ಸಂಘಸಂಸ್ಥೆಗಳನ್ನು ಮುನ್ನೆಡೆಸುವುದು ಇಂದಿನ ಅಗತ್ಯ : ಮಾದುಸ್ವಾಮಿ

ತುಮಕೂರು

    ಯಾವುದೇ ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಬಹುದು. ಆದರೆ ಬೆಳೆದ ಬಳಿಕ ಅದನ್ನು ಸ್ಥಿರವಾಗಿ ಮುನ್ನೆಡೆಸಿಕೊಂಡು ಹೋಗುವುದು ಇಂದಿನ ಅಗತ್ಯವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಅವರು ನಗರ ಹೊರವಲಯದ ಬೆಳಗುಂಬದ ರೆಡ್‌ಕ್ರಾಸ್ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಾಲೆ ಆವರಣದಲ್ಲಿ ವಿಶೇಷಚೇತನರಿಗಾಗಿ ಇನ್ಫೋಸಿಸ್ ನೆರವಿನೊಂದಿಗೆ ನಿರ್ಮಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿ, 30-35 ವರ್ಷದ ಹಿಂದೆ ತುಮಕೂರಿಗೆ ಕಾಲಿಟ್ಟ ರೆಡ್‌ಕ್ರಾಸ್ ಮೊದಲಿಗೆ ರಕ್ತದಾನಕ್ಕೆ ಹೆಸರಾಗಿತ್ತು.    ನಂತರ ತನ್ನ ಸೇವಾ ಕ್ಷೇತ್ರವನ್ನು ವಿಸ್ತರಿಸಿಕೊಂಡು ವಿಶೇಷಚೇತನರಿಗೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ತೆರೆದು ಅವರು ಸ್ವಾವಲಂಬಿ ಬದುಕುಕಟ್ಟಿಕೊಳ್ಳುವಂತೆ ಮಾಡುವ ಹಂತಕ್ಕೆ ಸಂಸ್ಥೆಯನ್ನು ಆಡಳಿತ ಮಂಡಳಿಯವರು ಬೆಳೆಸಿದ್ದಾರೆ. ಸೇವಾ ಮನೋಭಾವವುಳ್ಳ ಹೃದಯವಂತರು ಈ ಕ್ಷೇತ್ರಕ್ಕೆ ಪ್ರವೇಶಿದಾಗ ಮಾತ್ರ ಇದೆಲ್ಲ ಸಾಧ್ಯವಾಗುತ್ತದೆ, ಲೆಟರ್‌ಹೆಡ್, ಪದವಿ ಆಸೆಪಟ್ಟು ಬಂದರೆ ಸೇವಾ ಸಂಸ್ಥೆಗಳೆ ದಿವಾಳಿಯಾಗುತ್ತದೆ ಎಂದು ಎಚ್ಚರಿಸಿದರು.

   ಇನ್ಫೋಸಿಸ್ ಸಿಎಸ್‌ಆರ್ ನೆರವಿನೊಂದಿಗೆ ಸ್ಥಾಪನೆಯಾಗಿರುವ ಈ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈಗಿನಿಂದಲೇ ಚಿಂತಿಸಿ ಕಾರ್ಯಯೋಜನೆ ರೂಪಿಸಿ ಎಂದು ಸಲಹೆ ನೀಡಿದ ಸಚಿವರು, ಸಮಾಜದಲ್ಲಿ ಇದೆ ಜಾತಿ ಅಸಮಾನತೆ ಮೇಲು-ಕೀಳು ಅಂತರ ಜಾಸ್ತಿಯಿತ್ತು. ಆದರೆ ಬದಲಾದ ಕಾಲಘಟ್ಟದಲ್ಲಿ ಶ್ರೀಮಂತರು -ಬಡವರ ನಡುವಿನ ಅಂತರ ಜಾಸ್ತಿಯಾಗಿದ್ದು, ಇದನ್ನು ಹೋಗಲಾಡಿಸುವ ಅಗತ್ಯವಿದೆ.

   ಉಳ್ಳವರು ಇಲ್ಲದಿರುವ ನೆರವಾಗುವುದೇ ನಿಜವಾದ ಸೇವೆ ಎಂದು ನುಡಿದರು.ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮುಖ್ಯ ಅತಿಥಿಯಾಗಿ ಮಾತನಾಡಿ ರೆಡ್‌ಕ್ರಾಸ್ ಸಂಸ್ಥಾಪಕ ಹೆನ್ರಿ ಡ್ಯೂನಟ್ ಅವರು ದೊಡ್ಡ ಉದ್ಯಮಿಯಾಗಿ ಬೆಳೆದು ದುಡಿಮೆಯನ್ನು ದಾನ-ಧರ್ಮ ಮಾಡಿ ನಂತರ ಮನೆಯವರಿಂದ ಹೊರದೂಡಲ್ಪಟ್ಟರು. ಆದರೆ ಅವರು ಮಾಡಿದ ಸೇವೆ ಅವರಿಗೆ ವಿಶ್ವದ ಮೊದಲ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಭಾಜನವಾಗಿಸಿತು.

   ತುಮಕೂರಿನಲ್ಲಿ ನಾನು ಜಿಲ್ಲಾಧಿಕಾರಿಯಾಗಿದ್ದಾಗ ಬೆಳಗುಂಬದಲ್ಲಿ ಮಂಜೂರು ಮಾಡಿದ ನಾಲ್ಕುವರೆ ಎಕರೆ ಜಾಗದಲ್ಲಿ ಆಡಳಿತ ಮಂಡಳಿಯವರ ಪರಿಶ್ರಮ, ದಾನಿಗಳ ಸಹಕಾರ, ಗೇಲ್, ಇನ್ಫೋಸಿಸ್‌ನಂತಹ ಸಂಸ್ಥೆಯವರ ನೆರವಿನೊಂದಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅನೇಕ ರಚನಾತ್ಮಕ ಕಾರ್ಯಚಟುವಟಿಕೆಗಳು ನಡೆಯುತ್ತಾ ಬಂದಿರುವುದು ಶ್ಲಾಘನೀಯ ಎಂದರು.

   ಇನ್ಫೋಸಿಸ್ ಪ್ರತಿಷ್ಠಾನದ ಧರ್ಮದರ್ಶಿ ಸುನೀಲ್‌ಕುಮಾರ್ ಧರ್ಮದರ್ಶಿ ಕಟ್ಟಡ ಹಸ್ತಾಂತರ ಪತ್ರವನ್ನು ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷರಾದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾಂತನಾಡಿ, ರೆಡ್‌ಕ್ರಾಸ್ ಸಂಸ್ಥೆ ಉತ್ತಮ ಸೇವಾ ಸಂಸ್ಥೆಯಾಗಿದ್ದು, ತುಮಕೂರು ಶಾಖೆ ಕಾರ್ಯವೈಖರಿ ಮೆಚ್ಚಿ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಇನ್ಫೋಸಿಸ್ ಸಂಸ್ಥೆ ನೆರವಾಗಿದೆ ಎಂದರು.

   ರೆಡ್‌ಕ್ರಾಸ್ ರಾಷ್ಟ್ರೀಯ ಮಂಡಳಿ ಸದಸ್ಯರಾದ ಎಸ್.ನಾಗಣ್ಣ ಅವರು ಮಾತನಾಡಿ ಇನ್ಫೋಸಿಸ್ ನಿರ್ಮಿಸಿಕೊಟ್ಟ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ರೆಡ್‌ಕ್ರಾಸ್ ಸಂಸ್ಥೆ ಅತ್ಯಂತ ಜತನವಾಗಿ ವಿಶೇಷಚೇತನರಿಗೆ ಉಪಯೋಗವಾಗುವ ರೀತಿಯಲ್ಲಿ ನಡೆಸಲಾಗುವುದು. ತುಮಕೂರಿನ ರೆಡ್‌ಕ್ರಾಸ್ ಸಂಸ್ಥೆ ಈ ಎತ್ತರಕ್ಕೆ ಬೆಳೆಯುವಲ್ಲಿ ಮಲ್ಲಿಕಾರ್ಜುನಯ್ಯ, ಎಂ.ಬಸವಯ್ಯ ಅವರ ಆದಿಯಾಗಿ ಹಿಂದಿನ ಎಲ್ಲಾ ಆಡಳಿತ ಮಂಡಳಿಗಳು ಹಾಗೂ ಜಿಲ್ಲಾಧಿಕಾರಿಗಳಾದವರ ಸಹಕಾರವಿದೆ. ವಿಶೇಷಚೇತನರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸದಾ ಶ್ರಮಿಸಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap