಲ್‍ಡೌನ್ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಅವರ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗುತ್ತಿತ್ತು. ಹೀಗಾಗಿ ಸೋಂಕು ಇತರರಿಗೆ ಹರಡುತ್ತಿರಲಿಲ್ಲ. ಈಗ ಸಮುದಾಯದೊಳಗೆ ಸೋಂಕು ಬೆರೆತು ಹೋಗಿರುವುದರಿಂದ ಯಾವ ವ್ಯಕ್ತಿಗೆ ಪಾಸಿಟಿವ್ ಇದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ನನಗೆ ಸೋಂಕು ಇದೆ ಎಂದು ಯಾವ ವ್ಯಕ್ತಿಯೂ ಹೇಳಿಕೊಳ್ಳುತ್ತಿಲ್ಲ. ಇತರೆಯವರಿಗೆ ಹರಡದಿರಲಿ ಎಂಬ ಮುನ್ನೆಚ್ಚರಿಕೆಯೂ ಹಲವರಲ್ಲಿ ಇಲ್ಲ. ಪಾಸಿಟಿವ್ ಇರುವ ವ್ಯಕ್ತಿಗಳೆಲ್ಲ ತರಕಾರಿ, ಹಾಲು, ಹಣ್ಣು, ಔಷಧ, ದಿನಸಿ ವಸ್ತುಗಳನ್ನು ತರಲು ಬರುತ್ತಿದ್ದು ಅವರ ಪಕ್ಕದಲ್ಲೇ ನಿಂತು ಸಾಮಾನು ಖರೀದಿಸುವ ವ್ಯಕ್ತಿಗಳಿಗೂ ಸೋಂಕು ಸುಲಭವಾಗಿ ಹರಡುತ್ತಿದೆ.

ಸಮಯ ವಿಸ್ತರಣೆ ಗೊಂದಲ :

      ಕೆಲವು ವಲಯ, ಕ್ಷೇತ್ರಗಳ ಜನರು ಅಗತ್ಯ ವಸ್ತುಗಳ ಖರೀದಿ ಸಮಯವನ್ನು ಹೆಚ್ಚಳ ಮಾಡುವಂತೆ ಕೋರಿಕೊಂಡಿದ್ದರಿಂದ ಮಧ್ಯಾಹ್ನದವರೆಗೂ ಕೆಲವೆಡೆ ಸಮಯ ವಿಸ್ತರಿಸಲಾಗಿದೆ. ಇದನ್ನೆ ನೆಪ ಮಾಡಿಕೊಂಡು ತಿರುಗುವವರ ಸಂಖ್ಯೆಯೂ ಹೆಚ್ಚಿದೆ. ಬೆಳಗಿನಿಂದ ಮಧ್ಯಾಹ್ನದವರೆಗೂ ಕೆಲವರು ಅಂಗಡಿಗಳನ್ನು ಹುಡುಕಿಕೊಂಡು ಹೋಗುತ್ತಲೇ ಇದ್ದಾರೆ.

ಓಡಾಟ ನಿಯಂತ್ರಣವಾಗಿಲ್ಲ :

      ಜನರ ದೈನಂದಿನ ಬದುಕಿನ ಮೇಲೆ ಪರಿಣಾಮ ಬೀರದಿರಲಿ ಎಂದೇ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿಪಡಿಸಲಾಗಿದೆ. ಇಲ್ಲಿ ಅಗತ್ಯ ವಸ್ತುಗಳು ಯಾವುವು ಎಂಬ ಮಾಹಿತಿಯಲ್ಲಿಯೇ ಗೊಂದಲ ಇದೆ. ಸುಖಾಸುಮ್ಮನೆ ವಾಹನಗಳಲ್ಲಿ ಹೋಗಿಬರುವವರು ಯಾವುದೋ ಸಬೂಬು ಹೇಳುತ್ತಿದ್ದಾರೆ. ಇಂತಹವರಿಂದ ಅಗತ್ಯ ಸೇವೆಗಳಿಗೂ ತೊಂದರೆ ಉಂಟಾಗುತ್ತಿದೆ. ಯಾರೆಲ್ಲ ಸುಖಾಸುಮ್ಮನೆ ಹೊರಗೆ ಬಂದು ಅಡ್ಡಾಡುತ್ತಾರೋ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಿದೆ.

     ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಫ್ರ್ಯೂ ಮುಗಿಯುವ ತನಕ ವಾಹನಗಳನ್ನು ಅವರ ಸುಪರ್ದಿಗೆ ಕೊಡುವುದಿಲ್ಲ. ಇಂತಹ ಕ್ರಮಗಳು ಮತ್ತಷ್ಟು ಹೆಚ್ಚಬೇಕು. ದಾಖಲೆಗಳನ್ನು ಪರಿಶೀಲಿಸಿ ಅನುಮಾನ ಬಂದ ಮತ್ತು ಅನಗತ್ಯವಾಗಿ ಓಡಾಡುವವರ ಮೇಲೆ ಕೇಸು ದಾಖಲಿಸುವ ಅನಿವಾರ್ಯತೆ ಇದೆ.

ಹಾಟ್‍ಸ್ಪಾಟ್‍ಗಳಲ್ಲೇ ನಿಯಮಗಳ ಉಲ್ಲಂಘನೆ

       ಜಿಲ್ಲೆಯ 67 ಗ್ರಾಮ ಪಂಚಾಯತಿಗಳನ್ನು ಹಾಗೂ ತುಮಕೂರು ನಗರದ 24 ವಾರ್ಡ್‍ಗಳನ್ನು ಕೊರೊನಾ ಹಾಟ್‍ಸ್ಪಾಟ್‍ಗಳಾಗಿ ಗುರುತಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಸೋಂಕು ಪ್ರಕರಣ ಹಾಗೂ ಮರಣದ ಪ್ರಕರಣಗಳು ಹೆಚ್ಚಿವೆ. ಕಡಿಮೆ ಮಾಡಲು ಜನರ ಸಹಕಾರ ಅತ್ಯಗತ್ಯ. ಆದರೆ ಎಲ್ಲೆಲ್ಲಿ ಹಾಟ್‍ಸ್ಪಾಟ್ ವಲಯಗಳೆಂದು ಗುರುತಿಸಲಾಗಿದೆಯೋ ಅಂತಹ ಕಡೆಗಳಲ್ಲಿ ಅಸೀಮ ನಿರ್ಲಕ್ಷ್ಯ ಜನರಿಂದ ಎದ್ದುಕಾಣುತ್ತಿದೆ. ಅಂತರ ಕಾಯ್ದುಕೊಳ್ಳುವ, ಮಾಸ್ಕ್ ಧರಿಸುವ ಮುನ್ನೆಚ್ಚರಿಕಾ ಕ್ರಮಗಳು ಕೇವಲ ಕೊರೊನಾ ಪೀಡಿತರಿಗೆ ಮಾತ್ರವೆ ಅಲ್ಲ. ಇತರರಿಗೂ ಈ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕಾದುದು ಪ್ರತಿಯೊಬ್ಬರ ಹೊಣೆಗಾರಿಕೆ. ಈ ಜವಾಬ್ದಾರಿಯನ್ನು ಮರೆತದ್ದರಿಂದಲೇ ಪ್ರಕರಣಗಳು ದಿಢೀರ್ ಏರಿಕೆಯಾಗಿರುವುದು.

ಬೆಳಗ್ಗೆ ಹೊತ್ತು ಗುಂಪುಗೂಡುವ ಜನ

     ನಗರದ ಬಹಳಷ್ಟು ಕಡೆಗಳಲ್ಲಿ ವಾಕ್ ಹೋಗುವವರು ಕಂಡುಬರುತ್ತಾರೆ. ಕೆಲವು ಪ್ರದೇಶಗಳನ್ನು ನಿರ್ಬಂಧಿಸಲಾಗಿದೆ. ಸರ್ಕಾರವೂ ಸಹ ಎಚ್ಚರಿಕೆ ನೀಡಿದೆ. ಆದರೂ ನಿರ್ಲಕ್ಷಿಸಿ ಗುಂಪು ಗುಂಪಾಗಿ ವಾಕ್ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ.

     ತುಮಕೂರು ವಿಶ್ವವಿದ್ಯಾನಿಲಯದ ಕಡೆಗೆ ಬೆಳಗಿನ ಹೊತ್ತು ನಗರದ ವಿವಿಧ ಭಾಗಗಳಿಂದ ಬಂದು ಗುಂಪುಗೂಡುತ್ತಾರೆ. ಕೆಲ ಹೊತ್ತು ಹರಟೆ ಒಡೆಯುತ್ತಾರೆ. ಇವರೆಲ್ಲ ಸುಸಂಸ್ಕøತ ನಾಗರಿಕರು. ಆದರೆ ಅವರಲ್ಲಿಯೇ ಅದೆಷ್ಟೋ ಮಂದಿಗೆ ಸೋಂಕು ತಗುಲಿರಬಹುದು. ಇತರರಿಗೂ ಹರಡಬಹುದು.

      ಅಶೋಕನಗರ, ಎಸ್.ಐ.ಟಿ. ಬಡಾವಣೆಯ ಕೆಲವು ರಸ್ತೆಗಳಲ್ಲಿ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಇಂತಹ ಮನೆಗಳವರು ಮನೆಯಿಂದ ಹೊರಗೆ ಬರಬಾರದು. ಆದರೆ ಬೆಳಗಿನ ವೇಳೆ ವಾಕ್ ಬರುವ, ಟೀ ಸ್ಟಾಲ್‍ಗಳ ಬಳಿ ಗುಂಪುಗೂಡಿ ಹರಟುವ ಮಂದಿ ಕಂಡುಬರುತ್ತಿದ್ದಾರೆ. ಇಷ್ಟು ಸಾಕಲ್ಲವೆ ಸೋಂಕು ಉಲ್ಬಣಿಸಲು. ಇಂತಹವರಿಗೆಲ್ಲ ಯಾರು ಪಾಠ ಮಾಡಬೇಕು? ಸೋಂಕು ಇರುವುದು ತಿಳಿದಿದ್ದರೂ ಮನೆಯೊಳಗೆ ಐಸೋಲೇಷನ್ ಆಗಿರುವುದು ಬಿಟ್ಟು ಹೊರಗೆ ಬಂದರೆ ಅಂತಹವರನ್ನು ಏನನ್ನಬೇಕು..?

ಅರ್ಥ ಕಳೆದುಕೊಳ್ಳುತ್ತಿದೆಯಾ `ಕಫ್ರ್ಯೂ’

      ಸಿಆರ್‍ಪಿಸಿ ಕಲಂ 144 ಕ್ಕೂ, ಕಫ್ರ್ಯೂಗೂ ಸಾಕಷ್ಟು ವ್ಯತ್ಯಾಸವಿದೆ. ಈ ಎರಡನ್ನು ಜಾರಿಗೊಳಿಸಿದಾಗ ಜಿಲ್ಲಾಡಳಿತಕ್ಕೆ ಇಡೀ ವ್ಯವಸ್ಥೆಯ ಸಂಪೂರ್ಣ ನಿಯಂತ್ರಣದ ಹತೋಟಿ ಹೆಗಲಿಗೇರುತ್ತದೆ. ಈ ಕಾರಣಕ್ಕಾಗಿಯೇ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಪೊಲೀಸರ ಲಾಠಿಗಳು ಸದ್ದು ಮಾಡುತ್ತವೆ. ಸಂಚಾರ ನಿರ್ಬಂಧ ಹೆಚ್ಚುತ್ತದೆ. ಕಫ್ರ್ಯೂ ಎಂದಾಕ್ಷಣ 5 ಕ್ಕಿಂತ ಹೆಚ್ಚು ಮಂದಿ ಒಂದು ಗೂಡುವುದನ್ನು ನಿರ್ಬಂಧಿಸಲಾಗುತ್ತದೆ. ಕೊರೊನಾ ವೈರಾಣುವನ್ನು ನಿಗ್ರಹಿಸಲು ಈಗ ಜನತಾ ಕಫ್ರ್ಯೂ ಹೆಸರಿನಲ್ಲಿ ನಿರ್ಬಂಧ ಹೇರಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸದ ಪ್ರಜೆಗಳ ಮೇಲೆ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬಹುದು. ಸಿಆರ್‍ಪಿಸಿ, ಭಾರತ ದಂಡ ಸಂಹಿತೆ ಹಾಗೂ ಪ್ರಕೃತಿ ವಿಕೋಪ ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತಾರೆ. ಈಗಾಗಲೇ ಎಷ್ಟೋ ಪ್ರಕರಣಗಳು ದಾಖಲಾಗಿವೆ. ಆದರೂ ಜನರ ಗುಂಪುಗೂಡುವಿಕೆ ಮಾತ್ರ ನಿಂತಿಲ್ಲ. 5 ಜನ ಮಾತ್ರವಲ್ಲ, ಈಗಿನ ಪರಿಸ್ಥಿತಿಯಲ್ಲಿ ಇಬ್ಬರು ವ್ಯಕ್ತಿಗಳು ಸಹ ಹತ್ತಿರದಿಂದ ಮಾತನಾಡುವುದು ಸರಿಯಲ್ಲ. ಪರಿಸ್ಥಿತಿ ಹೀಗೆ ವಿಕೋಪಕ್ಕೆ ಹೋಗಿರುವ ಸಂದರ್ಭದಲ್ಲಿ ಮತ್ತಷ್ಟು ಎಚ್ಚರಿಕಾ ಕ್ರಮಗಳು ಅನಿವಾರ್ಯ.

ಮಾಸ್ಕ್ ಬಳಕೆ ಫ್ಯಾಷನ್ ಆಗಿದೆ :

      ಕೆಲವು ಪ್ರದೇಶಗಳಲ್ಲಿ ಮಾಸ್ಕ್ ಧರಿಸುತ್ತಿಲ್ಲ. ಮನೆಯೊಳಗೆ ಇದ್ದರೂ ಸಹ ಇತರರಿಗೆ ಹರಡದಿರಲು ಮಾಸ್ಕ್ ಧರಿಸಿ ಎಂದು ಈಗಾಗಲೇ ತಜ್ಞರು ಹೇಳಿದ್ದಾರೆ. ಮನೆಯೊಳಗಿರಲಿ, ಹೊರಗೆ ಇರುವವರು ಎಚ್ಚರಿಕೆ ವಹಿಸಿದರೂ ಸಾಕು. ಕೊರೊನಾ ನಿಗ್ರಹಿಸಲು ಸಾಧ್ಯವಿದೆ. ಬಾಯಿ ಹಾಗೂ ಮೂಗು ಎರಡನ್ನೂ ಮುಚ್ಚಿಕೊಂಡಿರುವ ಮಾಸ್ಕ್ ಧರಿಸುವಿಕೆ ಅಗತ್ಯ. ಬಹಳಷ್ಟು ಜನ ಮುಖಕ್ಕೆ ಮಾಸ್ಕ್ ಹಾಕುತ್ತಾರೆ. ಮಾತನಾಡುವಾಗ ತೆರೆಯುತ್ತಾರೆ. ಕೆಮ್ಮುವಾಗ, ಸೀನುವಾಗ ಮಾಸ್ಕ್ ತೆಗೆಯುತ್ತಾರೆ. ಕರ್ಚಿಫ್ ಸಹ ಉಪಯೋಗಿಸುವುದಿಲ್ಲ. ಇದು ಅತ್ಯಂತ ಅಪಾಯಕಾರಿ. ಗುಣಮಟ್ಟದ ಡಬಲ್ ಲೇಯರ್ ಇರುವ ವೈರಾಣು ನಿಗ್ರಹ ಸಾಮಥ್ರ್ಯದ ಮಾಸ್ಕ್‍ಗಳನ್ನು ಸದಾ ಬಳಸುವುದು ಈಗಿನ ಅನಿವಾರ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link