ಬೆಂಗಳೂರು :
ರಾಜ್ಯದಲ್ಲಿ ಪ್ರತಿ ಮನೆಗೂ ತೆರಳಿ ಆರೋಗ್ಯ ಸ್ಥಿತಿಗತಿಯ ಸಮೀಕ್ಷೆ ನಡೆಸುವ ಮೂಲಕ ‘ಹೆಲ್ತ್ ರಿಜಿಸ್ಟರ್’ ನಿರ್ವಹಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮೀಕ್ಷೆಯಿಂದ ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಸಾಕಷ್ಟು ಅನುಕೂಲವಾಗಲಿದೆ. ವಿಶ್ವದ ಕೆಲವು ದೇಶಗಳಲ್ಲಿ ಈ ರೀತಿಯ ಸಮೀಕ್ಷೆ ನಡೆಯುತ್ತಿದ್ದು, ಭಾರತದಲ್ಲಿ ಯಾವ ರಾಜ್ಯದಲ್ಲೂ ಈ ರೀತಿಯ ಸಮೀಕ್ಷೆ ನಡೆದಿಲ್ಲ. ಎಲ್ಲರ ಆರೋಗ್ಯದ ಮಾಹಿತಿ ಪಡೆದು ನೋಂದಣಿ ಮಾಡಲಾಗುವುದು ಎಂದರು.
ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಸಮೀಕ್ಷೆ ಪ್ರಾರಂಭಿಸ ಲಾಗುತ್ತಿದ್ದು, ಬಳಿಕ ರಾಜ್ಯದ ಆರೂವರೆ ಕೋಟಿ ಜನರ ಆರೋಗ್ಯ ರಿಜಿಸ್ಟರ್ ನಿರ್ವಹಣೆ ಮಾಡಲಾಗುವುದು.ಇದರಿಂದ ಆರೋಗ್ಯ ಸೇವೆಯಲ್ಲಿ ಸುಧಾರಣೆ ಸಾಧ್ಯವಾಗಲಿದೆ. ಬಜೆಟ್ ನಲ್ಲಿ ಅನುದಾನ ನಿಗದಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
ಆಶಾ ಕಾರ್ಯಕರ್ತರು, ಖಾಸಗಿ ಆಸ್ಪತ್ರೆಗಳ ಸಹಕಾರದಲ್ಲಿ ಮಾಹಿತಿ ಕ್ರೋಢೀಕರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಸಮೀಕ್ಷೆಗೆ ಪ್ರಶ್ನಾವಳಿಗಳನ್ನು ಎರಡು ಮೂರು ದಿನಗಳಲ್ಲಿ ಸಿದ್ದಪಡಿಸಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ