ತುಮಕೂರು :
ಕೋವಿಡ್ ಅಲೆ ಒಂದೊಂದು ವಲಯಕ್ಕೆ ಒಂದೊಂದು ರೀತಿ ಪರಿಣಾಮ ಬೀರಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾತ್ರ ವರವಾಗಿ ಪರಿಣಮಿಸಿದೆ. ಜು.19-22ರಂದು ಓಎಂಆರ್ ಮಾದರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದ್ದು, ಕರ್ನಾಟಕಫ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇತಿಹಾಸದಲ್ಲೇ ಇದೇ ಮೊದಲಬಾರಿಗೆ ಪರೀಕ್ಷೆಗೆ ಹಾಜರಾದರೆ ಸಾಕು ಎಲ್ಲರೂ ಪಾಸು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆ ಈ ಬಾರಿ ಕೋವಿಡ್‍ನಿಂದಾಗಿ ಸಾಂಕೇತಿಕವೆನಿಸಿದೆ.
ಜು.19ರಂದು ಗಣಿತ ವಿಜ್ಞಾನ, ಸಮಾಜವಿಜ್ಞಾನ ವಿಷಯವನ್ನೊಳಗೊಂಡ 120 ಅಂಕಗಳ ಪರೀಕ್ಷೆ ನಡೆದರೆ, ಜು.22ರಂದು ಭಾಷಾ ವಿಜಷಯಗಳಾದ ಕನ್ನಡ ಇಂಗ್ಲೀಷ್, ಹಿಂದಿ/ಸಂಸ್ಕøತ/ಉರ್ದು ಭಾಷೆಗಳ ಪರೀಕ್ಷೆಗಳು ನಡೆಯಲಿದೆ. ಈ ಪರೀಕ್ಷೆಗಾಗಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯಲ್ಲಿ 220 ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದು, 33,925 ಮಕ್ಕಳು ಪರೀಕ್ಷೆ ಬರೆಯಲು ನೋಂದಾಯಿಸಿದ್ದಾರೆ. ಜೂ.30 ರಂದು ಪ್ರವೇಶ ಪತ್ರಗಳು(ಆಲ್‍ಟಿಕೆಟ್) ಶಾಲೆಗಳಿಗೆ ಕಳುಹಿಸಲಿದ್ದು, ಕೊರೊನಾ ಸೋಂಕಿಗೆ ಒಳಗಾಗಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಇಚ್ಛಿಸಿದರೆ ಪ್ರತ್ಯೇಕ ಕೊಠಡಿ ಇಲ್ಲವೇ ಆಯಾ ತಾಲೂಕಿನ ಕೋವಿಡ್ ಕೇರ್ ಸೆಂಟರ್‍ನಲ್ಲೇ ವ್ಯವಸ್ಥೆ ಮಾಡಲಾಗುವುದು, ವಿದ್ಯಾರ್ಥಿಗಳಿಗೆ ಸರ್ಜಿಕಲ್ ಮಾಸ್ಕ್ ಒದಗಿಸಲಿದ್ದು, ಪರೀಕ್ಷಾ ಸಿಬ್ಬಂದಿಗೆ ಎನ್-95 ಮಾಸ್ಕ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ವ್ಯಾಕ್ಸಿನೇಷನ್ ಪಡೆಯದೇ ಪರೀಕ್ಷಾ ಕೇಂದ್ರಕ್ಕೆ ಸಿಬ್ಬಂದಿಗೆ ಪ್ರವೇಶವಿಲ್ಲ :
ಕೊಠಡಿ ಮೇಲ್ವಿಚಾರಕರು, ಕಸ್ಟೋಡಿಯರನ್, ಸೂಪರಿಟೆಂಟ್, ಡಿಗ್ರೂಪ್ ನೌಕರರು ಸೇರಿ ಪರೀಕ್ಷಾ ಕಾರ್ಯಕ್ಕೆ ನಿಯೋಜಿತವಾಗುವ ಎಲ್ಲಾ ಸಿಬ್ಬಂದಿ ಕೋವಿಡ್ ವ್ಯಾಕ್ಸಿನೇಷನ್ ಪಡೆಯುವುದು ಕಡ್ಡಾಯವಾಗಿದ್ದು, ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 3200 ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ 1250 ಜನರನ್ನು ಪರೀಕ್ಷೆಗಾಗಿ ನಿಯೋಜಿಸಲಾಗಿದೆ. ಇವರಲ್ಲಿ ಶೇ.80ರಷ್ಟು ಮಂದಿಗೆ ವ್ಯಾಕ್ಸಿನೇಷನ್ ಆಗಿದ್ದು, ಉಳಿಕೆಯವರಿಗೆ ಇನ್ನೆರೆಡು ಮೂರು ದಿನದಲ್ಲಿ ವ್ಯಾಕ್ಸಿನ್‍ಗೆ ಮುಂಚೂಣಿ ಕಾರ್ಯಕರ್ತರಿಗೆ ನೀಡುವ ಅನೆಕ್ಸರ್ 3 ಪ್ರಮಾಣ ಪತ್ರದೊಂದಿಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿರುವುದಾಗಿ ಡಿಡಿಪಿಐಗಳಾದ ಸಿ.ನಂಜಯ್ಯ, ಎಂ. ರೇವಣಸಿದ್ದಪ್ಪ ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ್ದಾರೆ.
ಓಎಂಆರ್ ಶೀಟ್ ಪರೀಕ್ಷೆಗೆ ತಯಾರಿ:
ಇದೇ ಮೊದಲ ಬಾರಿಗೆ ಪರಿಚಯಿಸಿರುವ ಓಎಂಆರ್ ಶೀಟ್‍ನಲ್ಲಿ ಉತ್ತರ ಗುರುತಿಸುವ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯವರು ಕಳೆದೊಂದು ತಿಂಗಳಿಂದ ಅಣಿಗೊಳಿಸುತ್ತಿದ್ದು, ಅಕ್ಷರ ಫೌಂಡೇಶನ್, ಕಲರ್ಸ್ ಸಂಸ್ಥೆ ಹೀಗೆ ನಾಲ್ಕು ಎನ್‍ಜಿಒಗಳು ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆನ್‍ಲೈನ್ ಕಲಿಕೆ, ಪರೀಕ್ಷಾ ತಯಾರಿಗೆ ಸಾಥ್ ನೀಡಿವೆ.
ಒಟ್ಟಾರೆ ಎಸ್ಸೆಸೆಲ್ಸಿ ಪರೀಕ್ಷೆ ಈ ಬಾರಿ ನೆಪಮಾತ್ರವೆಂಬಂತಾಗಿದ್ದು, ಪರೀಕ್ಷೆ ಹಾಜರಾದರೆ ಸಾಕು ನಾವು ಪಾಸ್ ಎಂಬ ಮನೋಭಾವವೂ ವಿದ್ಯಾರ್ಥಿಗಳಲ್ಲಿ ಮೂಡಲು ಕಾರಣವಾಗಿದೆ. ಕಷ್ಟಪಟ್ಟು ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಬೇಸರ ತರಿಸಿದರೆ, ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅನುತೀರ್ಣರಾಗುತ್ತಿದ್ದ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಅಟೆಂಡ್ ಆದರೆ ಉತ್ತೀರ್ಣರಾಗುವ ಭಾಗ್ಯ ದೊರೆತಿದೆ.
ಎಸ್ಸೆಸೆಲ್ಸಿ ಪರೀಕ್ಷೆ ಜಿಲ್ಲೆಯ ಅಂಕಿ-ಅಂಶ
ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆ
ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು: 21,693
ಪರೀಕ್ಷಾ ಕೇಂದ್ರಗಳ ಸಂಖ್ಯೆ: 139
ಪರೀಕ್ಷಾ ಸಿಬ್ಬಂದಿಗಳ ಸಂಖ್ಯೆ: 3200
ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆ
ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು: 12,232
ಪರೀಕ್ಷಾ ಕೇಂದ್ರಗಳ ಸಂಖ್ಯೆ: 81
ಪರೀಕ್ಷಾ ಸಿಬ್ಬಂದಿಗಳ ಸಂಖ್ಯೆ: 1250
ಪರೀಕ್ಷೆಯಾದ ಎರಡು ವಾರದೊಳಗೆ ಫಲಿತಾಂಶ !
ಜುಲೈ 19 ಹಾಗೂ 22ರಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸುವ ಸಂಬಂಧ ಎಲ್ಲಾ ಜಿಲ್ಲೆಗಳ ಡಿಸಿ, ಎಸ್ಪಿ, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸೋಮವಾರ ಪೂರ್ವಸಿದ್ಧತಾ ವಿಡಿಯೋ ಸಂವಾದ ನಡೆಸಿದ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್, ಕೋವಿಡ್ ಅಗತ್ಯ ಮುನ್ನೆಚ್ಚರಿಕೆಯ ನಡುವೆಯೇ ಎಸ್ಸೆಸೆಲ್ಸಿ ಪರೀಕ್ಷೆ ನಡೆಸಲಾಗುವುದು. ಮೌಲ್ಯಮಾಪನ ಸಂಪೂರ್ಣ ಗಣಕೀಕೃವಾಗಿರುವದರಿಂದ ಪರೀಕ್ಷೆ ನಡೆಸಿ ಎರಡು ವಾರದೊಳಗೆ ಫಲಿತಾಂಶ ಪ್ರಕಟಿಸಲಾಗುವುದು. ಜುಲೈ 2ನೇ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವೂ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.
ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಯನ್ನು ಸರಾಗವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದು, ಶಿಕ್ಷಣ ಸಚಿವರು ವಿಡಿಯೋ ಸಂವಾದದಲ್ಲಿ ನೀಡಿದ ಸೂಚನೆ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಪರೀಕ್ಷಾ ಕಾರ್ಯಕ್ಕೆ ಬಳಕೆಯಾಗುತ್ತಿರುವ ಜಿಲ್ಲೆಯ 4450 ಸಿಬ್ಬಂದಿಗೂ ವ್ಯಾಕ್ಸಿನ್ ಹಾಕಲು ಕ್ರಮವಹಿಸಲಾಗುವುದು.
-ಸಿ.ನಂಜಯ್ಯ ಹಾಗೂ ಎಂ.ರೇವಣಸಿದ್ದಪ್ಪ ಡಿಡಿಪಿಐಗಳು, ತುಮಕೂರು ದಕ್ಷಿಣ ಹಾಗೂ ಮಧುಗಿರಿ ಉತ್ತರ.
ಎಸ್.ಹರೀಶ್ ಆಚಾರ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ