ತುಮಕೂರು :
ಶಿರಾ ಉಪ ಚುನಾವಣೆ ಈಗ ಜಿಲ್ಲೆಯಲ್ಲೇ ಸದ್ದು ಮಾಡುತ್ತಿದ್ದು, ನಮ್ಮ ಪಕ್ಷದವರೇ ಗೆಲ್ಲುತ್ತಾರೆ ಎಂದು ಕೆಲವರು ಬೆಟ್ಟಿಂಗ್ ದಂಧೆಯಲ್ಲಿ ನಿರತರಾಗಿದ್ದಾರೆ.
ನ.10 ರಂದು ನಡೆಯಲಿರುವ ಮತ ಎಣಿಕೆಗೆ ತಾಲ್ಲೂಕಿನಾದ್ಯಂತ ಜನ ತುದಿಗಾಲಿನಲ್ಲಿ ನಿಂತಿದ್ದು, ಅವರವರ ಪಕ್ಷಗಳ ಬಲಾಬಲದ ಬಗ್ಗೆಯೇ ಎಲ್ಲೆಡೆ ಚರ್ಚೆ ಆರಂಭಿಸಿದ್ದಾರೆ. ಹೋಟೆಲ್, ಸರ್ಕಲ್ ಎಲ್ಲಿ ನೋಡಿದರಲ್ಲಿ ಜನರ ಗುಂಪೇ ಸೇರಿ ಪಕ್ಷಗಳ ಬಲಾಬಲದ ಬಗ್ಗೆ ಏರು ಧ್ವನಿಯಲ್ಲಿಯೇ ಮಾತನಾಡುತ್ತಿದ್ದಾರೆ.
ಕೆಲವು ಯುವಕರು ಕಾಂಗ್ರೆಸ್ ಗೆಲ್ಲುವುದೆಂದರೆ ಇನ್ನು ಕೆಲವರು ಬಿಜೆಪಿಯೇ ಇಲ್ಲಿ ಬರುವುದು ಎಂದು ತಮ್ಮ ಬಳಿ ಇರುವ ಬೈಕ್, ಉಂಗುರ, ಕುರಿಗಳನ್ನು ಪಣಕ್ಕಿಡುತ್ತಿದ್ದಾರೆ.
ಕೆಲವರು ಕಾಂಗ್ರೆಸ್ ಗೆದ್ದರೆ ನಮ್ಮ ಮನೆಯಲ್ಲಿರುವ ಕೋಳಿಗಳನ್ನೆಲ್ಲಾ ಕೊಡುತ್ತೇನೆ ಎಂದರೆ, ಬಿಜೆಪಿಯವರು ನಮ್ಮ ಪಕ್ಷ ಗೆದ್ದರೆ ಕೈಯಲ್ಲಿರುವ ಉಂಗುರ ಪಣಕ್ಕಿಡುತ್ತೇನೆ. ಯಾರು ಗೆಲ್ಲುತ್ತಾರೆ ನೋಡೇ ಬಿಡೋಣ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಬೆಟ್ಟಿಂಗ್ ನಡೆಯುತ್ತಿತ್ತು. ಈಗ ಬಿಜೆಪಿಯ ಅಲೆ ಎಲ್ಲೆಡೆ ಇರುವುದರಿಂದ ಬಿಜೆಪಿಯೇ ಗೆಲ್ಲುತ್ತದೆ ಎನ್ನುತ್ತಾರೆ.
ಈ ದಂಧೆ ಪಟ್ಟಣಕ್ಕಿಂತ ಹಳ್ಳಿಗಳಲ್ಲೇ ಹೆಚ್ಚು ಜೋರಾಗಿ ನಡೆಯುತ್ತಿದೆ. ಪಟ್ಟಣದಲ್ಲಿ ಹಣವನ್ನಷ್ಟೇ ಬೆಟ್ಟಿಂಗ್ ಇಡುತ್ತಿದ್ದರೆ, ಹಳ್ಳಿಗಳಲ್ಲಿ ಕೋಳಿ, ಕುರಿ, ಮೇಕೆ, ಅಷ್ಟೇ ಏಕೆ ಕೈಯಲ್ಲಿರುವ ಬಂಗಾರದ ಉಂಗುರವನ್ನು ಸಹ ಬೆಟ್ಟಿಂಗ್ ಇಡುತ್ತಿದ್ದಾರೆ. ಇದಕ್ಕೆಲ್ಲಾ ಉತ್ತರ ನ.10 ರ ಫಲಿತಾಂಶದ ನಂತರವೇ ಸಿಗುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ