ಬೆಂಗಳೂರು :
ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ 20 ಕೈದಿಗಳು ಮತ್ತು 6 ಮಂದಿ ಜೈಲು ಸಿಬ್ಬಂದಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಪೊಲೀಸ್ ಠಾಣೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿರುವುದರಿಂದ ಸೀಲ್ಡೌನ್ ಮಾಡಲಾಗಿದೆ. ಬಂಧಿತರಾಗುವ ಕೈದಿಗಳಿಂದ ಜೈಲುಗಳಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ.
ಸಿಲಿಕಾನ್ ಸಿಟಿಯ ಸೆಂಟ್ರಲ್ ಜೈಲಿನಲ್ಲಿ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜೈಲಿನಲ್ಲಿದ್ದ ಸುಮಾರು 150 ಜನರ ಸ್ಯಾಂಪಲ್ ಪಡೆಯಲಾಗಿತ್ತು. ಈಗ ಇದರ ವರದಿ ಬಂದಿದ್ದು, ಈ ಪೈಕಿ ಜೈಲು ಸಿಬ್ಬಂದಿ ಸೇರಿದಂತೆ ಒಟ್ಟು 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೊಸದಾಗಿ ಬಂದ 450 ಆರೋಪಿಗಳನ್ನು ಬೇರೆ ಕೈದಿಗಳ ಜೊತೆ ಸಂಪರ್ಕ ಇಲ್ಲದಂತೆ ಮಾಡಲಾಗಿತ್ತು. ಜೈಲಿಗೆ ಬಂದ ಪ್ರತಿ ಕೈದಿಯನ್ನು 21 ದಿನ ಕ್ವಾರಂಟೈನ್ ಮಾಡಲಾಗುತಿತ್ತು. ಹೀಗಿದ್ದರೂ 26 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಇನ್ನು ನಾಳೆ ಮತ್ತಷ್ಟು ಜನರ ಸ್ಯಾಂಪಲ್ ಪಡೆಯಲು ನಿರ್ಧರಿಸಲಾಗಿದೆ. ಸೋಂಕು ಪಾಸಿಟಿವ್ ಬಂದಿರುವ 20 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದು, ಅವರನ್ನು ಕಳೆದ ಒಂದು ತಿಂಗಳ ಹಿಂದೆ ಬಂಧಿಸಲಾಗಿತ್ತು. ಇವರನ್ನು ಮುನ್ನೆಚ್ಚರಿಕೆಯಾಗಿ ಪ್ರತ್ಯೇಕವಾಗಿ ಇರಿಸಲಾಗಿತ್ತು.ಈ ವಿಚಾರಣಾಧೀನ ಕೈದಿಗಳಿಗೆ 22ನೇ ದಿನದ ಕೊರೊನಾ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ. ಇದರ ಜೊತೆಗೆ ಫ್ರೀಡಂ ಪಾರ್ಕ್ ಬಳಿ ಇರುವ ಜೈಲು ಅಧಿಕಾರಿಗಳ ಕಚೇರಿಯಲ್ಲಿ ಕೆಲಸ ಮಾಡುತಿದ್ದ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
