ಬೆಂಗಳೂರು
ಸುಧಾರಿತ ಬೇಸಾಯ ಪದ್ಧತಿ, ಖುಷ್ಕಿ ಬೇಸಾಯಕ್ಕೆ ಸೂಕ್ತ ಬೆಳೆ ಪದ್ಧತಿ, ವಿವಿಧ ತಳಿಗಳ ಪ್ರಾತ್ಯಕ್ಷತೆ ತೋಟಗಾರಿಕೆ ಬೆಳೆಗಳು ಇನ್ನಿತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಸಂಪೂರ್ಣ ಚಿತ್ರಣ ನೀಡುವ ಹಲವು ವಿಶೇಷತೆಗಳಿಂದ ಕೂಡಿದ ಕೃಷಿ ಮೇಳವು ಯಲಹಂಕದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಇದೇ ಗುರುವಾರದಿಂದ ಭಾನುವಾರದವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಸಮಗ್ರ ಬೇಸಾಯ ಪದ್ಧತಿ ಪ್ರಾತ್ಯಕ್ಷಿಕೆ, ಸಿರಿಧಾನ್ಯಗಳ ಮಹತ್ವ, ಔಷಧೀಯ ಮತ್ತು ಸುಗಂಧಯುತ ಸಸ್ಯಗಳು, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿಗಳು, ಸಮಗ್ರ ಪೋಷಕಾಂಶಗಳು, ಮಣ್ಣು ಪರೀಕ್ಷೆಗೆ ಅನುಗುಣವಾಗಿ ಬೆಳೆ ಸ್ಪಂದನ ಪ್ರಾತ್ಯಕ್ಷಿಕೆ, ಹನಿ ಮತ್ತು ತುಂತುರು ನೀರಾವರಿ ಪದ್ಧತಿ, ಮಳೆ ಹಾಗೂ ನೀರಿನ ಕೊಯ್ಲು, ಕೃಷಿ ಹಾಗೂ ಯಂತ್ರೋಪಕರಣ ಪ್ರದರ್ಶನ ನಡೆಯಲಿರುವ ಮೇಳದಲ್ಲಿ 700ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ವ್ಯವಸ್ಥೆಗೊಳಿಸಲಾಗಿದೆ ಎಂದು ಕೃಷಿ ವಿವಿ ಕುಲಪತಿ ಡಾ.ಹೆಚ್. ರಾಜೇಂದ್ರ ಪ್ರಸಾದ್ ತಿಳಿಸಿದರು.
ಬೆಂಗಳೂರು ಕೃಷಿ ವಿವಿ, ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ರೇಷ್ಮೆ, ಅರಣ್ಯ, ಪಶುಸಂಗೋಪನೆ, ಮೀನುಗಾರಿಕೆ, ಕೃಷಿ ಮಾರುಕಟ್ಟೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಲ ಮಹಾಮಂಡಲ ಸಹಯೋಗದೊಂದಿಗೆ ನಾಲ್ಕು ದಿನಗಳ ಕೃಷಿ ಮೇಳದಲ್ಲಿ ಕೃಷಿ ವಿವಿಯಿಂದ ರಾಗಿ, ಕೆ.ಎಂ.ಆರ್-630 ತಳಿ, ಸೂರ್ಯಕಾಂತಿ ಕೆಬಿಎಚ್‍ಎಸ್ -78 ತಳಿ, ಸೋಯಾ ಅವರೆ ಕೆಬಿಎಫ್- 23 ತಳಿ, ಅಕ್ಕಿ ಅವರೆ ಕೆಬಿಆರ್-1 ಸೇರಿ ನೂತನ ತಳಿಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಕೃಷಿ ಮೇಳದ 700ಕ್ಕೂ ಹೆಚ್ಚು ಮಳಿಗೆಗಳಲ್ಲಿ ಕೃಷಿ ಇಂಜಿನಿಯರಿಂಗ್, ಪಶುಸಂಗೋಪನೆ, ಪ್ರಮುಖ ಆಕರ್ಷಣೆಯಾಗಿರಲಿದೆ ರೈತರಿಗೆ ಸೂಕ್ತ ಮಾಹಿತಿಯೊಂದಿಗೆ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉಳಿದಂತೆ ಬಿಡುಗಡೆಗೆ ಸಿದ್ದವಾಗಿರುವ ನೂತನ ತಳಿಗಳ ಪ್ರಾತ್ಯಕ್ಷಿಕೆ, ಕೃಷಿಯಲ್ಲಿ ನೂತನ ಆವಿಷ್ಕಾರಗಳ ಪ್ರದರ್ಶನ, ನೂತನ ಕೃಷಿ ಉದ್ದಿಮೆದಾರರೊಂದಿಗೆ ಸಂವಾದ, ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಕುರಿತಂತೆ ಚರ್ಚೆ ಮತ್ತು ಪ್ರಾತ್ಯಕ್ಷಿಕೆ ಹಾಗೂ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಉಪಯುಕ್ತ ಕೃಷಿ ಉಪಕರಣಗಳ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಮೇಳದ ಮಾಹಿತಿ ಒದಗಿಸಲು ಕೃಷಿ ಮೇಳ 2018 ಎನ್ನುವ ಆಪ್ ಬಿಡುಗಡೆ ಮಾಡಲಾಗಿದೆ. ಆಪ್ ಮೂಲಕ ಕೃಷಿ ಆವರಣದಲ್ಲಿ ಕೃಷಿ ಮೇಳದಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಉಳಿದಂತೆ ಈ ಬಾರಿ ವಿಶೇಷವಾಗಿ ಡ್ರೋನ್ ಬಳಸುವ ಮೂಲಕ ಕೀಟನಾಶಕಗಳ ಸಿಂಪಡಿಸಲು ಪ್ರಾತ್ಯಕ್ಷತೆ ಆಯೋಜಿಸಲಾಗಿದೆ ಎಂದ ಅವರು, ಜಿಕೆವಿಕೆ ದ್ವಾರದಿಂದ ಉಚಿತ ಸಾರಿಗೆ ವ್ಯವಸ್ಥೆ, ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ, ಪ್ರತ್ಸೇಕ ವಾಹನ ನಿಲುಗಡೆ ವ್ಯವಸ್ಥೆ, ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.
ಇದೇ ಪ್ರಥಮ ಬಾರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೆಸರಿನಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಸಾಧಕ ಪುರುಷ ಹಾಗೂ ಮಹಿಳಾ ರೈತರಿಗೆ ನೀಡಿ, ಗೌರವಿಸಲಾಗುವುದು. ಈ ಪ್ರಶಸ್ತಿಗಾಗಿ ಪುರುಷರ ವಿಭಾಗದಿಂದ ರಾಮನಗರ ಜಿಲ್ಲೆಯ ಎನ್.ಆರ್. ಸುರೇಂದ್ರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಎಂ.ಎಸ್. ಶಿಲ್ಪ ಅವರನ್ನು ಆಯ್ಕೆಮಾಡಲಾಗಿದೆ.
ಉಳಿದಂತೆ ಸಿದ್ದೇಗೌಡ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ, ಬಾಗಲಕೋಟೆ ಜಿಲ್ಲೆಯ ದುಂಡಪ್ಪ ವೆಂಕಪ್ಪ ಹಳ್ಳಿ, ಡಾ.ಎಂ.ಎಚ್ ಮರಿಗೌಡ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರಸಾದ್ ರಾಮ ಹೆಗಡೆ, ಡಾ.ಆರ್. ದ್ವಾರಕನಾಥ್ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಡಾ.ಕೆ.ಆರ್. ಶ್ರೀನಿವಾಸ್ ಮತ್ತು ಡಾ. ದ್ವಾರಕನಾಥ್ ಅತ್ಯುತ್ತಮ ರೈತ ಪ್ರಶಸ್ತಿಗೆ ರಾಮನಗರ ಜಿಲ್ಲೆಯ ಜಿ. ರಮೇಶ್, ಕ್ಯಾನ್‍ಬ್ಯಾಂಕ್ ಅತ್ಯುತ್ತಮ ರೈತ ಪ್ರಶಸ್ತಿಗೆ ಕೋಲಾರ ಜಿಲ್ಲೆಯ ಎಂ.ಎನ್. ರವಿಶಂಕರ್ ಹಾಗೂ ಮಹಿಳಾ ವಿಭಾಗದಲ್ಲಿ ಹಾಸನ ಜಿಲ್ಲೆಯ ರೈತ ಮಹಿಳೆ ಕೆ. ಹೇಮಾ ಅನಂತ್ ಅವರನ್ನು ಆಯ್ಕೆಮಾಡಲಾಗಿದೆ. ಉಳಿದಂತೆ 35 ವರ್ಷದೊಳಗಿನ ಯುವ 60 ಪುರಷ ಹಾಗೂ ಮಹಿಳಾ ಯುವ ರೈತರಿಗೆ ತಾಲ್ಲೂಕು ಮಟ್ಟದ ಅತ್ಯುತ್ತಮ ಯುವ ರೈತ ಪ್ರಶಸ್ತಿ ಹಾಗೂ ಯುವ ಮಹಿಳಾ ರೈತ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ವಿಸ್ತರಣಾಧಿಕಾರಿ ಡಾ.ಎಂ.ಎಸ್. ನಟರಾಜ್, ಸಂಶೋಧಕ ನಿರ್ದೇಶಕ ಡಾ.ವೈ.ಜಿ. ಷಡಕ್ಷರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
