ಸೀಟ್ ಬ್ಲಾಕಿಂಗ್‍ನಂತೆಯೇ ಆಸ್ಪತ್ರೆಗಳಲ್ಲಿ ಬೆಡ್ ಬ್ಲಾಕಿಂಗ್ ದಂಧೆ!!

ಬೆಂಗಳೂರು : 

      ಕೊರೊನಾ ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಾ ಜನತೆ ಸಂಕಷ್ಟದಲ್ಲಿರುವಾಗ ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿರುವುದು ಈ ವ್ಯವಸ್ಥೆಯ ಕ್ರೂರತೆಯನ್ನು ಅಣಕಿಸುತ್ತಿದೆ. 

      ಮೆಡಿಕಲ್ ಸೀಟು ಹಗರಣದಲ್ಲಿ ಸೀಟ್ ಬ್ಲಾಕಿಂಗ್ ದಂಧೆಯನ್ನು ಕೇಳಿದ್ದೇವೆ. ಈಗ ಕೊರೊನಾ ಸೋಂಕಿತರನ್ನು ಮುಂದಿಟ್ಟುಕೊಂಡು ಸೀಟ್ ಬ್ಲಾಕಿಂಗ್ ದಂಧೆ ನಡೆಸುತ್ತಿರುವುದು ಇತ್ತೀಚೆಗಷ್ಟೆ ಬಯಲಿಗೆ ಬಂದಿದೆ. ಆಡಳಿತಾರೂಢ ಪಕ್ಷದ ಕೆಲವು ನಾಯಕರೆ ಈ ಕರಾಳ ದಂಧೆಯ ಮುಖವನ್ನು ಅನಾವರಣಗೊಳಿಸಿದ್ದು, ಸರ್ಕಾರದ ವೈಫಲ್ಯಕ್ಕೆ ಇದು ಮತ್ತೊಂದು ಉದಾಹರಣೆಯಾಗಿ ಪರಿಣಮಿಸಿದೆ.

ಏನಿದು ಬೆಡ್ ಬ್ಲಾಕಿಂಗ್..? 

      ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ಚಿಕಿತ್ಸೆಗೆ ಬಳಸಲು ಆದೇಶಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಅನುಷ್ಠಾನವಾಗುತ್ತಿದೆ ಎಂಬುದು ನಿಗೂಢವಾಗಿಯೇ ಉಳಿದಿದೆ. ಈ ನಡುವೆ ಕೊರೊನಾ ಪೀಡಿತರನ್ನು ಮುಂದಿಟ್ಟುಕೊಂಡು ಹಣ ಮಾಡುವ ದಂಧೆಗಳು ಅವ್ಯಾಹತವಾಗಿ ನಡೆದಿರುವ ಬಗ್ಗೆ ಭಯಾನಕ ಸತ್ಯಗಳು ಹೊರಬರತೊಡಗಿವೆ.

       ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂಬುದನ್ನರಿತು ಬಹಳಷ್ಟು ಜನ ಮನೆಯಲ್ಲಿಯೇ ಐಸೋಲೇಷನ್‍ಗೆ ಒಳಗಾಗುತ್ತಿದ್ದಾರೆ. ಜ್ವರ, ಕೆಮ್ಮು ಅಥವಾ ನೆಗಡಿ ಬಂದಾಗ ಆಸ್ಪತ್ರೆಗಳಿಗೆ ತಪಾಸಣೆಗಾಗಿ ಹೋಗುತ್ತಾರೆ. ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದ ನಂತರ ಮುಂದಿನ ಪ್ರಕ್ರಿಯೆಗಳು ಜರುಗುತ್ತವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾರ್ ರೂಂಗಳಿಗೆ ಈ ಮಾಹಿತಿ ರವಾನೆಯಾಗುತ್ತದೆ. ಒಂದು ಕುಟುಂಬದಲ್ಲಿ ಯಾರಿಗಾದರೂ ಕೋವಿಡ್ ಪಾಸಿಟಿವ್ ಇದೆ ಎಂದು ಕಂಡುಬಂದರೆ, ಆ ಕುಟುಂಬದ ಒಬ್ಬರು ಆಸ್ಪತ್ರೆಗೆ ದಾಖಲಾಗಿ ಮತ್ತೊಬ್ಬರು ಪಾಸಿಟಿವ್ ಬಂದು ಐಸೋಲೇಷನ್‍ಗೆ ಒಳಗಾಗಿದ್ದರೆ ಅಂತಹ ಐಸೋಲೇಷನ್‍ನಲ್ಲಿ ಇರುವವರ ಹೆಸರನ್ನೇ ಬಳಸಿಕೊಂಡು ದಂಧೆ ಮಾಡುತ್ತಿರುವ ಗಂಭೀರ ಪ್ರಕರಣಗಳು ಬೆಚ್ಚಿಬೀಳಿಸಿವೆ.

      ಯಾರದೋ ಹೆಸರನ್ನು ಬಳಸಿಕೊಂಡು ಆಸ್ಪತ್ರೆಗಳಿಗೆ ಕರೆ ಮಾಡಿ ಹಾಸಿಗೆಯನ್ನು ಅವರ ಹೆಸರಿನಲ್ಲಿ ಬುಕ್ ಮಾಡಿಸುವುದು, ಆನಂತರ ತಮಗೆ ಬೇಕಾದವರಿಗೆ, ಹತ್ತಿರದವರಿಗೆ, ವಿವಿಐಪಿಗಳಿಗೆ ಆ ಹಾಸಿಗೆಯನ್ನು ತಮ್ಮ ಇಷ್ಟಾನುಸಾರ ಮಾರಿಕೊಳ್ಳುವ ಕರಾಳತೆ ಈಗ ಬಟಾಬಯಲಾಗಿದೆ. ಇದರ ಹಿಂದೆ ಅಧಿಕಾರಿಗಳು ಶಾಮೀಲಾಗಿದ್ದಾರೆಂದು ಹೇಳಲಾಗುತ್ತಿದೆ. ಇಷ್ಟೆಲ್ಲ ಗೊತ್ತಿದ್ದರೂ ಸರ್ಕಾರ ಪರಿಶೀಲಿಸುವ, ಆಸ್ಪತ್ರೆಗಳ ಹಾಸಿಗೆಗಳನ್ನು ತಪಾಸಣೆಗೆ ಒಳಪಡಿಸದೇ ಇರುವ ನಿರ್ಲಕ್ಷ್ಯ ಧೋರಣೆಗೆ ಕಾರಣವಾದರೂ ಏನು ಎಂಬಂತಹ ಮಾತುಗಳು ಈಗ ವ್ಯಾಪಕವಾಗುತ್ತಿವೆ.

        ಒಂದು ಕಡೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಬಡವರು, ಮಧ್ಯಮ ವರ್ಗದವರು ದಿನವಿಡೀ ಆಸ್ಪತ್ರೆಗಳ ಹೊರಗೆ ಕಾಯುತ್ತಾರೆ. ಸೂಕ್ತ ಚಿಕಿತ್ಸೆ ಸಿಗದೆ, ಆಮ್ಲಜನಕ, ಹಾಸಿಗೆಗಳು ದೊರಕದೆ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಇದು ಪ್ರತಿನಿತ್ಯವೂ ನಡೆಯುತ್ತಿರುವ ಕಠೋರ ಸತ್ಯ. ಎಲ್ಲಿಂದಲೋ ಬಂದು ರೋಗಿಗಳ ಜೊತೆ ಅಸಹಾಯಕರಾಗಿ ಕುಳಿತು ಬಿಡುವ, ಸತ್ತ ನಂತರ ರೋಧಿಸುವ ಭೀಬತ್ಸ ಘಟನೆಗಳನ್ನು ನಿತ್ಯವೂ ನೋಡುತ್ತಿದ್ದೇವೆ. ಬಡವರು ಆಸ್ಪತ್ರೆಗಳ ಹೊರಗೆ ಪರಿತಪಿಸುತ್ತಿದ್ದರೆ ಇನ್ನು ಕೆಲವರು ಏಕಾಏಕಿ ಹಾಸಿಗೆಗಳನ್ನು ಪಡೆದು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.

ದುಡ್ಡಿದ್ದವ ದೊಡ್ಡಪ್ಪ :

      ವಿವಿಧ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇದ್ದರೂ ಆ ಸಂದರ್ಭಕ್ಕೆ ಸೋಂಕಿತರಿಗೆ ಬೆಡ್ ನೀಡದೆ ತಮಗೆ ಬೇಕಾದವರಿಗೆ ಮಾರಿಕೊಂಡಿರುವ ಬಹುದೊಡ್ಡ ಹಗರಣಗಳು ಬೆಳಕಿಗೆ ಬರತೊಡಗಿವೆ. ಇದು ಇಡೀ ಆರೋಗ್ಯ ವ್ಯವಸ್ಥೆಯ ಕರಾಳ ಮುಖವನ್ನು ತೆರೆದಿಡುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ರೋಗ ಉಲ್ಬಣವಾಗಿ ಸಾಯುತ್ತಿದ್ದರೆ ಇನ್ನು ಕೆಲವರು ಬೆಡ್ ಬ್ಲಾಕಿಂಗ್ ಮೂಲಕ ತಮಗೆ ಬೇಕಾದ ಕಡೆ ಹಾಸಿಗೆ ದೊರಕಿಸಿಕೊಳ್ಳುತ್ತಿದ್ದಾರೆ. ದುಡ್ಡಿದ್ದವನೆ ದೊಡ್ಡಪ್ಪ ಎಂಬಂತಾಗಿದ್ದು, ರಾಜಕಾರಣಿಗಳು, ಅಧಿಕಾರಿಗಳಿಗೆ ಇದೆಲ್ಲ ಗೊತ್ತಿದ್ದರೂ ಏನೂ ಗೊತ್ತಿಲ್ಲದವರಂತೆ ಮೌನವಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap