ಶಿರಾ :
ಕೋವಿಡ್-19 ಸೋಂಕನ್ನು ಪತ್ತೆ ಹಚ್ಚುವ ಕಾರ್ಯವನ್ನು ತ್ವರಿತಗೊಳಿಸುವ ದೃಷ್ಟಿಯಿಂದ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 2 ಕೋಟಿ ರೂ. ವೆಚ್ಚದ ಕೋವಿಡ್ ಆರ್.ಟಿ.ಪಿ.ಸಿ.ಆರ್. ಪ್ರಯೋಗಾಲಯಕ್ಕೆ ಜಿಲ್ಲಾ ಸಚಿವ ಜೆ.ಸಿ.ಮಾಧುಸ್ವಾಮಿ ಬುಧವಾರ ಚಾಲನೆ ನೀಡಿದರು.
ಅವರು ಶಿರಾ ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೋವಿಡ್ ಆರ್.ಟಿ.ಪಿ.ಸಿ.ಆರ್ ಪ್ರಯೋಗಾಲಯಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರವು ಜಿಲ್ಲಾ ಕೇಂದ್ರ ಹಾಗೂ ತಿಪಟೂರಿನಲ್ಲಿ ಪ್ರಯೋಗಾಲಯವನ್ನು ಆರಂಭಿಸಿತು. ಶಿರಾ ತಾಲ್ಲೂಕಿನಲ್ಲೂ ಕೂಡ ಸೋಂಕಿನ ಪ್ರಮಾಣ ಹೆಚ್ಚಾದ್ದರಿಂದ ಈ ಭಾಗದಲ್ಲೂ ಒಂದು ಪ್ರಯೋಗ ಶಾಲೆ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿರಾದಲ್ಲಿ ಆರಂಭಗೊಂಡಿರುವ ಆರ್.ಟಿ.ಪಿ.ಸಿ.ಆರ್. ಪ್ರಯೋಗಾಲಯವು ಸುಮಾರು 1500 ಕೋವಿಡ್ ಟೆಸ್ಟ್ ಮಾಡುವ ಸಾಮಥ್ರ್ಯ ಹೊಂದಿದ್ದು, ಈ ಪ್ರಯೋಗಾಲಯಕ್ಕೆ 80 ಲಕ್ಷ ರೂ. ಬೆಲೆ ಬಾಳುವ ಉಪಕರಣಗಳನ್ನು ಜೋಡಿಸಲಾಗಿದೆ. ಸಾರ್ವಜನಿಕರು ಈ ಪ್ರಯೋಗಾಲಯದ ಲಾಭ ಪಡೆಯಲಿದ್ದಾರೆ ಎಂದು ಜಿಲ್ಲಾ ಸಚಿವರು ಹೇಳಿದರು.
ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ಮಾತನಾಡಿ, ಜಿಲ್ಲೆಯಲ್ಲಿ ಅದರಲ್ಲೂ ಶಿರಾ ಭಾಗದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾದಾಗ ಅದನ್ನು ನಿರ್ವಹಣೆ ಮಾಡುವಲ್ಲಿ ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಭೆಗಳನ್ನು ಕರೆದು ಸೂಕ್ತ ಕ್ರಮ ಕೈಗೊಂಡ ಪರಿಣಾಮ ಯಶಸ್ವ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದೆ. ಆರ್.ಟಿ.ಪಿ.ಸಿ.ಆರ್. ಸ್ವಾಬ್ ಟೆಸ್ಟ್‍ನ ಪ್ರಯೋಗಾಲಯದ ಅಗತ್ಯ ಶಿರಾ ತಾಲ್ಲೂಕಿಗೂ ಇದ್ದ ಪರಿಣಾಮ, ಸರ್ಕಾರ 2 ಕೋಟಿ ರೂ. ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಈ ಹಿಂದೆ ಆರ್.ಟಿ.ಪಿ.ಸಿ.ಆರ್. ಟೆಸ್ಟ್‍ನ ಫಲಿತಾಂಶ ಬರಲು ನಾಲ್ಕೈದು ದಿನ ಕಾಯಬೇಕಿತ್ತು. ಆದರೆ ಇನ್ನು ಮುಂದೆ ಒಂದು ದಿನದಲ್ಲಿ ಸ್ವಾಬ್ ಟೆಸ್ಟ್ ಫಲಿತಾಂಶ ಲಭ್ಯವಾಗಲಿದೆ ಎಂದರು.
ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ಕೋವಿಡ್ ನಿರ್ವಹಣೆಗಾಗಿ ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಈ ನಡುವೆ ಕೋವಿಡ್ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳಿಗೆ ನೆರವಾಗುವಂತಹ ಹಾಗೂ ಸೋಂಕಿತರಿಗೆ ಕೂಡಲೆ ಚಿಕಿತ್ಸೆ ಲಭ್ಯವಾಗುವಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಪರಿಣಾಮ ಸೋಂಕನ್ನು ತಡೆಯಲು ಸಾಧ್ಯವಾಗಿದೆ ಎಂದರು.
ಜಿಲ್ಲಾಧಿಕಾರಿ ಸಿ.ಎಸ್.ಪಾಟೀಲ್, ರೇಷ್ಮೆ ಉದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ, ಆಡಳಿತ ವೈದ್ಯ ಡಾ.ಶ್ರೀನಾಥ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಡಿ.ಎಂ.ಗೌಡ, ತಾ.ಪಂ. ಇ.ಓ. ಲಕ್ಷ್ಮಣ್, ನಗರ ಬಿ.ಜೆ.ಪಿ. ಘಟಕದ ಅಧ್ಯಕ್ಷ ವಿಜಯರಾಜ್ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ