ಶಿರಾ : ಬಹು ಗ್ರಾಮ ಯೋಜನೆಗಳಿಗೆ ಹೇಮಾವತಿ ನೀರು ಹರಿಸಲು ಒತ್ತಾಯ

 ಶಿರಾ :

      ತಾಲ್ಲೂಕಿನಲ್ಲಿ ಕೈಗೊಂಡಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಹಾಗೂ ಕೈಗಾರಿಕಾ ವಸಾಹತು ಪ್ರದೇಶಗಳಿಗೆ ಹೆಚ್ಚುವರಿಯಾಗಿ ಹೇಮಾವತಿ ನಾಲೆಯಿಂದ 1 ಟಿ.ಎಂ.ಸಿ. ನೀರನ್ನು ಈ ಕೂಡಲೇ ಹರಿಸುವಂತೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

      ಬುಧವಾರ ನಗರದ ಅವರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತತ ಮಳೆಯ ಅಭಾವದಿಂದಾಗಿ ಶಿರಾ ತಾಲ್ಲೂಕಿನ ಅಂತರ್ಜಲ ಮಟ್ಟ ಕುಸಿದಿದೆ. ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಜನ ವಸತಿ ಪ್ರದೇಶಗಳಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಅಗತ್ಯವಿದೆ. ಅಂತರ್ಜಲವನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ರಸಾಯನಿಕ ಲವಣಾಂಶದ ನೀರಿನಿಂದಾಗಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲಾ ಒಂದೇ ಮಾರ್ಗ ಹೇಮಾವತಿ ನೀರನ್ನು ಹರಿಸುವುದಷ್ಟೆ ಆಗಿದೆ ಎಂದರು.
ಈ ಹಿಂದೆ ನಾನು ಸಚಿವನಾಗಿದ್ದಾಗ ಕೇಂದ್ರ ಸರ್ಕಾರದ ಬಹು ಗ್ರಾಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದೆನು. ಯಲಿಯೂರು ಮತ್ತು ಇತರೆ 23 ಗ್ರಾಮಗಳಿಗೆ ಅಂದಾಜು 4.60 ಕೋಟಿ ರೂ, ಕಳ್ಳಂಬೆಳ್ಳ ಮತ್ತು ಇತರೆ 22 ಗ್ರಾಮಗಳಿಗೆ 6.10 ಕೋಟಿ ರೂ, ಕಳ್ಳಂಬೆಳ್ಳ ಮತ್ತು ಇತರೆ 64 ಗ್ರಾಮಗಳಿಗೆ 15.35 ಕೋಟಿ ರೂ.ಗಳ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯನ್ನು ರೂಪಿಸಲಾಗಿತ್ತು. ಈ ಕಾಮಗಾರಿಗಳು ಮುಗಿದು ಮೂರು ವರ್ಷ ಕಳೆದರೂ ಒಂದು ಹನಿ ನೀರನ್ನೂ ಪೂರೈಸಲಾಗಿಲ್ಲ ಎಂದರು.

      ಈ ಮೂರೂ ಯೋಜನೆಗಳಿಗೆ ಬೇಕಾಗುವ ನೀರಿನ ಮೂಲವು ಕಳ್ಳಂಬೆಳ್ಳ ಮತ್ತು ಶಿರಾ ದೊಡ್ಡ ಕೆರೆ ಆಗಿರುತ್ತದೆ. ಕೆರೆಯಲ್ಲಿ ನೀರಿದ್ದರೂ ಯೋಜನೆ ಚಾಲನೆಯಾಗದಿರುವುದರಿಂದ ಜನರ ಕುಡಿಯುವ ನೀರಿನ ಬವಣೆಯೂ ಹೆಚ್ಚಾಗಿದೆ. ಶಿರಾ ತಾಲ್ಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹೊಸ ಕೈಗಾರಿಕೆಗಳ ಬೆಳವಣಿಗೆಗಳ ಪೂರಕ ನೀತಿಯಿಂದಾಗಿ ಶಿರಾ ಪಟ್ಟಣದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಉತ್ತಮ ವಾತಾವರಣವಿರುವುದರಿಂದ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದರು.

      ಉಪ ಚುನಾವಣೆಯ ಹಿನ್ನೆಲೆಯಲ್ಲಿ ಮದಲೂರು ಕೆರೆಗೆ ಹೇಮಾವತಿ ಹರಿಸಿ 6 ತಿಂಗಳಲ್ಲಿ ಕೆರೆ ತುಂಬಿಸುವುದಾಗಿ ಹಾಗೂ ತಾವೇ ಬಂದು 6 ತಿಂಗಳೊಳಗೆ ಕೆರೆಗೆ ಬಾಗಿನ ಅರ್ಪಿಸುವುದಾಗಿ ಮುಖ್ಯಮಂತ್ರಿಗಳು ಹೇಳಿ ಹೋಗಿದ್ದರು. ಜನರಿಗೆ ಭರವಸೆ ನೀಡಿ ರಾಜಕೀಯ ಶಕ್ತಿ ಪಡೆದ ನಂತರ ಕೈಚೆಲ್ಲಿ ಕೂತರು. ಮದಲೂರು ಕೆರೆಗೆ ಹರಿಸಬೇಕಿದ್ದ 250 ಕ್ಯುಸೆಕ್ಸ್ ನೀರಿನ ಪೈಕಿ ಕೇವಲ 65 ಕ್ಯುಸೆಕ್ಸ್ ನೀರನ್ನು ಹರಿಸಲಾಗಿದೆ ಅಷ್ಟೆ ಎಂದ ಮಾಜಿ ಸಚಿವ ಜಯಚಂದ್ರ, ಗೊರೂರು ಜಲಾಶಯದಲ್ಲಿ ಇನ್ನೂ 17 ಟಿ.ಎಂ.ಸಿ. ನೀರಿದ್ದು, ಈ ಪೈಕಿ ಶಿರಾ ಭಾಗಕ್ಕೆ 1 ಟಿ.ಎಂ.ಸಿ. ನೀರನ್ನು ಹರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

      ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಟರಾಜ್ ಬರಗೂರು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇಖಾ ರಾಘವೇಂದ್ರ, ಅರೇಹಳ್ಳಿ ರಮೇಶ್, ಡಿ.ಸಿ.ಅಶೋಕ್, ರೇಣುಕಾ ಶಿವಕುಮಾರ್, ಸೋರೇಕುಂಟೆ ಸತ್ಯನಾರಾಯಣ್, ಮಮತಾ, ರವಿಕುಮಾರ್, ಹಂದಿಕುಂಟೆ ರಂಗನಾಥ್ ಮುಂತಾದವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap