ಮೈಸೂರು
ಮುಡಾ ಬದಲಿ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಕಾಂಗ್ರೆಸ್ ನಾಯಕ ಎಂ. ಲಕ್ಷ್ಮಣ ಅವರ ವಿರುದ್ಧ ದೂರು ನೀಡಿ ಆರು ದಿನ ಕಳೆದರೂ ಇನ್ನೂ ಕ್ರಮ ಏಕೆ ಕೈಗೊಂಡಿಲ್ಲ ಅಂತ ಪ್ರಶ್ನಿಸಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮೈಸೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ದೂರು ನೀಡಿ ಆರು ದಿನವಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮಂಗಳವಾರ ಮೈಸೂರಿಗೆ ಬರುತ್ತಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿ ಆರ್ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪತ್ರದ ಮೂಲಕ ಮನವಿ ಮಾಡಿದ್ದಾರೆ.
“ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಂಡತಿ ಶ್ರೀಮತಿ ಪಾರ್ವತಿ ಮತ್ತು ಲಕ್ಷ್ಮಣ್ರವರ ವಿರುದ್ಧ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರರ್ಜಿ ನೀಡಿರುವುದು ನಿಮಗೆ ತಿಳಿದ ವಿಷಯ. ದೂರರ್ಜಿ ನೀಡಿ ಆರು ದಿನಗಳಾಗುತ್ತಾ ಬಂದಿದ್ದರೂ ಗಂಭೀರವಾಗಿ ಪರಿಗಣಿಸಿದಂತೆ ಕಂಡು ಬಂದಿರುವುದಿಲ್ಲ. ನಿನ್ನೆ ರಾತ್ರಿ ಪಾರ್ವತಿರವರು ಮೈಸೂರಿಗೆ ಬಂದಿದ್ದು, ಇಂದು ಬೆಳಗ್ಗೆ ಚಾಮುಂಡೇಶ್ವರಿ ಬೆಟ್ಟಕ್ಕೆ ತೆರಳಲಿದ್ದಾರೆ ಎಂಬುದು ತಿಳಿದುಬಂದಿದೆ. ಆದ್ದರಿಂದ ಆರೋಪಿತರಾದ ಪಾರ್ವತಿರವರನ್ನು ಈ ದಿನ ತಾವೇ ಖುದ್ದಾಗಿ ನನ್ನ ಆರೋಪಕ್ಕೆ ಪೂರಕವಾಗಿ ವಿಚಾರಣೆಗೆ ಒಳಪಡಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.”
“ಏಕೆಂದರೆ ಪಾರ್ವತಿರವರು ಮುಖ್ಯಮಂತ್ರಿಗಳ ಹೆಂಡತಿಯಾಗಿರುವುದರಿಂದ ಅವರನ್ನು ವಿಚಾರಣೆಗೆ ಒಳಪಡಿಸಲು ಪೊಲೀಸ್ ನಿರೀಕ್ಷಕರು ಮತ್ತು ಸಹಾಯಕ ಪೊಲೀಸ್ ಆಯುಕ್ತರು ಹಿಂಜರಿಯುವ ಸಾಧ್ಯತೆ ಇರುವುದರಿಂದ ತಾವೇ ವಿಚಾರಣೆ ನಡೆಸಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಮನವಿ ಮಾಡಿದ್ದಾರೆ.