ಕಾರವಾರ :
ತಾಯಿಯ ತಿಥಿ ಕಾರ್ಯವನ್ನು ಮುಗಿಸಿ ಪೂನಾಕ್ಕೆ ಹೊರಟ್ಟಿದ್ದ ಉದ್ಯಮಿಯೋರ್ವರನ್ನು ದುಷ್ಕರ್ಮಿಗಳು ಮನೆಯಲ್ಲಿಯೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣದಲ್ಲಿ ನಡೆದಿದೆ. ಉದ್ಯಮಿ ಪತ್ನಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಸದ್ಯ ಆರೋಪಿಗಳು ಎಸ್ಕೇಪ್ ಆಗಿದ್ದು ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಆಗಮಿಸಿದ ಚಿತ್ತಾಕುಲ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಸ್ಥಳಕ್ಕೆ ಉತ್ತರ ಕನ್ನಡ ಎಸ್‌ಪಿ ನಾರಾಯಣ ಅವರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಡಿವೈಎಸ್‌ಪಿ ಗಿರೀಶ್ ಅವರ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಆದರೆ ಯಾವ ಕಾರಣಕ್ಕೆ ಕೊಲೆ ನಡೆದಿದೆ ಅನ್ನೋದು ತಿಳಿದು ಬಂದಿಲ್ಲ.
ರಾಜು ನಾಯ್ಕ್ ಹಾಗೂ ವೈಶಾಲಿ ದಂಪತಿಗಳ ಮಗ ವಿನಾಯಕ ನಾಯ್ಕ್ ಅಮೇರಿಕಾದಲ್ಲಿ ಎಂಎಸ್ ಮಾಡುತ್ತಿದ್ದಾನೆ. ಹೀಗಾಗಿ ದಂಪತಿಗಳು ಮಾತ್ರವೇ ಊರಿಗೆ ಬಂದಿದ್ದರು. ರಾಜು ನಾಯ್ಕ್ ಅವರಿಗೆ ಊರಿನಲ್ಲಿ ಯಾವುದೇ ವ್ಯವಹಾರ ಕೂಡ ಇರಲಿಲ್ಲ. ವೈಯಕ್ತಿಕ ಕಾರಣಕ್ಕೆ ಕೊಲೆ ನಡೆದಿದ್ಯೋ ಇಲ್ಲಾ, ವ್ಯವಹಾರದ ಕಾರಣಕ್ಕೆ ಈ ಹತ್ಯೆಯಾಗಿದೆಯೋ ಅನ್ನೋದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿದು ಬರಬೇಕಾಗಿದೆ.
