ಬೆಂಗಳೂರು :
ವಿಪಕ್ಷ ನಾಯಕ ಸಿದ್ದರಾಮಯ್ಯನವರ ಆಪ್ತರಾದ ಮಾಜಿ ಸಚಿವ ಸಿ.ಹೆಚ್.ವಿಜಯ್ ಶಂಕರ್ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಮ್ಮುಖದಲ್ಲಿ ವಿಜಯಶಂಕರ್ ಬಿಜೆಪಿಗೆ ಮರುಸೇರ್ಪಡೆಯಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡಿದ್ದಾರೆ.
ಇದೇ ವೇಳೆ ಮಾತನಾಡಿದ ವಿಜಯ್ ಶಂಕರ್, 2009 ರಲ್ಲಿ ವಿಧಾನ ಪರಿಷತ್ ಸದಸ್ಯನಾಗಿದ್ದ. ಎರಡು ಅವಧಿಗೆ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿ, ಮಾನಸಿಕ ಸ್ಥಿಮಿತ ಕಳೆದುಕೊಂಡು ತಪ್ಪು ನಿರ್ಧಾರ ಕೈಗೊಂಡಿದ್ದೇನೆ. ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ. ದೇಶ ಮತ್ತು ಧರ್ಮದ ವಿಚಾರ ಬಂದಾಗ ರಾಜಿ ಆಗಿಲ್ಲ. ಯಾವುದೇ ಷರತ್ತುಗಳನ್ನು ಹಾಕದೇ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಪಕ್ಷ ನನಗೆ ಯಾವುದೇ ಜವಾಬ್ದಾರಿ ನೀಡಿದರು ನಿಭಾಯಿಸುತ್ತೇನೆ. ಹುಣಸೂರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ನನ್ನ ಗುರಿ. ಹುಣಸೂರು ಉಪ ಚುನಾವಣೆ ನನ್ನ ಪ್ರತಿಷ್ಠೆಯ ವಿಚಾರವಾಗಿದೆ. ಏಕೆಂದರೆ ಅದು ನನ್ನ ತಾಲೂಕು. ಬಿಜೆಪಿ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವಿಜಯ್ ಶಂಕರ್ ಅವರು ಈ ಹಿಂದೆ ಪಕ್ಷದಿಂದ ಸಂಸತ್ ಸದಸ್ಯರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ. ಆ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಏನೆಲ್ಲಾ ಮಾಡಬೇಕೋ ಅದನ್ನು ಒಟ್ಟಾಗಿ ಮಾಡುತ್ತೇವೆ. ಪಕ್ಷವನ್ನು ಒಟ್ಟಾಗಿ ಕಟ್ಟೋಣ ಎಂದು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮಾತನಾಡಿ, ವಿಜಯ್ ಶಂಕರ್ ನಮ್ಮ ಜೊತೆ ಇದ್ದವರು. ಹಾಲು ಸಕ್ಕರೆ ಜೊತೆ ಬೆರತು ಸಂಘಟನೆ ಸಹಕರಿಸಿ ಎಂದು ಕೈಜೋಡಿಸಿ ಕೇಳಿಕೊಳ್ಳುತ್ತೇನೆ.
ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿಜಯಶಂಕರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ವಿಜಯ್‌ಶಂಕರ್ ಇದೀಗ ಮತ್ತೆ ಮೂಲ ಪಕ್ಷಕ್ಕೆ ವಾಪಾಸಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ