ಬೆಂಗಳೂರು:
ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢವಾದ ಬೆನ್ನಲ್ಲೇ ಸಿಎಂ ಪುತ್ರಿ ಪದ್ಮಾವತಿಗೆ ಕೋವಿಡ್-19 ವಕ್ಕರಿಸಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾದ ನಂತರ ಅವರ ಆಪ್ತ ವಲಯದಲ್ಲಿ ಆತಂಕ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಎಂ ಬಿಎಸ್ ವೈ ಅವರನ್ನು ಭೇಟಿಯಾಗಿದ್ದ, ಸಂಪರ್ಕಕ್ಕೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈಗ ಸಿಎಂ ಬಿಎಸ್ ವೈ ಅವರ ಕುಟುಂಬಸ್ಥರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪುತ್ರ ವಿಜಯೇಂದ್ರ ಅವರ ವರದಿ ನೆಗೆಟಿವ್ ಆಗಿದ್ದರೆ, ಪುತ್ರಿ ಪದ್ಮಾವತಿ ಅವರಿಗೆ ಪಾಸಿಟಿವ್ ಆಗಿದೆ.
ಪಾಸಿಟಿವ್ ವರದಿ ಬಂದಿರುವ ಹಿನ್ನೆಲೆಯಲ್ಲಿ ಪದ್ಮಾವತಿ ಅವರು ಸಿಎಂ ಬಿಎಸ್ವೈ ಜೊತೆ ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾವೇರಿ ನಿವಾಸದಲ್ಲಿ ಇರುವ ಎಲ್ಲರನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲಾಗಿದೆ. ಸಿಎಂ ಕಚೇರಿಯಲ್ಲಿ ಸಿಬ್ಬಂದಿಗೆ ಸಾಮೂಹಿಕ ಟೆಸ್ಟ್ ಮಾಡಿಸಲಾಗಿದ್ದು, ಇಂದು ಮಧ್ಯಾಹ್ನದೊಳಗೆ ವರದಿ ಬರಲಿದೆ.
ಇದರೊಂದಿಗೆ ಸಿಎಂ ಟ್ರಾವೆಲ್ ಹಿಸ್ಟರಿ ಪ್ರಕಾರ, ರಾಜ್ಯಪಾಲರ ಭೇಟಿ, ಕಸ್ತೂರಿರಂಗನ್ಗೆ ಸನ್ಮಾನ, ಸಚಿವರಾದ ಬೊಮ್ಮಾಯಿ, ಅಶ್ವಥ್ ನಾರಾಯಣ, ಸುಧಾಕರ್ ಹಾಗೂ ಸೋಮಣ್ಣ ಸೇರಿ ಹಲವು ಸಚಿವರ ಜೊತೆ ಸಭೆ ನಡೆಸಿರುವುದರಿಂದ ಎಲ್ಲರು ಇಂದು ಕರೊನಾ ಟೆಸ್ಟ್ ಒಳಗಾಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ