ತುಮಕೂರು : ಚಲಿಸುತ್ತಿದ್ದ ಬಸ್ ಗೆ ಬೆಂಕಿ : ರಸ್ತೆಯಲ್ಲೇ ಹೊತ್ತಿ ಉರಿದ ಬಸ್!!

ತುಮಕೂರು:

      ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ದಗ-ದಗನೇ ಹೊತ್ತಿ ಉರಿದ ಘಟನೆ ನಗರದ ಹೊರವಲಯದ ಊರುಕೆರೆಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಇಂದು ಬೆಳಗಿನ ಜಾವ 3.30 ರ ಸುಮಾರಿಗೆ ನಡೆದಿದೆ.

      ಯಾದಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಯಲ್ ಟ್ರಾನ್ಸ್‍ ಪೋರ್ಟ್ ಕಂಪನಿಗೆ ಸೇರಿದ ಸ್ಲೀಪರ್‍ಕೋಚ್ ಬಸ್‍ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಶಾರ್ಟ್ ಸಕ್ರ್ಯೂಟ್‍ನಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬಸ್‍ನಲ್ಲಿದ್ದ ಪ್ರಯಾಣಿಕರು ಸುಟ್ಟ ವಾಸನೆ ಬರುತ್ತಿದೆ ಎಂದು ಚಾಲಕರ ಗಮನಕ್ಕೆ ತಂದಿದ್ದಾರೆ. ಆದರೆ ಚಾಲಕ ಉದಾಸೀನ ತೋರಿ ಏನೂ ಆಗಿಲ್ಲವೆಂದು ಬಸ್‍ನ್ನು ಚಾಲನೆ ಮಾಡಿಕೊಂಡು ಕೋರಾದಿಂದ ಸುಮಾರು 12 ಕಿ.ಮೀ ದೂರ ಬಂದಾಗ ಮುಂಜಾನೆ 4.30ರ ಸಮಯದಲ್ಲಿ ಇಂಜಿನ್‍ನಲ್ಲಿ ದಟ್ಟ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ.

     ಕೂಡಲೇ ಬಸ್ ಚಾಲಕ ಮತ್ತು ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ಹಲವು ಪ್ರಯಾಣಿಕರು ಬಸ್‍ನ ಗಾಜುಗಳನ್ನು ಒಡೆದು ಧುಮುಕಿದರೆ, ಕೆಲವರು ಧುಮುಕಲು ಸಾಧ್ಯವಾಗದೆ ಇಳಿಯುವಾಗ ಬೆಂಕಿ ತಗುಲಿ ಗಾಯಗೊಂಡಿದ್ದಾರೆ. ಬಸ್‍ನಲ್ಲಿದ್ದ ಪ್ರಯಾಣಿಕರು ನಮ್ಮನ್ನು ಕಾಪಾಡಿ ಎಂದು ಚೀರುತ್ತಿದ್ದಾಗ ಸ್ಥಳೀಯ ನಿವಾಸಿಗಳು ಕೇಳಿಸಿಕೊಂಡು ತಕ್ಷಣ ಮನೆಯಿಂದ ಹೊರಗೆ ಓಡಿಬಂದು ಪ್ರಯಾಣಿಕರನ್ನು ರಕ್ಷಿಸಿ ಅವರಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮರೆದಿದ್ದಾರೆ.

      ಆದರೆ ಈ ವೇಳೆಗೆ 8 ಮಂದಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡಿರುವ ಯಾದಗಿರಿ ಹುಣಸಗಿಯ ನಿವಾಸಿ ಪ್ರಸಾದ್(31), ಬಿಜಾಪುರ ಜಿಲ್ಲೆಯ ತಾಳಿಕೋಟೆ ನಿವಾಸಿ ತೌಸೀಫ್(21), ಮೆಹಬೂಬ್ ಪಾಷ(25), ಶಬ್ಬೀರ(27) ಮತ್ತಿತರರಿಗೆ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

      ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಮಧುಸೂದನ್, ಸಬ್‍ಇನ್‍ಸ್ಪೆಕ್ಟರ್ ಲಕ್ಷ್ಮಯ್ಯ, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲು ನೆರವಾದರು.

      ಕೋರದ ಬಳಿ ಬಂದಾಗಿ ಬಸ್ಸಿನಲ್ಲಿ ಏನೋ ದೋಷವಿರಬಹುದು ಚೆಕ್ ಮಾಡಿಕೊಳ್ಳಿ ಎಂದು ಪ್ರಯಾಣಿಕರು ಚಾಲಕನಿಗೆ ಸಲಹೆ ನೀಡಿದ್ದರು. ಆದರೆ ಚಾಲಕನ ಸಮಯ ಪ್ರಜ್ಞೆ ಇಲ್ಲದಿರುವುದೇ ಈ ದುರಂತಕ್ಕೆ ಮೂಲ ಕಾರಣ ಎಂದು ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

       ಸ್ಥಳಕ್ಕೆ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಇಲ್ಲಿನ ಸಬ್ ಇನ್ಸ್ ಪೆಕ್ಟರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ ಕೋನಾ ವಂಶಿಕೃಷ್ಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಉದ್ದೇಶ ತುಮಕೂರು ನಗರದ ಡಿವೈಎಸ್ಪಿ ತಿಪ್ಪೇಸ್ವಾಮಿ ಹಾಗೂ ವೃತ್ತ ನಿರೀಕ್ಷಕ ಮಧುಸೂದನ್ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap