ಬೆಂಗಳೂರು
ಖಾಸಗಿ ಕಂಪನಿಯ ಉದ್ಯೋಗಿಗಳನ್ನು ಮನೆಗೆ ಬಿಟ್ಟು ಮನೆಗೆ ವಾಪಸಾಗುತ್ತಿದ್ದ ಕ್ಯಾಬ್ ಚಾಲಕನನ್ನು ಕಾರಿನ ಸಮೇತ ಅಪಹರಿಸಿ 50 ಸಾವಿರ ರೂ.ಗಳ ಸುಲಿಗೆ ಮಾಡಿದ್ದ ತಮಿಳುನಾಡಿನ ಡೆಂಕಣಿಕೋಟೆ ಮೂಲದ ಐವರು ಅಪಹರಣಕಾರರು ಬೊಮ್ಮನಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕೃಷ್ಣನಾಯಕ್ ಅಲಿಯಾಸ್ ಕಳ್ಳಕೃಷ್ಣ (24), ಯಶ್ವಂತ್ ಕುಮಾರ್ ಅಲಿಯಾಸ್ ಕೋತಿ (23), ರಮೇಶ್ ಅಳಿಯಾಸ್ ಸ್ವಾಮಿ (20), ಶಶಿಕುಮಾರ್ ಅಲಿಯಾಸ್ ಶಶಿ (22), ಅರುಣ್ ಕುಮಾರ್ ಅಲಿಯಾಸ್ ಕೊಂಗ (20) ಬಂಧಿತ ಆರೋಪಿಗಳಾಗಿದ್ದಾರೆ
ಆರೋಪಿಗಳಿಂದ ಟಾಟಾ ಇಂಡಿಕಾ ಕಾರು ನಗದು ಸೇರಿದಂತೆ 3 ಲಕ್ಷ 63 ಸಾವಿರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಹುಳಿಮಾವು, ಬೇಗೂರು ತಲಾ 1 ದರೋಡೆ, ಕೋಣನಕುಂಟೆಯಲ್ಲಿ 2 ಸುಲಿಗೆ, ಮೈಕೋ ಲೇಔಟ್‍ನಲ್ಲಿ 1 ಸುಲಿಗೆ, 1 ದರೋಡೆ ಯತ್ನ ಸೇರಿ 8 ಪ್ರಕರಣಗಳನ್ನು ಪತ್ತೆಮಾಡಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.
ಮಧ್ಯರಾತ್ರಿ ಕಿಡ್ನಾಪ್
ಬೊಮ್ಮನಹಳ್ಳಿಯ ಗುರುಮೂರ್ತಿ ರೆಡ್ಡಿ ಲೇಔಟ್‍ನ ಅಶೋಕ್ ಎಂಬುವರು ಖಾಸಗಿ ಕಂಪನಿಗೆ ಕಾರುಗಳನ್ನು ಬಾಡಿಗೆಗೆ ಬಿಡುತ್ತಿದ್ದು, ಅವರ ತಮ್ಮ ಹರಿಬಾಬು ಅಣ್ಣನ ಟಾಟಾ ಇಂಡಿಕಾ ಕಾರನ್ನು ಖಾಸಗಿ ಕಂಪನಿಯೊಂದರ ಉದ್ಯೋಗಿಗಳನ್ನು ಕರೆದುಕೊಂಡು ಬಿಡುವ ಕೆಲಸ ಮಾಡುತ್ತಿದ್ದ.
ಕಂಪನಿಯ ಉದ್ಯೋಗಿಗಳನ್ನು ಮನೆಗೆ ಬಿಟ್ಟು ಕಳೆದ ಅ. 16 ರಂದು ಮಧ್ಯರಾತ್ರಿ 11.45ರ ವೇಳೆ ಮನೆಗೆ ಬರುತ್ತಿದ್ದಾಗ ಅಡ್ಡಗಟ್ಟಿದ ಬಂಧಿತ ಗ್ಯಾಂಗ್, ಕಾರಿನ ಜತೆ ಹರಿಬಾಬುನನ್ನು ಅಪಹರಿಸಿಕೊಂಡು ಪರಾರಿಯಾಗಿತ್ತು.ಮೊದಲಿಗೆ ಹರಿಬಾಬುನ ಅಣ್ಣ ಅಶೋಕ್‍ಗೆ ಕರೆ ಮಾಡಿ 50 ಸಾವಿರ ರೂ.ಗಳನ್ನು ಬ್ಯಾಂಕಿನ ಅಕೌಂಟ್‍ಗೆ ಹಾಕುವಂತೆ ಹೇಳಿ ಅದನ್ನು ತೆಗೆದುಕೊಂಡಿದ್ದ ಆರೋಪಿಗಳು, ಆನೇಕಲ್, ಕೊಳ್ಳೆಗಾಲ ಇನ್ನಿತರ ಕಡೆ ಸುತ್ತಾಡಿಸುತ್ತ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಈ ಸಂಬಂಧ ಅಶೋಕ್ ನೀಡಿದ ದೂರು ದಾಖಲಿಸಿಕೊಂಡ ಬೊಮ್ಮನಹಳ್ಳಿ ಪೆÇಲೀಸರ ವಿಶೇಷ ತಂಡ ಅಪಹರಣಕಾರರ ಗ್ಯಾಂಗ್‍ನ್ನು ಬೆನ್ನಟ್ಟಿದ್ದರು. ಇದನ್ನು ತಿಳಿದ ಗ್ಯಾಂಗ್ ಕೊಳ್ಳೆಗಾಲದ ಬಳಿ ಹರಿಬಾಬುನನ್ನು ಬಿಟ್ಟು ಪರಾರಿಯಾಗಿದ್ದರು.
ಕೊಲೆಯತ್ನ ನಡೆಸಿದ್ದ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಇನ್ಸ್‍ಪೆಕ್ಟರ್ ರಾಜೇಶ್ ಮತ್ತವರ ತಂಡ ಗ್ಯಾಂಗ್‍ನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಚಾರಣೆಯಲ್ಲಿ ಗ್ಯಾಂಗ್‍ನ ಮುಖ್ಯಸ್ಥ ಕಳ್ಳಕೃಷ್ಣ, ಬನ್ನೇರುಘಟ್ಟದಲ್ಲಿ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ ಅಲ್ಲದೆ ಕೋಣನಕುಂಟೆಯಲ್ಲಿ ಹಳೆ ದ್ವೇಷದ ಕಾರಣಕ್ಕೆ ಆಟೋರಿಕ್ಷಾ ಹಾಗೂ ಕಾರಿಗೆ ಬೆಂಕಿ ಇಟ್ಟಿರುವುದು ಪತ್ತೆಯಾಗಿದೆ.
ಕೃಷ್ಣ ಗ್ಯಾಂಗ್ ಕಟ್ಟಿಕೊಂಡು ನಗರದ ವಿವಿಧೆಡೆ ಹಾಗೂ ಹೊರವಲಯಗಳಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು, ವಾಹನ ಚಾಲಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು.
ಸುಲಿಗೆಯ ಹಣದಿಂದ ಮದ್ಯಪಾನ ಮಾಡಿ ಮೋಜು ಮಾಡುತ್ತಿದ್ದ ಆರೋಪಿಗಳಿಂದ ಮೊಬೈಲ್‍ಗಳು, ಆಟೋರಿಕ್ಷಾ, ಟಾಟಾ ಇಂಡಿಕಾ ಕಾರು ಸೇರಿ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳು ತಮಿಳುನಾಡಿನ ಡೆಂಕಣಿಕೋಟೆ ಮೂಲದವರಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಬೋರಲಿಂಗಯ್ಯ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
