ಶಿರಾ : ಕೋವಿಡ್ ನಿಯಮ ಉಲ್ಲಂಘನೆಗೆ ದಂಡ!!

ಶಿರಾ :

      ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಿದ ಕೂಡಲೆ ಶಿರಾ ನಗರದಲ್ಲೂ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮಾಸ್ಕ್ ಧರಿಸದೆ ಇರುವ ಮಂದಿ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಶಿರಾ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅಂತಹವರಿಗೆ ದಂಡ ವಿಧಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

        ಲಾಕ್‍ಡೌನ್ ಸಡಿಲಿಕೆಯಿಂದ ನಗರದ ಬಹುತೇಕ ಅಂಗಡಿ-ಮುಂಗಟ್ಟುಗಳನ್ನು ತೆರೆಯಲಾಗಿದ್ದು, ವ್ಯಾಪಾರಗಳು ಆರಂಭಗೊಂಡಿವೆ. ಆದರೆ ಅನೇಕ ಅಂಗಡಿಗಳ ಮಾಲೀಕರು ಖರೀದಿದಾರರಿಗೆ ಮಾಸ್ಕ್ ಹಾಕಲು ತಿಳಿವಳಿಕೆ ನೀಡುತ್ತಿಲ್ಲ ಹಾಗೂ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳುತ್ತಿಲ್ಲ.

      ಈ ಕಾರಣದಿಂದಾಗಿ ನಗರಸಭೆಯ ಆಯುಕ್ತ ಪರಮೇಶ್ವರಪ್ಪ ಕೋವಿಡ್-19 ನಿಯಮಗಳನ್ನು ಪಾಲಿಸದೆ ಇದ್ದವರ ವಿರುದ್ಧ ತಾಲ್ಲೂಕು ದಂಡಾಧಿಕಾರಿಗಳ ಸೂಚನೆಯಂತೆ ಇದೀಗ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳತೊಡಗಿದ್ದಾರೆ. ಸಾರ್ವಜನಿಕರು ಮಾಸ್ಕ್‍ಗಳನ್ನು ಧರಿಸದೇ ಇದ್ದಲ್ಲಿ ಪ್ರಥಮವಾಗಿ 50 ರೂ, ಹಾಗೂ 2 ನೆ ಹಂತದಲ್ಲೂ ನಿಯಮ ಉಲ್ಲಂಘಿಸಿದಲ್ಲಿ 100 ರೂ ದಂಡ ವಿಧಿಸುತ್ತಿದ್ದಾರೆ.

      ನಗರದ ಕೆಲವು ಜವಳಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪರಿಣಾಮ ಅನೇಕ ಮಂದಿ ಸಾರ್ವಜನಿಕರಿಗೆ ಪ್ರಥಮ ಹಂತದಲ್ಲಿ 250 ರೂ. ಹಾಗೂ ಸದರಿ ತಪ್ಪು ಪುನರಾವರ್ತನೆ ಮಾಡಿದವರಿಗೆ 500 ರೂ. ದಂಡ ವಿಧಿಸಲು ಆರಂಭಿಸಿದ್ದಾರೆ. ಅಂಗಡಿ-ಮುಂಗಟ್ಟುಗಳ ಮಾಲೀಕರು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯವಹಾರ ನಡೆಸದಿದ್ದಲ್ಲಿ ಅಂಗಡಿಯ ಪರವಾನಗಿ ರದ್ದುಪಡಿಸುವಂತೆ ನಗರಸಭೆಯ ಆಯುಕ್ತರು ತಾಕೀತು ಮಾಡಿದ್ದಾರೆ. ಈ ಸಂಬಂಧ ಕಳೆದ ಎರಡು ದಿನಗಳಲ್ಲಿ 10,000 ಕ್ಕೂ ಹೆಚ್ಚು ದಂಡವನ್ನು ವಸೂಲು ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link