ರಾಯಚೂರು:
ಶಾಲೆಯಲ್ಲಿ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಸ್ಕಿ ತಾಲೂಕಿನ ಬಸಾಪೂರ ಗ್ರಾಮದಲ್ಲಿ ನಡೆದಿದೆ.
ಘಟನೆ ವಿವರ:
ಕವಿತಾಳ ಪಟ್ಟಣ ಸಮೀಪದ ಬಸಾಪೂರ ಗ್ರಾಮದಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅನಿಲ್ ಕುಮಾರ ಎಂಬ ವಿದ್ಯಾರ್ಥಿ 6 ನೇ ತರಗತಿ ವ್ಯಾಸಂಗ ಮಾಡುತ್ತಿದ್ದು, ಎಂದಿನಂತೆ ಇಂದು ಬೆಳಗ್ಗೆ ಶಾಲೆಗೆ ಹೋಗಿದ್ದಾನೆ. ರಾತ್ರಿ ಸುರಿದ ಮಳೆಯಿಂದ ಶಾಲೆಯ ಮೇಲ್ಬಾಗದಲ್ಲಿ ನಿಂತ ನೀರನ್ನು ಕಂಡ ವಿದ್ಯಾರ್ಥಿಯು ನೀರನ್ನು ಕೆಳಗೆ ಎಳೆದು, ಸ್ವಚ್ಚಗೊಳಿಸಲು ಹೋಗಿ ಹತ್ತಿರದಲ್ಲೇ ಇದ್ದ ವಿದ್ಯುತ್ ತಂತಿಗೆ ಕೈತಾಗಿಸಿದ್ದಾನೆ. ಇದರಿಂದಾಗಿ ಅವಘಡ ಸಂಭವಿಸಿದ್ದು ವಿದ್ಯಾರ್ಥಿ ಅಸ್ವಸ್ಥನಾದ ಕಾರಣ ತಕ್ಷಣ ಅಲ್ಲಿ ನೆರೆದಿದ್ದ ಜನ ಆತನನ್ನು ಹತ್ತಿರದ ಕವಿತಾಳ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದರಾದರೂ ಯಾವುದೇ ಪ್ರಯೋಜನವಾಗದೇ ಮೃತಪಟ್ಟಿದ್ದಾನೆ
ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಶಾಲೆಯ ಮೇಲ್ಬಾಗಕ್ಕೆ ಹೊಂದಿಕೊಂಡು ಅಡ್ಡವಾಗಿ ಎಳೆಯಲಾದ ವಿದ್ಯುತ್ ತಂತಿಗಳ ಬಗ್ಗೆ ನಿರ್ಲಕ್ಷ ವಹಿಸಿದ ಮುಖ್ಯೋಪಾಧ್ಯಾಯ ಹಾಗೂ ಕೆಇಬಿ ಅಧಿಕಾರಿಗಳ ಬೇಜವಾಬ್ದಾರಿತನವೇ ಘಟನೆಗೆ ಕಾರಣವಾಗಿದೆ ಎಂದು ಸ್ಥಳಿಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ವಿದ್ಯಾರ್ಥಿಯ ಸಾವಿನಿಂದಾಗಿ ಆತನ ಮನೆಯಲ್ಲಿ ನೀರವ ಮೌನ ಅವರಿಸಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ