125 ತಾಲ್ಲೂಕು ಕೇಂದ್ರಗಳಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ – ಸಚಿವ ಡಾ.ಕೆ.ಸುಧಾಕರ್

 ಶಿರಾ : 

      ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಲ್ಲಿ ರೋಗಿಗಳ ಭೇಟಿಯ ಸಂದರ್ಭದಲ್ಲಿ ದಯೆ ಹಾಗೂ ಮಾನವೀಯ ಗುಣಗಳು ಮೇಳೈಸಿಕೊಳ್ಳಬೇಕು. ಮಾನವೀಯ ಗುಣಗಳಿಂದ ಮಾತ್ರ ರೋಗಿಗಳ ಮನ ಗೆಲ್ಲಲು ಸಾಧ್ಯ. ರಾಜ್ಯದ 125 ತಾಲ್ಲೂಕು ಕೇಂದ್ರಗಳಲ್ಲಿ ಮುಂದಿನ ಐದು ವರ್ಷಗಳ ಅವಧಿಯೊಳಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

      ಶಿರಾ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ 100 ಹಾಸಿಗೆಗಳ ಸುಸಜ್ಜಿತವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಜಿಲ್ಲೆಯ ವಾಣಿಜ್ಯ ನಗರಿ ಶಿರಾ ನಗರವಾಗಿದ್ದು ಶಿಕ್ಷಣ, ಆರೋಗ್ಯ, ಕೈಗಾರಿಕೆಗಳನ್ನೊಳಗೊಂಡ ಉತ್ತಮ ಭೌಗೋಳಿಕ ಪ್ರದೇಶವೂ ಆಗಿದೆ. ಕಸ್ತೂರಿ ರಂಗಪ್ಪನಾಯಕರು ಆಳಿದ ಈ ಪುಣ್ಯಭೂಮಿಯು ರಾಜಕೀಯವಾಗಿಯೂ ನಿರ್ಣಾಯಕ ಪ್ರದೇಶವಾಗಿದೆ ಎಂದರು.

      ಶಿರಾ ಮಣ್ಣಲ್ಲಿ ಒಂದು ಹೋರಾಟ ಶಕ್ತಿಯ ಗುಣವಿದೆ. ಉನ್ನತ ಗುಣಮಟ್ಟದ 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದಾಗಿ ಈ ಭಾಗದ ಜನತೆಗೆ ಒಂದು ಆಶಾ ಭಾವನೆ ಮೂಡಿದೆ. ಈ ಆಸ್ಪತ್ರೆಯ ಸಿಬ್ಬಂದಿ ಕೂಡ ವೇಗವಾಗಿ ಲಸಿಕೆಯ ಸ್ವರೂಪವಾಗಿ ಕೆಲಸ ಮಾಡಬೇಕು. ಇದೇ ತಾಯಿ-ಮಗು ಆಸ್ಪತ್ರೆಯ ಅಭಿವೃದ್ಧಿ ಹಿನ್ನೆಲೆಯಲ್ಲಿ 10 ವೈದ್ಯರ ವಸತಿ ಗೃಹಗಳು, 12 ಶುಶ್ರ್ರೂಕರ ಕೊಠಡಿ, 8 ಮಂದಿ ಡಿ ಗ್ರೂಪ್ ನೌಕರರ ನಿವಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

      ರಾಜ್ಯದ 10 ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸುವ ಬಗ್ಗೆಯೂ ರಾಜ್ಯ ಸರ್ಕಾರ ಮಾಹಿತಿ ಕ್ರೋಡೀಕರಿಸಿದ್ದು, ಮುಂದಿನ ದಿನಗಳಲ್ಲಿ 10 ವೈದ್ಯಕೀಯ ಕಾಲೇಜುಗಳ ಸ್ಥಾಪನೆಯಾಗಲಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.

      ರಾಜ್ಯದ ಕಿದ್ವಾಯಿ ಆಸ್ಪತ್ರೆಯೊಂದನ್ನು ಬಿಟ್ಟರೆ ಉಳಿದೆ ಯಾವುದೇ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಇರಲಿಲ್ಲ. ಕಿದ್ವಾಯಿ ಆಸ್ಪತ್ರೆಯ ಚಿಕಿತ್ಸೆಗಾಗಿ ಬೀದರ್, ಗುಲ್ಬರ್ಗ, ರಾಯಚೂರು ಭಾಗಗಳಿಂದಲೂ ಕ್ಯಾನ್ಸರ್ ರೋಗಿಗಳು ಬೆಂಗಳೂರಿಗೆ ಬರಬೇಕಿತ್ತು. ಇದನ್ನು ಮನಗಂಡ ಸರ್ಕಾರ ತುಮಕೂರಿನಲ್ಲಿ 35 ಕೋಟಿ ರೂ.ಗಳ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆಯ ನಿರ್ಮಾಣಕ್ಕೆ ಮುಂದಾಗಿದೆ ಎಂದು ಸುಧಾಕರ್ ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತುಮಕೂರು ಜಿಲ್ಲೆಗೆ ಶಿರಾ ಮತ್ತು ತಿಪಟೂರು ತಾಲ್ಲೂಕುಗಳು ಮೈಲಿಗಲ್ಲಿದ್ದಂತೆ. ಸ್ಥಳೀಯವಾಗಿಯೆ ತಾಯಿ ಮತ್ತು ಮಕ್ಕಳಿಗೆ ಶುಶ್ರ್ರೂಷೆ ಮತ್ತು ಹೆರಿಗೆಗಳಾಗಬೇಕು. ಯಾವ ಶಿಶುವಾಗಲಿ ಬಾಣಂತಿಯಾಗಲಿ ಸಾವನ್ನಪ್ಪಬಾರದು. ಆಯಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿಯೇ ತಾಯಿ ಮತ್ತು ಮಕ್ಕಳಿಗೆ ಉತ್ತಮ ಚಿಕಿತ್ಸೆ ಲಭ್ಯವಾಗಬೇಕು ಎಂಬುದೇ ಸರ್ಕಾರದ ಗುರಿ ಎಂದರು.

      ಕಳೆದ 3 ವರ್ಷಗಳ ಹಿಂದೆ ರಾಜ್ಯದ ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರೆತೆ ಇತ್ತು. ಈಗ ಕಳೆದ ಎರಡು ವರ್ಷಗಳಲ್ಲಿ ಸಿಬ್ಬಂದಿಯ ಕೊರತೆಯನ್ನು ನೀಗಿಸಲಾಗಿದೆ. ಜನರ ಮನೆಯ ಬಾಗಿಲಿಗೆ ಆರೋಗ್ಯ ಸೇವೆ ಲಭ್ಯವಾಗಬೇಕು. ಆರೋಗ್ಯ ಇಲಾಖೆಯಲ್ಲಿ ಸಮಯ ಬಹು ಮುಖ್ಯವೂ ಹೌದು. ಯಾವ ವೈದ್ಯರಾಗಲಿ, ಸಿಬ್ಬಂದಿಯಾಗಲಿ ಸಮಯವನ್ನು ಕಳೆಯಬಾರದು. ಬಹುತೇಕ ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಯಲ್ಲಿ ಶೇ.30 ರಷ್ಟು ಮಾತ್ರ ಹೆರಿಗೆಗಳಾಗುತ್ತಿವೆ. ಶಿರಾ ಆಸ್ಪತ್ರೆಯು ಒಂದಷ್ಡು ಸುಧಾರಣೆ ಕಂಡಿರುವುದು ನಮಗೆ ತೃಪ್ತಿ ತಂದಿದೆ. ಜನರ ಬಾಯಲ್ಲಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ಕೆಟ್ಟ ಮಾತು ಬರಬಾರದು ಎಂದು ಮಾಧುಸ್ವಾಮಿ ಹೇಳಿದರು.

      ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ರಾಜ್ಯ ಸರ್ಕಾರವು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಸುಧಾಕರ್ ಅವರು ಆರೊಗ್ಯ ಸಚಿವರಾದ ನಂತರ ಸದರಿ ಇಲಾಖೆ ಸಾಕಷ್ಟು ಸುಧಾರಿಸಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಶಿರಾ ನಗರ ದಿನ ದಿನಕ್ಕೂ ಬೆಳೆಯುತ್ತಿದ್ದು, ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿಗೆ ಒಂದು ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸಲು ಕ್ರಮ ವಹಿಸುವಂತೆ ಮನವಿ ಮಾಡಿದರು.

     ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ, ಮಕ್ಕಳನ್ನು ಆರೋಗ್ಯವಂತರನ್ನಾಗಿ ಬೆಳೆಸುವುದು ಪೋಷಕರ ಕರ್ತವ್ಯವಾಗಬೇಕು. ರೋಗಿಗಳನ್ನು ವಿನಯಪೂರ್ವಕವಾಗಿ ಕಾಣುವುದು ವೈದ್ಯರು ಹಾಗೂ ಸಿಬ್ಬಂದಿಯ ಕರ್ತವ್ಯವಷ್ಟೇ ಅಲ್ಲದೆ ಸಮಯ ಪರಿಪಾಲನೆ ಅತಿ ಮುಖ್ಯ. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಹಾಗೂ ಉತ್ತಮ ಚಿಕಿತ್ಸೆ ಲಭ್ಯವಾಗಲು ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದರು.

      ಸಂಸದ ಎ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ರಾಜ್ಯದ ಜನತೆಯ ಆರೋಗ್ಯ ದೃಷ್ಟಿಯಿಂದ ಆಸ್ಪತ್ರೆಗಳ ಉನ್ನತೀಕರಣಕ್ಕೆ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್‍ನಂತಹ ಕಷ್ಟದ ಸಂದರ್ಭದಲ್ಲೂ ಸರ್ಕಾರ ಆಡಳಿತವನ್ನು ನಿಭಾಯಿಸಿದ್ದು, ಮುಂದಿನ ಐದು ವರ್ಷಗಳಲ್ಲಿ ಆರೋಗ್ಯ ಕೇಂದ್ರಗಳು ಸಾಕಷ್ಟು ಸುಧಾರಿಸಲಿವೆ ಎಂದರು.

      ಜಿಲ್ಲಾಧಿಕಾರಿ ಶಿವನಗೌಡ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಡಾ.ವಂಶಿಕೃಷ್ಣ, ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್, ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಆರ್.ಗೌಡ, ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ತಾ.ಪಂ. ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷ ರಂಗನಾಥಗೌಡ, ತಹಸೀಲ್ದಾರ್ ಮಮತಾ, ಡಿ.ಹೆಚ್.ಓ. ನಾಗೇಂದ್ರಪ್ಪ, ತಾ. ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರಾಮಕೃಷ್ಣ, ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಾಥ್, ತಾ. ವೈದ್ಯಾಧಿಕಾರಿ ಅಬ್ದುಲ್ ಉರ್ ರೆಹಮಾನ್ ಸೇರಿದಂತೆ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು.

      ರಾಜ್ಯ ಸರ್ಕಾರವು ಜನ ಸಾಮಾನ್ಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿದೆ. ಸುಧಾಕರ್ ಅವರು ಆರೋಗ್ಯ ಸಚಿವರಾದ ನಂತರ ಸದರಿ ಇಲಾಖೆ ಸಾಕಷ್ಟು ಸುಧಾರಿಸಿದೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಶಿರಾ ನಗರ ದಿನ ದಿನಕ್ಕೂ ಬೆಳೆಯುತ್ತಿದ್ದು ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಪಡೆದಿದೆ. ಈ ಹಿನ್ನೆಲೆಯಲ್ಲಿ ಶಿರಾ ತಾಲ್ಲೂಕಿಗೆ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡಿಸುವುದು ಅಗತ್ಯ

-ಚಿದಾನಂದ್ ಎಂ.ಗೌಡ, ವಿಧಾನಪರಿಷತ್ ಸದಸ್ಯ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap