ಶಿರಾ :
ಸಮಯ ಬದಲಾಯಿಸಿದ ಕೆಎಸ್‍ಆರ್‍ಟಿಸಿ ಬಸ್ಸು, ದೂರದ ಹಳ್ಳಿಗಳಿಂದ ಶಾಲೆಗೆ ಬರಲು ವಿದ್ಯಾರ್ಥಿಗಳಿಗೆ ತೊಂದರೆ ಸೇರಿದಂತೆ ಬಸ್ಸಿನ ಸಮಯ ಬದಲಾವಣೆ ಮಾಡುವಂತೆ ಒತ್ತಾಯಿಸಿ, ರಸ್ತೆಗೆ ಮರದ ಡಿಮ್ಮಿ ಹಾಗೂ ಕಳ್ಳೆ ಹಾಕಿ ವಿದ್ಯಾರ್ಥಿಗಳೊಂದಿಗೆ ಪೋಷಕರು ಸಾರಿಗೆ ಬಸ್ಸು ತಡೆದು, ಪ್ರತಿಭಟನೆ ಮಾಡಿದ ಘಟನೆ ಶಿರಾ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರ ನಡೆಯಿತು.
ಕೋವಿಡ್-19ನಿಂದಾಗಿ ಮಕ್ಕಳ ಶಿಕ್ಷಣದ ಮೇಲೆ ಬರೆ ಹಾಕಿದರೆ, ಕೆಎಸ್‍ಆರ್‍ಟಿಸಿ ನಿರ್ಲಕ್ಷ್ಯವು ಗಾಯದ ಮೇಲೆ ಬರೆ ಎಳೆದಂತಾಗಿದೆ. ಶಿರಾ ತಾಲ್ಲೂಕಿನ ಪುರ್ಲಹಳ್ಳಿ, ಗೋಮಾರದನಹಳ್ಳಿ, ಭೂತಪ್ಪನ ಗುಡಿ, ರಂಗನಹಳ್ಳಿ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಪಡೆಯಲು ಶಿರಾ ತಾಲ್ಲೂಕಿನ ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬರಬೇಕು.
ಈ ಶಾಲೆ ಆಂಗ್ಲ ಮಾಧ್ಯಮದ ಜೊತೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾರಣ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗುತ್ತಾರೆ. ಬೆಳಗ್ಗೆ 9.30 ಗಂಟೆಗೆ ತಾವರೆಕೆರೆ ಮಾರ್ಗವಾಗಿ ಹೊಸೂರು ಗ್ರಾಮಕ್ಕೆ ಬರುತ್ತಿದ್ದ ಬಸ್ಸು ಏಕಾಏಕಿ ಸಮಯ ಬದಲಾವಣೆ ಮಾಡಿ 11 ಗಂಟೆಗೆ ಬರುತ್ತಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಶಿರಾ ಡಿಪೋ ವ್ಯವಸ್ಥಾಪಕರ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗದ ಕಾರಣ ಮಂಗಳವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಶಿರಾ ಕೆಎಸ್‍ಆರ್‍ಟಿಸಿ ಘಟಕ ಡಿಪೋ ವ್ಯವಸ್ಥಾಪಕ ವಿನೋದ್ ಪ್ರತಿಭಟನಾ ನಿರಂತರ ಮನವೊಲಿಸಿ, ವಿದ್ಯಾರ್ಥಿಗಳು ಕೇಳಿರುವ ಸಮಯಕ್ಕೆ ಬಸ್ಸು ಸಂಚಾರಕ್ಕೆ ಅನುವು ಮಾಡಿ ಕೊಡುವ ಭರವಸೆಯ ನಂತರ ಪ್ರತಿಭಟನೆ ಕೈ ಬಿಡಲಾಯಿತು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ಪುಟ್ಟಜುಂಜಯ್ಯ, ಮುಖಂಡ ಗೋಮಾರದಹಳ್ಳಿ ಮಂಜುನಾಥ್, ಎಚ್.ಜೆ.ನರಸಿಂಹಮುರ್ತಿ, ನಾಗರಾಜು, ಈಶ್ವರ್, ಪುಟ್ಟಜುಂಜಯ್ಯ, ಐಸುಗೌಡ, ಹೆಚ್.ಜೆ.ನಟರಾಜು, ಸಂಕಾಪುರ ಚಿದಾನಂದ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ