ಸ್ಮಾರ್ಟ್ ಸಿಟಿಗಳಾಗುತ್ತಿರುವ ಹಲವು ನಗರಗಳು..! 

ಕರ್ನಾಟಕ ರಾಜ್ಯದ ಏಳು ನಗರಗಳಲ್ಲಿ ತುಮಕೂರೂ ಒಂದು
ತುಮಕೂರು
ವಿಶೇಷ ವರದಿ : ರಾಕೇಶ್.ವಿ
    ಸ್ಮಾರ್ಟ್ ಸಿಟಿ ಯೋಜನೆಯನ್ನು ಕೇಂದ್ರ ಸರ್ಕಾರ 2015ರ ಜೂನ್ 25ರಂದು ಜಾರಿಗೆ ತಂದಿತು . ಇದು ದೇಶಾದ್ಯಂತ 100 ನಗರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಭಾರತ ಸರ್ಕಾರವು ನಗರ ನವೀಕರಣ ಮತ್ತು ಮರುಪರಿಶೀಲಿಸುವ ಕಾರ್ಯಕ್ರಮವಾಗಿದ್ದು, ಅವುಗಳನ್ನು ನಾಗರಿಕ ಸ್ನೇಹಿ ಮತ್ತು ಸುಸ್ಥಿರವಾಗಿಸುತ್ತದೆ. ಆಯಾ ನಗರಗಳ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಮಿಷನ್ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಹೊಂದಿದೆ.
ಸ್ಮಾರ್ಟ್ ಸಿಟಿ ಉದ್ದೇಶ
   ಪ್ರದೇಶದ ಅಭಿವೃದ್ಧಿ ಯೋಜನೆಯ ಆಧಾರದ ಮೇಲೆ ದೇಶದ 100 ನಗರಗಳಲ್ಲಿ ಆಯ್ದ ಪ್ರದೇಶವನ್ನು ಮಾದರಿ ಪ್ರದೇಶಗಳಾಗಿ ಅಭಿವೃದ್ಧಿಪಡಿಸುವುದು ಸ್ಮಾರ್ಟ್ ಸಿಟಿ ಮಿಷನ್ ಉದ್ದೇಶವಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಸಾಕಷ್ಟು ನಗರಗಳ ಹೆಸರುಗಳನ್ನು ಪ್ರಸ್ತಾಪಿಸಲಾಗಿತ್ತು. ಈ ಸವಾಲನ್ನು ಎದುರಿಸಿ 2018ರ ಜನವರಿ ವೇಳೆಗೆ 99 ನಗರಗಳನ್ನು ನವೀಕರಿಸಲು ಆಯ್ಕೆ ಮಾಡಲಾಗಿದೆ.
   ಸ್ಮಾರ್ಟ್ ಸಿಟಿ ಯೋಜನೆಯು ಐದು ವರ್ಷಗಳ ಕಾರ್ಯಕ್ರಮವಾಗಿದ್ದು, 99 ನಗರಗಳ ಆಯ್ಕೆಯೊಂದಿಗೆ ಒಂದು ನಗರವನ್ನು ನಾಮನಿರ್ದೇಶನ ಮಾಡುವ ಮೂಲಕ ಪಶ್ಚಿಮ ಬಂಗಾಳವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯಡಿ ನಗರ ನವೀಕರಣದಲ್ಲಿ ಪಾಲ್ಗೊಂಡಿವೆ. ಈ ಯೋಜನೆಯ ನಗರಗಳಿಗೆ 2017-2022ರ ನಡುವೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಣಕಾಸಿನ ನೆರವು ನೀಡಲಿದ್ದು, 2022ರ ನಂತರದಲ್ಲಿ ಫಲಿತಾಂಶವನ್ನು ಕಾಣಬಹುದು ಎಂದು ಉದ್ದೇಶಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಗೆ ಹಣಕಾಸು ನೆರವು
   ದೇಶದಲ್ಲಿ ಆಯ್ದ 99 ನಗರಗಳಲ್ಲಿ ಪ್ರತಿ ನಗರವು ಸ್ಮಾರ್ಟ್ ಸಿಟಿ ಯೋಜನೆ ಕಾರ್ಯಗತಗೊಳಿಸಲು ಪೂರ್ಣ ಸಮಯದ ಮುಖ್ಯಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ವಿಶೇಷ ಉದ್ದೇಶದ ವಾಹನ ( ಎಸ್‍ಪಿವಿ : ಸ್ಪೆಷಲ್ ಪರ್ಪಸ್ ವೆಹಿಕಲ್) ರಚನೆ ಮಾಡಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸ್ಮಾರ್ಟ್ ಸಿಟಿ ಕಂಪನಿಗೆ ಒಂದು ಸಾವಿರ ಕೋಟಿ ರೂಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಒಟ್ಟು 98 ಸಾವಿರ ಕೋಟಿ ರೂಗಳನ್ನು ಮೀಸಲಿಡಲಾಗಿದೆ. ಅದರಂತೆ ಒಂದು ವರ್ಷಕ್ಕೆ ಒಂದು ನಗರಕ್ಕೆ 200 ಕೋಟಿ ರೂಗಳು ಅಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ.50ರಷ್ಟು (100+100 ಕೋಟಿ) ಹಣವನ್ನು ನೀಡುತ್ತವೆ. 
ನಗರಗಳ ಆಯ್ಕೆ 
   ದೇಶದಾದ್ಯಂತ ಒಟ್ಟು ಐದು ಹಂತಗಳಲ್ಲಿ ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಂದನೇ ಹಂತದಲ್ಲಿ 20ನಗರಗಳು, 2ನೇ ಹಂತದಲ್ಲಿ 13 ನಗರಗಳು, 3ನೇ ಹಂತದಲ್ಲಿ 27ನಗರಗಳು,  4ನೇ ಹಂತದಲ್ಲಿ 30 ನಗರಗಳು ಹಾಗೂ 5ನೇಹಂತದಲ್ಲಿ 9 ನಗರಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದ ನಗರಗಳನ್ನು ನೋಡುವುದಾದರೆ 1ನೇ ಹಂತದಲ್ಲಿ ದಾವಣಗೆರೆ, ಬೆಳಗಾವಿ 2ನೇ ಹಂತದಲ್ಲಿ ಮಂಗಳೂರು, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಧಾರವಾಡ, 3ನೇ ಹಂತದಲ್ಲಿ ಬೆಂಗಳೂರು ನಗರ ಒಟ್ಟು ರಾಜ್ಯದ 7 ನಗರಗಳನ್ನು ಆಯ್ಕೆ ಮಾಡಲಾಗಿದೆ. 
ಸ್ಮಾರ್ಟ್ ಸಿಟಿ ನಗರಗಳಲ್ಲಿ ತುಮಕೂರು
   ರಾಜ್ಯದ 7 ನಗರಗಳಲ್ಲಿ ತುಮಕೂರು ನಗರವೂ ಒಂದಾಗಿದ್ದು, 2016ರ ಅಕ್ಟೋಬರ್ 03ರಂದು ಘೋಷಣೆ ಮಾಡಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿರುವ ಅನುದಾನವನ್ನು ಬಳಸಿಕೊಂಡು ತುಮಕೂರು ನಗರ ನಾಗರಿಕರಿಗೆ ಸ್ಮಾರ್ಟ್ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ತುಮಕೂರು ಸ್ಮಾರ್ಟ್ ಸಿಟಿ ಕಂಪನಿಯು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ. ಸ್ಮಾರ್ಟ್ ಸಿಟಿಯ ಒಟ್ಟು ಅನುದಾನ ಒಂದು ಸಾವಿರ ಕೋಟಿ ರೂಗಳಲ್ಲಿ ವಿವಿಧ ಯೋಜನೆಗಳನ್ನು 5 ವರ್ಷದಲ್ಲಿ ಅನುಷ್ಠಾನಗೊಳಿಸಲು ಯೋಜಿಸಲಾಗಿದೆ.
   ಇದರ ಜೊತೆಗೆ 270.73 ಕೋಟಿಗಳ ವೆಚ್ಚದಲ್ಲಿ 5 ಯೋಜನೆಗಳು ಸಾರ್ವಜನಿಕ ಸಹಭಾಗಿತ್ವದ ಯೋಜನೆಗಳಾಗಿ ಮತ್ತು 549.00 ಕೋಟಿಗಳ ವೆಚ್ಚದ 04 ಯೋಜನೆಗಳನ್ನು ಕನ್ವರ್ಜೆನ್ಸಿ ಯೋಜನೆಗಳಾಗಿ ಗುರುತಿಸಲಾಗಿದೆ. ಜೊತೆಗೆ ಇತರೆ ಇಲಾಖೆಗಳು ತಮ್ಮ ಅನುದಾನದಲ್ಲಿ ಈ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಒಟ್ಟು ವೆಚ್ಚ 1819.73 ಕೋಟಿಗಳಷ್ಠಾಗಿದೆ.
ಅಭಿವೃದ್ಧಿಗೆ ವಾರ್ಡ್‍ಗಳ ಆಯ್ಕೆ 
   ಸ್ಮಾರ್ಟ್ ಸಿಟಿ ಅನುದಾನದಲ್ಲಿ ಶೇ.70ರಷ್ಟು ಅನುದಾನ ಪ್ರದೆಶಾಭಿವೃದ್ಧಿ ಅಭಿವೃದ್ಧಿಗಾಗಿ 4, 5, 14, 15, 16, 19 ಮತ್ತು ಭಾಗಶಃ 7ನೇವಾರ್ಡ್ ( ತುಮಕೂರು ನಗರದ ಹೃದಯ ಭಾಗ ) ಅಯ್ಕೆ ಮಾಡಿಕೊಳ್ಳಲಾಗಿದೆ. ಮತ್ತು ಉಳಿದ ಶೇ.30% ಪ್ಯಾನ್ ಸಿಟಿ ಅಭಿವೃದ್ಧಿ ಮೂಲಕ ಸಮಗ್ರ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿಸುವ ಗುರಿಯನ್ನು ಹೊಂದಲಾಗಿದೆ. ಈ ಯೋಜನೆಗಳ ಅನುಷ್ಠಾನದಲ್ಲಿ ತುಮಕೂರು ನಗರವು 2ನೇ ಹಂತದಲ್ಲಿ ಗುರುತಿಸಿರುವ ಕರ್ನಾಟಕದ ನಾಲ್ಕು ನಗರಗಳ ಪೈಕಿ ಮೊದಲನೇ ಸ್ಥಾನ ಹಾಗೂ ದೇಶದಲ್ಲಿ 22ನೇ ಸ್ಥಾನ ಪಡೆದುಕೊಂಡಿದೆ.
ಯೋಜನೆಗಳ ವೆಚ್ಚ
    ಪ್ರಸ್ತುತ ತುಮಕೂರು ಸ್ಮಾರ್ಟ್ ಸಿಟಿಯಿಂದ 86 ಯೋಜನೆಗಳಿಗೆ 792.72 ಕೋಟಿ ರೂಗಳಿಗೆ ಟೆಂಡರ್ ಪ್ರಕ್ರಿಯೆಯನ್ನು ಕೈಗೊಂಡಿದ್ದು, ರೂ.21.89 ಕೋಟಿಗಳ ಸಣ್ಣ ಕಾಮಗಾರಿಗಳು ಈಗಾಗಲೇ ಮುಕ್ತಾಯಗೊಂಡಿವೆ. 515.43 ಕೋಟಿ ರೂಗಳ 47 ಯೋಜನೆಗಳಿಗೆ ಕಾರ್ಯಾದೇಶ ನೀಡಲಾಗಿದ್ದು ಅನುಷ್ಠಾನ ಹಂತದಲ್ಲಿವೆ. ರೂ.255.40 ಕೋಟಿ ರೂಗಳ 17 ಯೋಜನೆಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದು, ಉಳಿದ 135.75 ಕೋಟಿ ರೂಗಳ ಯೋಜನೆಗಳು ವಿಸ್ತøತ ಯೋಜನಾ ವರದಿ ಹಂತದಲ್ಲಿವೆ. 
ಸ್ಮಾರ್ಟ್ ಸಿಟಿ ಲಿಮಿಟೆಡ್‍ನ  ವಿವಿಧ ಯೋಜನೆಗಳು ಅಂದಾಜು ವೆಚ್ಚ:
  1. ಶೈಕ್ಷಣಿಕ ಅಭಿವೃದ್ಧಿ 31.00 ಕೋಟಿ ರೂ.
  2. ನಗರದ ವರ್ತುಲ ರಸ್ತೆ ಅಭಿವೃದ್ಧಿ 114.20 ಕೋಟಿ ರೂ. 
  3. ಸ್ಮಾರ್ಟ್ ರೋಡ್ ಅಭಿವೃದ್ಧಿ 245.42 ಕೋಟಿ ರೂ.
  4. ಐಸಿಎಂಸಿಸಿ ಕಟ್ಟಡ 59.59 ಕೋಟಿ ರೂ.
  5. ಬಸ್ ನಿಲ್ದಾಣದ ಸಮಗ್ರ ಅಭಿವೃದ್ಧಿ 93.78 ಕೋಟಿ ರೂ.
  6. ಸ್ಮಾರ್ಟ್ ಲಾಂಜ್ 10.00 ಕೋಟಿ ರೂ.
  7. ಅಪಘಾತ ಚಿಕಿತ್ಸಾ ಕೇಂದ್ರ 56.00 ಕೋಟಿ ರೂ.
  8. ಅಮಾನಿಕೆರೆ ಅಭಿವೃದ್ಧಿ 30.41 ಕೋಟಿ ರೂ.
  9. 24*7 ಕುಡಿಯುವ ನೀರು ಸರಬರಾಜು 56.55 ಕೋಟಿ ರೂ.
  10. ಹಸಿರೀಕರಣ ಯೋಜನೆ 25.00 ಕೋಟಿ ರೂ. 
  11. ಕ್ರೀಡಾ ಸಂಕೀರ್ಣ ಅಭಿವೃದ್ಧಿ 49.97 ಕೋಟಿ ರೂ.
  12. ಮಾರಿಯಮ್ಮ ನಗರ ಬಡವರಿಗೆ ವಸತಿ ಸೌಲಭ್ಯ 12.33 ಕೋಟಿ ರೂ.
  13. ಮಲ್ಟಿ ಯುಟಿಲಿಟಿ ಮಾಲ್ 60.00 ಕೋಟಿ ರೂ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link