ವಿಜಯಪುರ:
SSLC ಪರೀಕ್ಷೆಯಲ್ಲಿ ನಕಲು ಮಾಡಲು ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ಶನಿವಾರ ಜರುಗಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನಾಳ ಗ್ರಾಮದ ಸಾಗರ ಚಲವಾದಿ (19)ಮೃತ ಯುವಕ.
ಗ್ರಾಮದಲ್ಲಿದ್ದ ವಿಶ್ವಚೇತನ ಪರೀಕ್ಷಾ ಕೇಂದ್ರದಲ್ಲಿ ಪರಿಚಯಸ್ಥ ಪರೀಕ್ಷಾರ್ಥಿಗೆ ಕಾಪಿ ಚೀಟಿ ಕೊಡಲು ಹೋಗಿದ್ದ ಯುವಕನ ಕಂಡ ಪೊಲೀಸರು ಲಾಠಿ ರುಚಿ ತೋರಿಸಿದರು ಎಂದು ತಿಳಿದುಬಂದಿದೆ. ಜೊತೆಗೆ ಈತನಿಗೆ ಹೃದಯ ಸಂಬಂಧಿ ಕಾಯಿಲೆಯೂ ಸಹ ಇತ್ತು ಎಂಬ ಮಾಹಿತಿ ಸಿಕ್ಕಿದೆ.
ಆದರೆ, ಕಾಪಿ ಚೀಟಿ ಕೊಡುವ ಪ್ರಯತ್ನ ಮಾಡುವ ವೇಳೆ ಪೊಲೀಸರು ಯುವಕನನ್ನು ಬೆನ್ನಟ್ಟಿ ಹಿಡಿದು, ಲಾಠಿ ರುಚಿ ತೋರಿಸಿದ್ದಾರೆ. ಪೊಲೀಸರ ಹೊಡೆತಕ್ಕೆ ತಮ್ಮ ಮಗ ಮೃತಪಟ್ಟಿದ್ದಾನೆ ಎಂದು ಯುವಕ ಕುಟುಂಬ ಸದಸ್ಯರು ಆರೋಪಿಸುತ್ತಿದ್ದಾರೆ.
ಆದರೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಯುವಕ ಪೊಲೀಸರ ಬಂಧನದಿಂದ ಗಾಬರಿಗೊಂಡು ಹೃದಯಾಘಾತವಾಗಿ ಮೃತಪಟ್ಟಿದ್ದಾನೆಂದು ಪೊಲೀಸರು ವಾದಿಸುತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವನಬಾಗೇವಾಡಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
