ಬೆಂಗಳೂರು:
ಕನ್ನಡಿಗರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಬಾಲಿವುಡ್ ಗಾಯಕ ಸೋನು ನಿಗಮ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸೋನು ನಿಗಮ್ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾ. ಶಿವಶಂಕರ್ ಅಮರಣ್ಣನವರ್ ಅವರಿದ್ದ ರಜಾಕಾಲದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿ ಮುಂದಿನ ವಿಚಾರಣೆಯನ್ನು ಇದೇ 15ಕ್ಕೆ ಮುಂದೂಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿಗೆ ಸಂಬಂಧಿಸಿದಂತೆ ವಾದ ಮಂಡಿಸಲು ಮುಂದಾದರು. ಆಗ ಪೀಠವು ಕಚೇರಿ ಆಕ್ಷೇಪಣೆಗೆ ಸಂಬಂಧಿಸಿದಂತೆ ವಕೀಲೆಯ ವಾದವನ್ನು ದಾಖಲಿಸಿ, ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಿದೆ.
ಸೋನು ನಿಗಮ್ ಅರ್ಜಿಯಲ್ಲಿ ದೂರುದಾರ ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ ಎ ಧರ್ಮರಾಜ ಮತ್ತು ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಾಗಿದೆ. ಮೇ 5ರಂದು ಎಫ್‌ಐಆರ್ ಸಂಬಂಧ ತನಿಖೆಗೆ ಹಾಜರಾಗುವಂತೆ ಗಾಯಕ ಸೋನು ನಿಗಮ್‌ಗೆ ಅವಲಹಳ್ಳಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋನು ನಿಗಮ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಏಪ್ರಿಲ್ 25 ಮತ್ತು 26ರಂದು ಸೋನು ನಿಗಮ್ ಅವರು ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಮತ್ತು ಕನ್ನಡಿಗರ ಭಾವನೆ ಕೆರಳಿಸುವ ಹೇಳಿಕೆ ನೀಡಿದ್ದಾರೆ ಎಂದು ಮೇ 2ರಂದು ದೂರು ನೀಡಲಾಗಿತ್ತು. ಇದನ್ನು ಆಧರಿಸಿ ಪೊಲೀಸರು ಮೇ 3ರಂದು ಎಫ್‌ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 351 (2) (ಕ್ರಿಮಿನಲ್ ಬೆದರಿಕೆ), 353 (ಸಾರ್ವಜನಿಕವಾಗಿ ಕಿರಿಕಿರಿ ಉಂಟು ಮಾಡುವ ಹೇಳಿಕೆ), 352(1) (ಉದ್ದೇಶಪೂರ್ವಕವಾಗಿ ಅವಮಾನ) ಅಡಿ ಧರ್ಮರಾಜ ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆ.
