ತುಮಕೂರು
ವಿಶೇಷ ವರದಿ :ರಾಕೇಶ್.ವಿ
ಸ್ಮಾರ್ಟ್ ಸಿಟಿ ಅಡಿಯಲ್ಲಿ ಮಕ್ಕಳನ್ನು ಸ್ಮಾರ್ಟ್ ಮಾಡುವ ಉದ್ದೇಶದಿಂದ ಸ್ಮಾರ್ಟ್ ತರಗತಿಗಳನ್ನು ನಗರದ ಎಂಪ್ರೆಸ್ ಬಾಲಕಿಯರ ಪ್ರೌಢ ಶಾಲೆ ಹಾಗೂ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾರಂಭ ಮಾಡಲಾಗಿದೆ. ಜೊತೆಗೆ ಎಂಪ್ರೆಸ್ ಪ್ರೌಢ ಶಾಲೆ ಹಾಗೂ ಕಾಲೇಜನ್ನು ಅಭಿವೃದ್ದಿ ಮಾಡಲಾಗುತ್ತಿದೆ.
ಈ ಶಾಲೆ ಮತ್ತು ಕಾಲೇಜು ಸೇರಿದಂತೆ ನಗರದಲ್ಲಿ ಒಟ್ಟು 13 ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮರಳೂರು ದಿಣ್ಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಉಪ್ಪಾರಹಳ್ಳಿ ಸರ್ಕಾರಿ ಶಾಲೆ, ದೇವರಾಯಪಟ್ಟಣ, ಕ್ಯಾತ್ಸಂದ್ರ, ಶೆಟ್ಟಿಹಳ್ಳಿ, ದಕ್ಷಿಣ ಬಡಾವಣೆ, ಗುಡಿಪಾಳ್ಯ, ಹನುಮಂತಪುರ, ಮೆಳೆಕೋಟೆ, ಮರಳೂರು, ಅರಳೀಮರದ ಪಾಳ್ಯ, ಪಶ್ಚಿಮ ಬಡಾವಣೆ, ದಿಬ್ಬೂರು ಭಾಗದಲ್ಲಿನ ಸರ್ಕಾರಿ ಸ್ವಾಮ್ಯದ ಕಟ್ಟಡ ಹೊಂದಿರುವ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಂ ಅಳವಡಿಕೆ ಮಾಡಲಾಗಿದೆ.
ಇಲಿಫ್ಸ್ ಇಂಡಿಯಾ ಪ್ರೈ. ಲಿ ಕಂಪನಿಯು ಈ ಸ್ಮಾರ್ಟ್ ಕ್ಲಾಸ್ ರೂಂಗಳ ಟೆಂಡರ್ ಪಡೆದು ಕಾಮಗಾರಿ ಮಾಡಿದ್ದು, ಈಗಾಗಲೇ ಆಯ್ದ ಎಲ್ಲಾ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳು ಪ್ರಾರಂಭವಾಗಿವೆ. ಈ ಸಂಬಂಧ ಶಿಕ್ಷಕರಿಗೆ ಮೂರು ಹಂತದಲ್ಲಿ ತರಬೇತಿಯೂ ನೀಡಲಾಗಿದೆ. ಸ್ಮಾರ್ಟ್ ಕಂಪ್ಯೂಟರ್ ಬಳಕೆಯ ಬಗ್ಗೆ, ಅದರಲ್ಲಿ ಶೇಖರಿಸಿ ಇಡಲಾದ ಮಾಹಿತಿಯನ್ನು ಯಾವ ರೀತಿ ಪ್ರದರ್ಶಿಸಬಹುದು ಎಂಬುದರ ಬಗ್ಗೆ ತಿಳಿವಳಿಕೆ ನೀಡಲಾಗಿದೆ. ಇದರಿಂದ ಸುಲಭವಾಗಿ ಪಾಠ ಮಾಡುವ ಪರಿಯನ್ನು ಅರ್ಥೈಸಿಕೊಂಡಿದ್ದಾರೆ.
ಡಿಜಿಟಲ್ ಕ್ಲಾಸ್ ರೂಂ ಅನುಷ್ಠಾನ
ಡಿಜಿಟಲ್ ಕ್ಲಾಸ್ ರೂಂ ಅನುಷ್ಠಾನವು ಸಂಗ್ರಹಣೆ, ಪೂರೈಕೆ, ಅನುಸ್ಥಾಪನೆ, ಸಿದ್ಧಗೊಳಿಸುವುದಿಕೆ ಹಾಗೂ ಉಸ್ತುವಾರಿಯಿಂದ ಕೂಡಿರುತ್ತದೆ. ಇದರ ಮೂರು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಅಗತ್ಯ ತರಬೇತಿ ಹಾಗೂ ಸಹಯೋಗವನ್ನು ಹೊಂದಿರುತ್ತದೆ.
ಯೋಜನೆಯ ವೈಶಿಷ್ಟ್ಯ
ಹಾರ್ಡ್‍ವೇರ್, ನೆಟ್‍ವರ್ಕಿಂಗ್ ಹಾಗೂ ಇತರೆ ಸಾಮಗ್ರಿಗಳ ಸಂಗ್ರಹಣೆ ಮಾಡಿ ಅನುಷ್ಠಾನ ಮಾಡಲಾಗುತ್ತದೆ. ಇಲ್ಲಿ ಅಳವಡಿಸುವ ಕಂಪ್ಯೂಟರ್‍ಗಳಲ್ಲಿ ಸಾಫ್ಟ್‍ವೇರ್‍ಗಳನ್ನು ಅಳವಡಿಸಿ ಅದರ ಮೂಲಕ ಪಾಠ ಪ್ರವಚನ ಮಾಡುವಂತೆ ಮಾಡಲಾಗುವುದು. ಇದರಿಂದ ಕೌಶಲ್ಯಾಭಿವೃದ್ಧಿ ಆಗುತ್ತದೆ. ಅಲ್ಲದೆ ವಿಷಯ ಜ್ಞಾನ ಉನ್ನತೀಕರಣಗೊಳ್ಳುತ್ತದೆ.
ಅಳವಡಿಸಲಾದ ವಿವಿಧ ಪರಿಕರಗಳು
ಸ್ಮಾರ್ಟ್ ಕ್ಲಾಸ್ ರೂಂಗಳಲ್ಲಿ ಕಿಯಾನ್ ಎಂಬ ಸಾಧನವನ್ನು ಜೋಡಿಸಲಾಗಿದೆ. ಇದರೊಂದಿಗೆ ಸ್ಮಾರ್ಟ್ ಪೆನ್, ಕೀಬೋರ್ಡ್, ಮೌಸ್ ಅನ್ನು ನೀಡಲಾಗಿದೆ. ಇದಕ್ಕೆ ಯುಪಿಎಸ್ ಅಳವಡಿಕೆ ಮಾಡಲಾಗಿದೆ. ಇದರಿಂದ ವಿದ್ಯುತ್ ಸಮಸ್ಯೆಯಿದ್ದರೂ ತರಗತಿಗಳು ನಡೆಸಲು ಅನುಕೂಲವಾಗಲಿದೆ.
ಬಳಕೆಯಾಗುತ್ತಿರುವ ಕಂಪ್ಯೂಟರ್‍ಗಳು
ಎಂಪ್ರೆಸ್ ಕಾಲೇಜು ಹಾಗೂ ಪ್ರೌಢಶಾಲೆಯಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್ ರೂಂಗಳನ್ನು ಪ್ರಾರಂಭ ಮಾಡಲಾಗಿದ್ದು, ಈ ರೂಂಗಳಲ್ಲಿ ಅಳವಡಿಸಲಾದ ಕಂಪ್ಯೂಟರ್‍ಗಳು ಬಳಕೆ ಮಾಡಲಾಗುತ್ತಿದೆ. ಈ ಕಂಪ್ಯೂಟರ್‍ಗಳಲ್ಲಿ ಉಬಂಟೂ ಎಂಬ ತಂತ್ರಾಂಶವನ್ನು ಅಳವಡಿಕೆ ಮಾಡಲಾಗಿದ್ದು, ಈ ತಂತ್ರಾಂಶದ ಮೂಲಕ ಪಠ್ಯದ ವಿಷಯಗಳನ್ನು ನಕ್ಷೆಗಳ ಮೂಲಕ, ಚಿತ್ರಗಳ ಮೂಲಕ ಮತ್ತು ದೃಶ್ಯಗಳ ಮೂಲಕ ವಿವರಿಸಬಹುದಾಗಿದೆ.
ತರಗತಿಗಳ ವಿಭಾಗೀಕರಣ
ಕಾಲೇಜಿನಲ್ಲಿ ಐಸಿಟಿ ಲ್ಯಾಬ್ಸ್, ಲ್ಯಾಂಗ್ವೇಜ್‍ಲ್ಯಾಬ್ಸ್ ಮತ್ತು ಡಿಜಿಟಲ್ ಕ್ಲಾಸ್ ರೂಂಗಳು ಎಂಬು ವಿಭಾಗೀಕರಣ ಮಾಡಿದ್ದು, ಡಿಜಿಟಲ್ ಕ್ಲಾಸ್ ರೂಂಗಳಲ್ಲಿ ಶಿಕ್ಷಕರು ಪಾಠ ಪ್ರವಚನ ನಡೆಸಿದರೆ, ಐಸಿಟಿ ( ಇನ್‍ಫರ್ಮೇಶನ್ ಅಂಡ್ ಟೆಕ್ನಾಲಜಿ ಲ್ಯಾಬ್ಸ್) ಲ್ಯಾಬ್‍ಗಳಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬಹುದಾಗಿದೆ. ಅಲ್ಲದೆ ಲ್ಯಾಂಗ್ವೇಜ್ ಲ್ಯಾಬ್ಸ್‍ಗಳಲ್ಲಿ ಇಂಗ್ಲೀಷ್ ಕಲಿಕೆಗೆ ಅನುಕೂಲವಾಗುವ ರೀಡ್ ಟು ಮೀ ಎಂಬ ತಂತ್ರಾಂಶವನ್ನು ಅಳವಡಿಸಲಾಗಿದ್ದು, ಇದರಲ್ಲಿ ಆಂಗ್ಲ ಭಾಷೆಯನ್ನು ಅಭ್ಯಸಿಸಲು ಅನುಕೂಲವಾಗಿದೆ.
ಮೂರು ಹಂತದಲ್ಲಿ ತರಬೇತಿ
ಸ್ಮಾರ್ಟ್ ಕ್ಲಾಸ್‍ಗಳನ್ನು ಬಳಕೆ ಮಾಡುವ ಬಗ್ಗೆ ಮೂರು ಹಂತದಲ್ಲಿ ತರಬೇತಿ ನೀಡಲಾಗಿದೆ. ಹಾಗಾಗಿ ನಗರದ ಆಯ್ದ ಶಾಲಾ ಕಾಲೇಜುಗಳಲ್ಲಿ ಡಿಜಿಟಲ್ ಕ್ಲಾಸ್ ರೂಂಗಳನ್ನು ಬಳಕೆ ಮಾಡಲಾಗುತ್ತಿದೆ. ಒಟ್ಟು 13ಶಾಲಾ ಕಾಲೇಜುಗಳಲ್ಲಿ ಕ್ಲಾಸ್ ರೂಂಗಳು ಚಾಲನೆಯಲ್ಲಿದ್ದು, ಸ್ವಂತ ಕಟ್ಟಡ ಹಾಗೂ ಭದ್ರವಾಗಿರುವ ಕಟ್ಟಡಗಳಲ್ಲಿ ಮಾತ್ರ ಈ ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ.
ಕಾಲೇಜು ಅಭಿವೃದ್ಧಿಗೆ 11.84 ಕೋಟಿ ರೂ.
ತುಮಕೂರು ನಗರದ ಎಂಪ್ರೆಸ್ ಕಾಲೇಜಿನ ಪುನರುಜ್ಜೀವನಕ್ಕೆ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಎಂಪ್ರೆಸ್ ಬಾಲಕಿಯರು ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅವಶ್ಯಕವಿರುವ ಆಡಿಟೋರಿಯಂ, ಪ್ರಯೋಗಾಲಯ, ಲೈಬ್ರರಿ ಮುಂತಾದ ಮೂಲ ಸೌಕರ್ಯಗಳನ್ನು ಕಲ್ಪಿಸಲು 11.84 ಕೋಟಿಗಳ ವೆಚ್ಚದಲ್ಲಿ ಕಾಮಗಾರಿ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಚಿತ್ರದುರ್ಗ ಮೂಲದ ಪಿ.ಶ್ರೀನಿವಾಸ್ ಎಂಬುವವರು ನಡೆಸುತ್ತಿದ್ದು, 2020ರ ಆಗಸ್ಟ್ ತಿಂಗಳೊಳಗೆ ಪೂರ್ಣಗೊಳಿಸಬೇಕಿದೆ.
ಕಾಮಗಾರಿಯ ಉದ್ದೇಶ
ಶೈಕ್ಷಣಿಕ ಮೂಲಭೂತ ಸೌಲಭ್ಯಗಳ ಗುಣಮಟ್ಟವನ್ನು ವಿಶೇಷ ಮಾನದಂಡವುಳ್ಳ ಕಾರ್ಯಕ್ರಮಗಳ ಮೂಲಕ ಸುಧಾರಿಸುವುದು ಮತ್ತು ನಗರದಾದ್ಯಂತ ಮನರಂಜನ/ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸುವುದು. ನಗರ ಪರಿಸರದ ಸಂರಕ್ಷಣೆ ವರ್ದನೆ, ಆ ಪರಿಸರದ ಸ್ಪಷ್ಟ ಮತ್ತು ಅಸ್ಪಷ್ಟ ಸಾಂಸ್ಕೃತಿಕ ಪರಮಪರೆ ಪನರುಜಗಜೀವನಗೊಳಿಸುವ ಮೂಲಕ ಜನರ ಜೀವನ ಮಟ್ಟವನ್ನು ಸುಧಾರಿಸುವುದೇ ಪ್ರಮುಖ ಉದ್ದೇಶವಾಗಿದೆ.
ಮಾಡಲಾಗುವ ಕಾಮಗಾರಿ
ಹೆಚ್ಚುವರಿ ತರಗತಿ ಕೊಠಡಿಗಳು, ಗ್ರಂಥಾಲಯ, ಪ್ರಯೋಗಾಲಯ, ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಶೈಕ್ಷಣಿಕ ಉನ್ನತೀಕರಣ ಮಾಡುವುದು. ಸ್ಮಾರ್ಟ್ ಕ್ಲಾಸ್ ರೂಮ್, ಐಸಿಟಿ ಲ್ಯಾಬ್, ಭಾಷಾ ಪ್ರಯೋಗಾಲಯಗಳ ಮೂಲಕ ಆಧುನಿಕ ಶಿಕ್ಷಣದ ಸೌಕರ್ಯಗಳನ್ನು ಹೆಚ್ಚಿಸುವುದು. ಸೌಲಭ್ಯಯುತ ಮಲ್ಟಿ ಡೈಮೆನ್‍ಷನಲ್ ಆಡಿಟೋರಿಯಂ ನಿರ್ಮಾಣ. ಸಮರ್ಥನೀಯ ಶಕ್ತಿಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಪಾರಂಪರಿಕ ಕಟ್ಟಡದ ಮರುಸ್ಥಾಪನೆ ಮಾಡಲಾಗುವುದು