ಇನ್ಮುಂದೆ ರಾಜ್ಯಾದ್ಯಂತ ಹೋಟೆಲ್ ತಿಂಡಿ-ಊಟ ದುಬಾರಿ!!!

ಬೆಂಗಳೂರು :


      ಕೆಲವೇ ದಿನಗಳಲ್ಲಿ ಹೋಟೆಲ್ ಊಟ – ತಿಂಡಿಗಳ ಬೆಲೆಗಳಲ್ಲಿ ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

      ರಾಜ್ಯಾದಾದ್ಯಂತ ಕಾಫಿ- ಟೀ ಬೆಲೆಯನ್ನು ರೂ.2 ಹಾಗೂ ತಂಡಿ ತಿನಿಸುಗಳ ದರವನ್ನು ರೂ.2ರಿಂದ ರೂ.5 ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.

      ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ಹಾಲು ಹಾಗೂ ಮೊಸರು ಬೆಲೆ ರೂ.2 ರಷ್ಟು ಏರಿಕೆಯಾಗಿದೆ. ಅಡುಗೆ ಅನಿಲದ ಬೆಲೆ ಇತ್ತೀಚಿನ ದಿನಗಳಲ್ಲಿ ರೂ.230 ಹೆಚ್ಚಳವಾಗಿದೆ. ಸೊಪ್ಪು, ತರಕಾರಿ, ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಹೋಟೆಲ್ ಗಳ ಬಾಡಿಗೆ ಸೇರಿದಂತೆ ಪ್ರತೀಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಹೀಗಾಗಿ ಕಾಫಿ, ಟೀ, ಉಪಾಹಾರ, ಊಟದ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ.

      ಬೆಂಗಳೂರಿನಂತಹ ಮಹಾನಗರಗಳಲ್ಲಿ ವಾಸಿಸುವ ಬಹುತೇಕ ಜನರಿಗೆ ಹೋಟೆಲ್​ಗಳೇ ಹೊಟ್ಟೆಗೆ ಆಧಾರ. ಒಂಟಿಯಾಗಿರುವ, ಪಿಜಿಗಳಲ್ಲಿ ವಾಸವಾಗಿರುವ ಅಥವಾ ಗಂಡ-ಹೆಂಡತಿ ಇಬ್ಬರೂ ಉದ್ಯೋಗಕ್ಕೆ ಹೋಗುವ ಸಂದರ್ಭಗಳು ಮಹಾನಗರಗಳಲ್ಲಿ ಹೆಚ್ಚಾಗಿರುವ ಕಾರಣ ಊಟ – ತಿಂಡಿಗೆ ಹೋಟೆಲ್​ಗಳನ್ನು ಅವಲಂಬಿಸಿರುವವರ ಸಂಖ್ಯೆ ಹೆಚ್ಚು. ಒಟ್ಟು ಬೆಂಗಳೂರಿನಲ್ಲಿ 17,000 ಹೋಟೆಲ್‍ಗಳಿವೆ. ಇವುಗಳಲ್ಲಿ ಸಣ್ಣ, ಮಧ್ಯಮ ಹಾಗೂ ದೊಡ್ಡ ಮಟ್ಟದ ಮೂರು ರೀತಿಯ ಹೋಟೆಲ್‍ಗಳು ಸೇರಿವೆ. ಸಣ್ಣ ಮತ್ತು ಮಾಧ್ಯಮ ಗಾತ್ರದ ಹೋಟೆಲ್‍ಗಳಲ್ಲಿ ಇಂದಿನಿಂದಲೇ ಕಾಫಿ, ಟೀ ದರ ಹೆಚ್ಚಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯಾದ್ಯಂತ ಈ ಹೆಚ್ಚಳ ಜಾರಿಗೆ ಬರಲಿದೆಯಂತೆ. ಈ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ