ಚಾಮರಾಜನಗರ:

ಮದುವೆ ಸಡಗರದಲ್ಲಿದ್ದ ಮನೆಯೊಂದಕ್ಕೆ ಕಾರು ಡಿಕ್ಕಿ ಹೊಡೆದು, ಮಧುಮಗನ ತಾಯಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ಚಾಮರಾಜನಗರ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಕ್ಷ್ಮಮ್ಮ (55) ಮೃತ ದುರ್ದೈವಿ. ಈಕೆ ತನ್ನ ಮಗನ ಮದುವೆ ಸಂಭ್ರಮದಲ್ಲಿ ಗ್ರಾಮದೇವರ ಹಬ್ಬ ಮಾಡಿ ಊರಿನವರಿಗೆಲ್ಲ ಊಟ ಹಾಕಿ ಬಳಿಕೆ ಜಗಲಿ ಮೇಲೆ ತನ್ನ ಅಕ್ಕತಂಗಿಯರಾದ ಸಾಕಮ್ಮ,ದುಂಡಮ್ಮ,ರಾಜಮ್ಮರೊಡನೆ ಕುಳಿತು ಎಲೆ ಅಡಿಕೆ ಹಾಕಿಕೊಳ್ಳುತ್ತಾ ಮಾತನಾಡುತ್ತಾ ಕುಳಿತಿರುವಾಗ, ಈ ದುರ್ಘಟನೆ ಸಂಭವಿಸಿದೆ.
ತಡರಾತ್ರಿ ವಾಹನ ಚಾಲನೆ ಬಾರದ ರಾಜಪ್ಪ ಹಿಂಬದಿ ಗೇರ್‍ನಲ್ಲಿದ್ದ ಕಾರನ್ನು ಚಲಾಯಿಸಿದ್ದಾನೆ. ಈ ವೇಳೆ ಕಾರು ಹಿಂದಕ್ಕೆ ಹೋಗಿ ಲಕ್ಷ್ಮಮ್ಮನ ಮೇಲೆ ಹರಿದಿದೆ. ಕಾರ್ ಹರಿದ ಪರಿಣಾಮ ಮಹಿಳೆಯ ತಲೆ ಛಿದ್ರವಾಗಿ ಮನೆ ಮೇಲೆ ಹಾರಿಹೋಗಿದೆ. ಅಷ್ಟೆ ಅಲ್ಲದೆ ದುರ್ಘಟನೆ ಬಳಿಕ ವೇಗದಲ್ಲಿ ಚಲಿಸುತ್ತಿದ್ದ ಕಾರು ಮನೆಯ ಮೇಲ್ಛಾವಣಿ ಮೇಲೆ ಹೋಗಿ ನಿಂತಿದೆ. ಸದ್ಯ ಸ್ಥಳೀಯರು ಮೇಲ್ಛಾವಣಿಯಿಂದ ಕಾರನ್ನು ಕೆಳಕ್ಕಿಳಿಸಿದ್ದಾರೆ.
ಇನ್ನೇನು ಎರಡು ಮೂರು ದಿನದಲ್ಲಿ ವಿವಾಹವಾಗಬೇಕಿದ್ದ ಮೃತ ಲಕ್ಷ್ಮಮ್ಮನ ಮಗ ಗಿರಿ ಎಂಬುವವರಿಗೆ ತಲೆಗೆ ಪೆಟ್ಟಾಗಿದೆ. ಗಾಯಗೊಂಡವರು ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನ ಚಾಲಕನ ಅಜಾಗರೂಕತೆಯಿಂದ ಎಡವಟ್ಟಿನಿಂದ ಹಬ್ಬ ಮಾಡುತ್ತಿದ್ದವರ ಮನೆಯಲ್ಲೀಗ ತಿಥಿ ಮಾಡಬೇಕಾದ ಸ್ಥಿತಿ ಎದುರಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








