ಮುಂಬೈ :
ಮಹದಾಯಿ ನೀರಾವರಿ ಯೋಜನೆ ಸೇರಿದಂತೆ ಪ್ರಮುಖ ವಿಷಯಗಳನ್ನು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರೆಯ ರಾಜ್ಯ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ರನ್ನು ಭೇಟಿ ಮಾಡಿದ್ದಾರೆ.
ಚರ್ಚೆಯ ಅಂತ್ಯಕ್ಕೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಅವುಗಳು :
- ಮಹದಾಯಿ ನದಿ ವಿವಾದ ನ್ಯಾಯಾಧಿಕರಣ ನೀರು ಹಂಚಿಕೆ ಮಾಡಿ ನೀಡಿರುವ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಮುಖ್ಯಮಂತ್ರಿ ಗಳ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ ಶೀಘ್ರವೇ ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು.
- ಕೃಷ್ಣಾ ನ್ಯಾಯಾಧೀಕರಣದ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಸುಪ್ರೀಂ ಕೋರ್ಟ್ನಲ್ಲಿ ಜಂಟಿಯಾಗಿ ಅಫಿಡವಿಟ್ ಸಲ್ಲಿಸಿ ನೀರು ಹಂಚಿಕೆ ಆದೇಶವನ್ನು ಗೆಜೆಟ್ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ನಿರ್ಧರಿಸಲಾಯಿತು.
- ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಗಾರು ಪ್ರಾರಂಭವಾದ ಕೂಡಲೇ ಕೊಯ್ನಾ ಜಲಾಶಯದಿಂದ ಹಂತ ಹಂತವಾಗಿ ನೀರು ಬಿಡುವಂತೆ ಹಾಗೂ ಈ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಉನ್ನತ ಮಟ್ಟದ ಸಮನ್ವಯ ಸಮಿತಿಯನ್ನು ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
- ಮುಂಬಯಿ ಬೆಂಗಳೂರು ಕೈಗಾರಿಕಾ ಕಾರಿಡಾರ್ ರಚನೆಗೆ ಈಗಾಗಲೇ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು ಈ ಯೋಜನೆಗೆ ಚಾಲನೆ ನೀಡುವ ಬಗ್ಗೆ ಉಭಯ ಸರ್ಕಾರಗಳು ಜಂಟಿಯಾಗಿ ಮನವಿ ಸಲ್ಲಿಸಲು ನಿರ್ದರಿಸಲಾಯಿತು.
- ಕಳೆದ ಆಗಸ್ಟ್ ನಲ್ಲಿ ಮಹಾರಾಷ್ಟ್ರ ಹಾಗು ಕರ್ನಾಟಕದಲ್ಲಿ ಉದ್ಬವಿಸಿದ ಪ್ರವಾಹ ಪರಿಸ್ಥಿತಿಯ ನಿರ್ವಹಣೆ ಹಾಗು ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸುವಂತೆಯು ಎರಡು ರಾಜ್ಯಗಳಿಂದ ಜಂಟಿಯಾಗಿ ಮನವಿ ಸಲ್ಲಿಸಲು ತೀರ್ಮಾನ ಮಾಡಲಾಯಿತು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗು ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವರಾದ ಗಿರೀಶ್ ದತ್ತಾತ್ರೇಯ ಮಹಾಜನ್ ಹಾಗು ಇಂಧನ ಸಚಿವರಾದ ಚಂದ್ರಶೇಖರ್ ಕಿಶನ್ ರಾವ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ