ಕೇಂದ್ರ ಪರಿಹಾರದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಳ ಮಾಡಬೇಕು: ಕುಮಾರ ಸ್ವಾಮಿ

ಬೆಂಗಳೂರು

       ರಾಜ್ಯ ಮೇಲಿಂದ ಮೇಲೆ ಪ್ರಕೃತಿ ವಿಕೋಪಕ್ಕೆ ಗುರಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಕೇಂದ್ರದಿಂದ ನೀಡಲಾಗುತ್ತಿರುವ ಪರಿಹಾರದ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಒತ್ತಾಯಿಸಿದ್ದಾರೆ.

       ರಾಜಸ್ತಾನದ ನಂತರ ದೇಶದ ಅತ್ಯಂತ ದೊಡ್ಡ ಬಂಜರು ನೆಲವನ್ನು ಹೊಂದಿರುವ ರಾಜ್ಯ ಕರ್ನಾಟಕ.ಪರಿಣಾಮವಾಗಿ ಕೆಲ ಕಾಲದಲ್ಲಿ ಅತಿವೃಷ್ಟಿಯಿಂದ ರಾಜ್ಯ ಬಾಧೆಗೊಳಗಾದರೆ,ಬಹುತೇಕ ಎಲ್ಲ ವರ್ಷಗಳಲ್ಲಿ ಬರಗಾಲ ಪೀಡಿತ ಪ್ರದೇಶಗಳ ಸಂಖ್ಯೆ ಇದ್ದೇ ಇರುತ್ತದೆ ಎಂದಿದ್ದಾರೆ.

        ತಮ್ಮ ಅಧ್ಯಕ್ಷತೆಯಲ್ಲಿಂದು ನಡೆದ ರಾಜ್ಯ ಸಂಸದರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ,ಈ ವಿಷಯ ತಿಳಿಸಿದರಲ್ಲದೆ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಂದರ್ಭದಲ್ಲಿ ರಾಜ್ಯಕ್ಕೆ ನೀಡಲಾಗುತ್ತಿರುವ ಪರಿಹಾರದ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಕರ್ನಾಟಕದ ಸಂಸದರಿಗೆ ಮನವಿ ಮಾಡಿದರು.

       “ರಾಜ್ಯದ ನೆಲ, ಜಲ, ಅಭಿವೃದ್ಧಿ, ಕೈಗಾರಿಕೆ, ಕೃಷಿ, ವೈಮಾನಿಕ, ರಕ್ಷಣಾ ಇಲಾಖೆ ಸೇರಿದಂತೆ ಒಟ್ಟು 15 ಇಲಾಖೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಪರಿಶೀಲನಾ ಹಂತದಲ್ಲಿದೆ. ಕಳೆದ 6 ತಿಂಗಳಲ್ಲಿ ನಾನೂ ಸೇರಿದಂತೆ ಸಂಬಂಧಪಟ್ಟ ಸಚಿವರು ಅನೇಕ ಸಭೆ ನಡೆಸಿ ಸಲ್ಲಿಸಿದ ಪ್ರಸ್ತಾವನೆಗಳ ಬಗ್ಗೆ ಕ್ರಮವಹಿಸಲು ಸಹಕರಿಸಬೇಕು” ಎಂದು ಕೋರಿದರು.

       ಕೇಂದ್ರ ಹೆದ್ದಾರಿ ಮತ್ತು ಜಲಸಂಪನ್ಮೂಲ ಸಚಿವರಾದ ನಿತಿನ್ ಗಡ್ಕರಿ ಹಾಗೂ ಕೇಂದ್ರ ರಕ್ಷಣಾ ಸಚಿವರು ರಾಜ್ಯದ ಯೋಜನೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿ , ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದಾರೆ. ಅವರನ್ನು ಈ ಸಭೆಯ ಮೂಲಕ ಅಭಿನಂದಿಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

       ಸ್ಥಳೀಯ ರಕ್ಷಣಾ ಇಲಾಖೆ ಅಧಿಕಾರಿಗಳು ಕ್ರಮವಹಿಸದೇ ಇರುವುದರಿಂದ ಕೆಲಸಗಳು ವಿಳಂಬವಾಗಿದೆ. ಈ ಎಲ್ಲಾ ಯೋಜನೆಗಳ ಬಗ್ಗೆ ಕೇಂದ್ರದ ಗಮನ ಸೆಳೆದು ಸಂಸದರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.

       ಕೇಂದ್ರ ನೈಸರ್ಗಿಕ ವಿಕೋಪ ಪರಿಹಾರ ನಿಯಮಾವಳಿಗಳು ಪ್ರಸ್ತುತ ಸನ್ನಿವೇಶಕ್ಕೆ ಪೂರಕವಾಗಿರುವುದಿಲ್ಲ. ಅತ್ಯಲ್ಪ ಪರಿಹಾರ ಮೊತ್ತ ವನ್ನು ನಿಗದಿಪಡಿಸಿದೆ. ಈ ನಿಯಮಾವಳಿಗಳನ್ನು ಬದಲಿಸಿ ಹೆಚ್ಚು ಪರಿಹಾರಕ್ಕೆ ಅವಕಾಶ ಕಲ್ಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು.

        ಇದೇ ರೀತಿ ಹಾಗೂ ನರೇಗಾ ಯೋಜನೆಯಲ್ಲಿ ರಾಜ್ಯ ಸರ್ಕಾರ ವೆಚ್ಚ ಮಾಡಿರುವ 964 ಕೋಟಿ ರೂ. ಗಳನ್ನು ಮರುಪಾವತಿಸಲು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.

      ಮುಖ್ಯ ಮಂತ್ರಿಗಳ ಮನವಿಗೆ ಪ್ರತಿಕ್ರಿಯಿಸಿದ ಹಲವು ಸಂಸದರು, ಬಾಕಿ ಉಳಿದಿರುವ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಸಚಿವರುಗಳು, ಅಗತ್ಯ ಮಾಹಿತಿಯೊಂದಿಗೆ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಆಗಮಿಸುವುದು ಸೂಕ್ತ ಎಂದು ಹೇಳಿದರು.

      ಕೇಂದ್ರದ ಸಚಿವರನ್ನು ಸಂಸದರ ನಿಯೋಗದೊಂದಿಗೆ ಭೇಟಿ ಮಾಡಿದಲ್ಲಿ ಪ್ರಸ್ತಾವನೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ. ರಾಜ್ಯಕ್ಕೆ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಪ್ರಶ್ನೆ ಕೇಳಲು ಅಗತ್ಯ ಮಾಹಿತಿಯನ್ನು ನೀಡಬೇಕೆಂದು ಮನವಿ ಮಾಡಿದರು.

      ಈ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕೇಳಬಹುದಾದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳನ್ನು ಎಲ್ಲಾ ಸಂಸದರಿಗೆ ಕಳುಹಿಸಿಕೊಡಲು ಮುಖ್ಯ ಮಂತ್ರಿಗಳು ದೆಹಲಿಯ ಸ್ಥಾನಿಕ ಆಯುಕ್ತರಿಗೆ ಸೂಚನೆ ನೀಡಿದರು.

        ಬೆಂಬಲ ಬೆಲೆ: ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ತೊಗರಿ, ಹೆಸರುಕಾಳು, ಕಬ್ಬು, ಭತ್ತ, ಈರುಳ್ಳಿ, ಟೋಮ್ಯಾಟೋ, ತೆಂಗು ಮುಂತಾದ, ಬೆಳೆ ಗಳಿಗೆ ರೈತರಿಗೆ ಸಕಾಲದಲ್ಲಿ ಬೆಂಬಲ ಬೆಲೆ ದೊರಕುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ಕೃಷಿ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

       ಈ ಸಂಬಂಧ ಕೇಂದ್ರದ ಸಚಿವರನ್ನು ಭೇಟಿ ಮಾಡಲಾಗಿದೆ. ಸಕಾಲಕ್ಕೆ ಬೆಂಬಲ ಬೆಲೆ ಪ್ರಕಟಿಸುವಂತೆ ಕೇಂದ್ರದ ಗಮನ ಸೆಳೆಯುವಂತೆ ಕೃಷಿ ಸಚಿವರು ಸಂಸದರುಗಳಿಗೆ ಮನವಿ ಮಾಡಿದರು.

       ಸಭೆಯಲ್ಲಿ ಸಂಸದರಾದ ಸಂಗಣ್ಣ, ಪ್ರಕಾಶ್ ಹುಕ್ಕೇರಿ, ಪಿ.ಸಿ.ಮೋಹನ್, ಗದ್ದಿ ಗೌಡ ರ್, ಆಸ್ಕರ್ ಫರ್ನಾಂಡಿಸ್, ಕೆ.ಸಿ.ರಾಮಮೂರ್ತಿ, ಜಿ. ಇ. ಚಂದ್ರಶೇಖರ್, ಡಾ: ಎಲ್. ಹನುಮಂತಯ್ಯ, ಭಗವಂತ ಕೌಲ್, ಕುಪೇಂದ್ರ ರೆಡ್ಡಿ, ಡಿ.ಕೆ.ಸುರೇಶ್, ಡಿ.ಎನ್. ಚಂದ್ರಪ್ಪ, ಎಸ್.ಪಿ, ಮುದ್ದ ಹನುಮೇ ಗೌಡ, ಪ್ರಹ್ಲಾದ್ ಜೋಶಿ, ಎಲ್.ಆರ್.ಶಿವರಾಮೇಗೌಡ, ಡಿ.ಎಸ್.ಉಗ್ರಪ್ಪ, ಬಿ.ವಿ.ನಾಯಕ್, ಜಿ.ಎಂ. ಸಿದ್ದೇಶ್ವರ್ ಭಾಗವಹಿಸಿದ್ದರು.

       ಸಚಿವರುಗಳಾದ ಆರ್.ವಿ.ದೇಶಪಾಂಡೆ, ಡಿ.ಕೆ. ಶಿವಕುಮಾರ್, ಕೃಷ್ಣ ಬೈರೇಗೌಡ, ಕೆ.ಜೆ.ಜಾರ್ಜ್, ಶಿವಶಂಕರರೆಡ್ಡಿ, ರಮೇಶ್ ಜಾರಕಿಹೊಳಿ, ನಾಡಗೌಡ, ವೆಂಕಟರಮಣಪ್ಪ, ಡಿ.ಸಿ.ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap