ಎಸ್‌ಎಸ್‌ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಪ್ರಕಟ…!

ಬೆಂಗಳೂರು

     ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಎಸ್‌ಎಸ್‌ಎಲ್ ಸಿ ಮುಖ್ಯ ಪರೀಕ್ಷೆ ನಾಳೆಯಿಂದ (ಮಾರ್ಚ್ 31) ಆರಂಭವಾಗಲಿದ್ದು, ವಿಧಾನಸಭೆ ಚುನಾವಣೆ ಪ್ರಕ್ರಿಯೆಗಳ ನಡುವೆಯೂ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

    ನಕಲು ತಡೆಗೆ ಬಿಗಿ ಕ್ರಮ ಕೈಗೊಳ್ಳಲಾಗಿದ್ದು ಪರೀಕ್ಷಾ ಕೇಂದ್ರದ ಬಳಿಯಿರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರೀಕ್ಷೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

    ಪರೀಕ್ಷೆಗೆ 5833 ಸರ್ಕಾರಿ ಶಾಲೆ, 3,605 ಅನುದಾನಿತ 6060 ಅನುದಾನ ರಹಿತ ಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 3305 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಸರ್ಕಾರಿ ಶಾಲೆಗಳ 3.60 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅನುದಾನಿತ ಶಾಲೆಗಳ 2.20 ಲಕ್ಷ ಹಾಗೂ ಅನುದಾನ ರಹಿತ ಶಾಲೆಗಳ 2.61 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ 

     ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ.ನಾಳೆ ಪ್ರಥಮ ಭಾಷೆ ಕನ್ನಡ, ಹಿಂದಿ, ತೆಲುಗು, ಮರಾಠಿ, ಉರ್ದು, ಸಂಸ್ಕೃತ, ಇಂಗ್ಲಿಷ್ ವಿಷಯದ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45 ರವರೆಗೆ ಪರೀಕ್ಷೆ ನಡೆಯಲಿದೆ.ಈ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐಯೊಬ್ಬರು, ಪರೀಕ್ಷಾ ವಾತಾವರಣಕ್ಕೆ ಪೂರಕವಾದ ಅಗತ್ಯ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.

    ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾ, ತಾಲ್ಲೂಕು ಖಜಾನೆಯಿಂದ ಕೇಂದ್ರಗಳಿಗೆ ತಲುಪಿಸಲು ವಿತರಣಾ ಮಾರ್ಗಗಳನ್ನು ರಚಿಸಲಾಗಿದೆ. ನಿಯಮಾವಳಿ ರೀತಿ ವೇಳಾಪಟ್ಟಿಯಂತೆ ಸಕಾಲಕ್ಕೆ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಪರೀಕ್ಷೆಯು ಏ.15 ರಂದು ಮುಕ್ತಾಯಗೊಳ್ಳಲಿದೆ. ಈ ಮಧ್ಯ ರಜಾ ಅವಧಿ ಇದೆ. ಆ ಸಮಯದಲ್ಲಿ ಅಥವಾ ಪರೀಕ್ಷಾ ಪೂರ್ವದ ಒಂದೆರಡು ದಿನಗಳಲ್ಲಿ ವಿದ್ಯಾರ್ಥಿಯು ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಏನಾದರೂ ಕಲಿಕಾ ಗೊಂದಲ ಇದ್ದರೆ ಕೇಳುವ ಸಾಧ್ಯತೆ ಇರುತ್ತದೆ.

    ತಮ್ಮ ಶಾಲಾ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿ ಶಿಕ್ಷಕರು ಇರಬೇಕಾಗುತ್ತದೆ. ವಿದ್ಯಾರ್ಥಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಎಚ್ಚರಿಕೆವಹಿಸುವಂತೆ ಮುಖ್ಯಶಿಕ್ಷಕರು ನಿಗಾವಹಿಸಬೇಕು. ವಿಶೇಷವಾಗಿ ಸಾಧಾರಣ ಕಲಿಕೆಯುಳ್ಳ ಮಕ್ಕಳ ಮೇಲೆ ವಿಶೇಷ ಕಾಳಜಿ ವಹಿಸಬೇಕು ಎಂದು ವಿವರಿಸಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆ ಕೆಲಸಕ್ಕೆ ನಿಯೋಜನೆಗೊಂಡ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವಿಧಾನಸಭೆ ಚುನಾವಣೆ ಕರ್ತವ್ಯಕ್ಕೂ ಬಳಸಿಕೊಳ್ಳಲಾಗುತ್ತಿದೆ. ಪರೀಕ್ಷಾ ದಿನಗಳಂದು ನಮ್ಮ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಚುನಾವಣೆ ಕೆಲಸದಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಪರೀಕ್ಷೆಗೆ ಏನೂ ತೊಂದರೆಯಾಗದು ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ನುಡಿದರು.

• ಪರೀಕ್ಷಾ ಕೇಂದ್ರಗಳಿಗೆ ಮೊಬೈಲ್, ವಾಚ್ ಸೇರಿದಂತೆ ಎಲೆಕ್ಟಾçನಿಕ್ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ
*ವಿದ್ಯಾರ್ಥಿಗಳು ಸಮವಸ್ತçಧರಿಸಿ ಪರೀಕ್ಷಾ ಕೊಠಡಿಗೆ ಹಾಜರಾಗಬೇಕಿದ್ದು, ಹಿಜಾಬ್ ಧರಿ ಬಂದರೆ ಪರೀಕ್ಷೆಗೆ ಅವಕಾಶ ಇರುವುದಿಲ್ಲ
• ಕನಿಷ್ಟ ಒಂದು ಗಂಟೆಗೂ ಮೊದಲೇ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಪತ್ರದ ಜತೆಗೆ ತೆರಳಿ ಪರೀಕ್ಷಾ ಕೊಠಡಿಯನ್ನು ಹುಡಿಕಿಕೊಳ್ಳಬೇಕಿದೆ

• ಪರೀಕ್ಷೆ ಸಂಬAಧ ಯಾವುದೇ ಅನುಮಾನಗಳಿದ್ದಲ್ಲಿ ಹತ್ತನೇ ತರಗತಿ ಸಹಾಯವಾಣಿ ಸಂಖ್ಯೆ 080- 23310075 ಅನ್ನು ಸಂಪರ್ಕಿಸಬಹುದು.

ಉಚಿತ ಪಯಾಣ..!

ಈಗಾಗಲೇ ಕೆಎಸ್ ಆರ್ ಟಿ ಸಿ, ಬಿಎಂಟಿಸಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದಿನಗಳಂದು ತನ್ನ ಸಾರಿಗೆ ಬಸ್ ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಿತ್ತು. ಈಗ ಮುಂದುವರೆದು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೂ ಪರೀಕ್ಷೆಯಂದು ಕೆಎಸ್‌ಆರ್ ಟಿ ಸಿ, ಬಿಎಂಟಿಸಿ ಬಸ್ ನಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ನೀಡಿದೆ.

ಎಸ್‌ಎಸ್‌ಎಲ್ ಸಿ ಮುಖ್ಯ ಪರೀಕ್ಷೆಯ ವೇಳಾಪಟ್ಟಿ

ಮಾರ್ಚ್ 31- ಪ್ರಥಮ ಭಾಷೆ,

ಏಪ್ರಿಲ್ 3- ಗಣಿತ,

ಏಪ್ರಿಲ್ 6- ದ್ವಿತೀಯ ಭಾಷೆ

ಏಪ್ರಿಲ್ 10- ವಿಜ್ಞಾನ,

ಏಪ್ರಿಲ್ 12- ತೃತೀಯ ಭಾಷೆ

ಏಪ್ರಿಲ್ 15- ಸಮಾಜ ವಿಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ