ಶಿರಾ ಕನಕ ಪತ್ತಿನ ಸಹಕಾರ ಸಂಘ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಶಿರಾ :

      ಶಿರಾ ತಾಲ್ಲೂಕು ಶ್ರೀ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯು ಸೋಮವಾರ ನಡೆದಿದ್ದು ,ಸದರಿ ಸಂಘದ ನೂತನ ಅಧ್ಯಕ್ಷರಾಗಿ ರಂಗನಾಥ್ ಎಸ್.ಕೆ.ದಾಸಪ್ಪ ಹಾಗೂ ಉಪಾಧ್ಯಕ್ಷರಾಗಿ ಎಸ್.ಪಿ.ಶಿವಶಂಕರ್ ಅವಿರೋಧವಾಗಿ ಆಯ್ಕೆಯಾದರು. ಸೋಮವಾರ ಕನಕ ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ಸಹಕಾರ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಚುನಾವಣಾಧಿಕಾರಿ ಶ್ರೀನಿವಾಸ್ ಸಮ್ಮುಖದಲ್ಲಿ ಬೆಳಗ್ಗೆ 9 ಗಂಟೆಗೆ ಚುನಾವಣಾ ಪ್ರಕ್ರಿಯೆಯು ಆರಂಭಗೊಂಡಿತು.

      ಅಧ್ಯಕ್ಷ ಸ್ಥಾನಕ್ಕೆ ರಂಗನಾಥ್ ಎಸ್.ಕೆ.ದಾಸಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶಿವಶಂಕರ್ ನಾಮಪತ್ರ ಸಲ್ಲಿಸಿದರು. ಈ ಎರಡೂ ಸ್ಥಾನಗಳಿಗೆ ಈ ಇಬ್ಬರನ್ನು ಹೊರತುಪಡಿಸಿ ಯಾರೂ ಕೂಡ ನಾಮಪತ್ರ ಸಲ್ಲಿಸದ ಪರಿಣಾಮ ರಂಗನಾಥ್ ಎಸ್.ಕೆ.ದಾಸಪ್ಪ ಅಧ್ಯಕ್ಷರಾಗಿ ಹಾಗೂ ಶಿವಶಂಕರ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.

     ಅಧ್ಯಕ್ಷರಾದ ರಂಗನಾಥ್ ಎಸ್.ಕೆ.ದಾಸಪ್ಪ ಮಾತನಾಡಿ, ಅತ್ಯಂತ ಕಡಿಮೆ ಅವಧಿಯಲ್ಲಿ ಸಂಸ್ಥಾಪಕ ಅಧ್ಯಕ್ಷರಾಗಿದ್ದ ನಮ್ಮ ತಂದೆ ಹಾಗೂ ಮಾಜಿ ಶಾಸಕರೂ ಆಗಿದ್ದ ಎಸ್.ಕೆ.ದಾಸಪ್ಪ ಅವರು ಬ್ಯಾಂಕಿನ ಅಭಿವೃದ್ಧಿಗೆ ಒತ್ತು ನೀಡಿದ್ದು ಇದಕ್ಕೆ ಗ್ರಾಹಕರು, ಠೇವಣಿದಾರರು ಹಾಗೂ ಸಂಘದ ಎಲ್ಲಾ ನಿರ್ದೇಶಕರ ಮತ್ತು ಸಿಬ್ಬಂದಿಯ ಸಹಕಾರವೆ ಪ್ರಮುಖ ಕಾರಣ ಎಂದರು.

     ಶಿರಾ ಕೇಂದ್ರ ಕಛೇರಿಯನ್ನಾಗಿಸಿಕೊಂಡು ಈವರೆಗೆ 7 ಶಾಖೆಗಳನ್ನು ನಮ್ಮ ಸಹಕಾರ ಸಂಘ ಹೊಂದಿದ್ದು, ಎರಡು ಶಾಖೆಗಳಲ್ಲಿ ಸ್ವಂತ ಕಟ್ಟಡವನ್ನು ಹೊಂದಿದೆ. ಉಳಿದ ಶಾಖೆಗಳು ಕೂಡ ಸ್ವಂತ ಕಟ್ಟಡ ಹೊಂದಲು ಕ್ರಿಯಾಶೀಲ ಪ್ರಯತ್ನ ಮಾಡಲಾಗುವುದು ಎಂದರು.
ಠೇವಣಿ ಸಂಗ್ರಹಣೆ, ವಸೂಲಾತಿಯಲ್ಲೂ ಸಂಘವು ಕ್ರಿಯಾಶೀಲತೆಯನ್ನು ಕಂಡಿದೆ. 50 ಕೋಟಿ ರೂ.ಗಳ ಠೇವಣಿ ಸಂಗ್ರಹಣೆ ಹೊಂದಿರುವ ಸಂಘವು 40 ಕೋಟಿ ರೂ.ಗಳ ಸಾಲವನ್ನೂ ನೀಡಿದೆ. 16 ಕೋಟಿ ರೂ. ಹೂಡಿಕೆಯನ್ನು ಹೊಂದುವ ಮೂಲಕ ವಸೂಲಾತಿ ಪ್ರಮಾಣದಲ್ಲೂ ಮುಂದಿದೆ ಎಂದರು. 

      ಉಪಾಧ್ಯಕ್ಷರಾದ ಎಸ್.ಪಿ.ಶಿವಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಅತ್ಯಂತ ಗಮನಾರ್ಹವಾದ ಸಹಕಾರ ಸಂಘವಾಗಿ ಪ್ರಚಲಿತಗೊಳ್ಳಲು ದಿ.ಎಸ್.ಕೆ.ದಾಸಪ್ಪ ಹಾಗೂ ಈ ಭಾಗದ ಎಲ್ಲಾ ಹಿರಿಯರ ಶ್ರಮ ನಿಜಕ್ಕೂ ಸ್ತುತ್ಯರ್ಹ. ನಿರ್ದೇಶಕರ ಸಹಕಾರದಿಂದ ಸಂಘದ ಮತ್ತಷ್ಟು ಬೆಳವಣಿಗೆಗೆ ಶ್ರಮಿಸಲಾಗುವುದು ಎಂದರು.

      ಸಂಘದ ನೂತನ ನಿರ್ದೇಶಕರಾದ ಆರ್.ಡಿ.ಮಂಜುನಾಥ್, ಎಸ್.ಮಂಜುನಾಥ್, ಬಿ.ಜೆ.ಕರಿಯಪ್ಪ, ಹೆಚ್.ಸುರೇಶ್, ವಿ.ಜಿ.ಕನಕರಾಜು, ಎಲ್.ಭಾನುಪ್ರಕಾಶ್, ಹೆಚ್.ಎಸ್.ಹೇಮಂತರಾಜು, ಎಸ್.ಎಲ್.ರಂಗನಾಥ್, ಆರ್.ಮಂಜುನಾಥ್, ಸುಶೀಲಾ ವಿರೂಪಾಕ್ಷ, ಕಡೇಮನೆ ಎಸ್.ರವಿಕುಮಾರ್, ಪುಟ್ಟರಂಗಮ್ಮ, ತ್ರಿವೇಣಿ, ಪ್ರಧಾನ ವ್ಯವಸ್ಥಾಪಕ ಆರ್.ಲಕ್ಷ್ಮಣ್ ಸೇರಿದಂತೆ ಅನೇಕ ಪ್ರಮುಖರು ಹಾಗೂ ಸಂಘದ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap